ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರಯಾಣಿಕರಂತೆ ನಟಿಸಿ ಆಟೋ ಚಾಲಕನಿಗೆ ಇರಿತ

Srinivasa Murthy VN
Updated On : 20 Mar 2013, 11:45 am

ಕ.ಪ್ರ.ವಾರ್ತೆ ಹಾಸನ ಮಾ. 20
ದುರ್ಷ್ಕಮಿಗಳು ಪ್ರಯಾಣಿಕರಂತೆ ನಟಿಸಿ ಆಟೋ ಚಾಲಕನ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ ಬುಧವಾರ ನಡೆದಿದೆ. ನಗರದ ಹುಣಸೇಕೆರೆಯ ಚಂದ್ರಶೇಖರ್ ಹಾಗೂ ಮಹದೇವಿ ಎಂಬುವರ ಪುತ್ರ ಸಂತೋಷ್ (29) ಇರಿತಕ್ಕೆ ಒಳಗಾದವರು. ಇವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಿಗ್ಗೆ 7.30ರಲ್ಲಿ ಸಂತೋಷ್ ಆಟೋ ಬಾಡಿಗೆಗಾಗಿ ಮನೆಯಿಂದ ಹೊರಟ ಸಲ್ಪ ದೂರದಲ್ಲಿಯೇ ಮೂವರು ಪ್ರಯಾಣಿಕರಂತೆ ಆಟೋ ಏರಿದರು. ನಂತರ ಹೈಟೆಕ್ ಬಸ್ ನಿಲ್ದಾಣ ಬಳಿ ಹೋಗುವಂತೆ ಸೂಚಿಸಿದ್ದಾರೆ.  ಮತ್ತೆ ಬಸ್‌ನಿಲ್ದಾಣ ಎದುರು ಇರುವ ಹೌಸಿಂಗ್ ಬೋರ್ಡ್ ಒಳಗೆ ಆಟೋವನ್ನು ಕರೆದೊಯ್ದಿದ್ದಾರೆ. ಆ ಸಂದರ್ಭದಲ್ಲಿ ಬಾಡಿಗೆ ಹೆಚ್ಚಿಗೆ ನೀಡುವುದಾಗಿ ದುರ್ಷ್ಕರ್ಮಿಗಳು ಹೇಳಿ ಹಣವನ್ನು ನೀಡಿದ್ದಾರೆ.
ನಂತರ ಆಟೋ ನಿಲ್ಲಿಸುವಂತೆ ಸೂಚಿಸಿ ಹಿಂದಿನಿಂದ ಇಬ್ಬರು ಸಂತೋಷ್ ಕೈಗಳನ್ನು ಹಿಡಿದಿಟ್ಟುಕೊಂಡು ಮತ್ತೊಬ್ಬ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ನಂತರ ಸಂತೋಷ ಕೂಡಲೇ ತಮ್ಮ ಸಂಬಂಧಿಕರಿಗೆ ಮೊಬೈಲ್ ಮೂಲಕ ವಿಷಯ ತಿಳಿಸಿ, ತಾವೇ ಆಟೋವನ್ನು ಆಸ್ಪತ್ರೆಯವರೆಗೂ ಚಾಲಾಯಿಸಿಕೊಡು ಬಂದು, ಚಿಕಿತ್ಸೆಗೆ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯವರು ಕೂಡಲೇ ಅವರನ್ನು ದಾಖಲಿಸಿಕೊಂಡು ಸರಿಯಾದ ಸಮಯಕ್ಕೆ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ವಿಷಯ ತಿಳಿದ ಸಹಾಯಕ ಜಿಲ್ಲಾ ಎಸ್ಪಿ ಯಡಾ ಮಾರ್ಟಿನ್, ಇನ್ಸ್‌ಪೆಕ್ಟರ್ ಸಂಜೀವೇಗೌಡ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸಿದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement