ಅತಿ ಭ್ರಷ್ಟ ಬಿಜೆಪಿ ಪಕ್ಷವನ್ನುಕಿತ್ತೊಗೆಯಿರಿ: ವೀರರಾಜು
ಕ.ಪ್ರ ವಾರ್ತೆ ರಾಮನಾಥಪುರ ಮಾ.22
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಹಿಂದುಳಿದ ವರ್ಗ, ದೀನ ದಲಿತರ ಜನ ಸಮುದಾಯ ಗುರುತಿಸಿ ಮೇಲೆತ್ತುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ಕೊಣನೂರು ಎಸ್.ಜೆ.ವೀರರಾಜು ತಿಳಿಸಿದರು.
ಕೊಣನೂರಿನಲ್ಲಿ ಇತ್ತೀಚೆಗೆ ನಡೆದ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಬೇಕು. ಈ ನಿಟ್ಟಿನಲ್ಲಿ ಮತದಾರರರು ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಶಾಸಕ ಎ.ಮಂಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ದೀನ-ದಲಿತರ, ಬಡ ವಿದ್ಯಾರ್ಥಿಗಳ, ಸ್ತ್ರೀ ಶಕ್ತಿ ಸಂಘಗಳ, ಜನಸಾಮಾನ್ಯರ ಬಜೆಟ್ ಮಂಡಿಸಿದ್ದು, ದೇಶದಲ್ಲಿ ಕಾಂಗ್ರೆಸ್ ಪಕ್ಷದತ್ತ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ ಎಂದರು.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಕ್ಷರ ದಾಸೋಹ, ಸ್ತ್ರೀ ಶಕ್ತಿ ಸಂಘಗಳು, ಶಾಲಾ ಕಾಲೇಜುಗಳು, ಅಭಿವೃದ್ಧಿ ಕೆಲಸ ಮಾಡಿದೆ ಎಂದರು. ಕಾಂಗ್ರೆಸ್ ಹಿರಿಯ ಮುಖಂಡ ಬಾನುಗುಂದಿ ಪುಟ್ಟೇಗೌಡ, ಮಾಗೋಡು ಬಸವರಾಜು, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಳಿಗೆರೆ ಬೈರೇಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಮೈಸೂರು ಸೇವಾದಳದ ಮುಖಂಡ ಕೃಷ್ಣಮೂರ್ತಿ ಮುಂತಾದವರು ಮಾತನಾಡಿದರು.ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ಮಾಜಿ ಸದಸ್ಯ ಶ್ರೀನಿವಾಸ ಮೂರ್ತಿ, ವಾಸುಮಾಸ್ತರ್, ಮಹಿಳಾ ಅಧ್ಯಕ್ಷೆ ಎಸ್.ಕೆ. ರೂಪಾ, ರಾಮನಾಥಪುರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಜಿ.ಸಿ.ಮಂಜೇಗೌಡ, ಮಲ್ಲೇಶ್, ಕಾವೇರಿ ನೀರಾವರಿ ನಿಗಮದ ಅಧ್ಯಕ್ಷ ಚೌಡೇಗೌಡ ಮತ್ತಿತರರು ಉಪಸ್ಥಿತರಿದ್ದರು.