ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚರ್ಚಿಸದೆ ಖಾಸಗಿ ವಿವಿಗೆ ಅನುಮೋದನೆ

Srinivasa Murthy VN
Updated On : 22 Mar 2013, 10:47 am

ಕ.ಪ್ರ.ವಾರ್ತೆ ಮೈಸೂರು ಮಾ.22
ಆಡಳಿತರೂಢ ಬಿಜೆಪಿ ಸರ್ಕಾರವು ಅರ್ಧ ತಾಸು ಚರ್ಚಿಸದೆ 20 ಖಾಸಗಿ ವಿವಿ ಸ್ಥಾಪನೆಗೆ ಅನುಮೋದನೆ ನೀಡಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಜಿ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್ ಆಕ್ಷೇಪ ವ್ಯಕ್ತಪಡಿಸಿದರು.
ಶುಕ್ರವಾರ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಯುವರಾಜ ಕಾಲೇಜು, ಸಮಾನವಕಾಶಗಳ ಕೇಂದ್ರ ಹಾಗೂ ಜ್ಞಾನವಾಹಿನಿ ಪಠ್ಯೇತರ ಚಟುವಟಿಕೆಗಳ ಸಹಯೋಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಉನ್ನತ ಶಿಕ್ಷಣವು ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ಬೆಳವಣಿಗೆಗೆ ಪೂರಕ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಖಾಸಗಿ ವಿವಿ ಸ್ಥಾಪನೆ ಬಗ್ಗೆ ಪುನರ್ ಪರಿಶೀಲಿಸಲಿದೆ. ವಿಧಾನಸಭೆ ಅಧಿವೇಶನದಲ್ಲೆ ಹೆಚ್ಚು ಚರ್ಚೆ ನಡೆಯದೆ ಅನುಮೋದನೆ ನೀಡಿದ್ದು ದುರದೃಷ್ಟಕರ. ಕೆ.ಆರ್. ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಹಣ್ಣು ಇಟ್ಟವರಂತೆ ಒಪ್ಪಿಗೆ ನೀಡಿದೆ.
ಖಾಸಗಿ ವಿವಿಗಳಿಂದ ವಿದ್ಯಾರ್ಥಿಗಳ ಮೇಲೆ ಆಗಬಹುದಾದ ನೇರ ಪರಿಣಾಮದ ಬಗ್ಗೆ ಈ ಸರ್ಕಾರ ಕಿಂಚಿತ್ತು ಯೋಚನೆ ಮಾಡಲಿಲ್ಲ ಎಂದು ಅವರು ಕಿಡಿಕಾರಿದರು.
ಖಾಸಗಿ ವಿವಿ ಸ್ಥಾಪನೆ ಮಾಡುವವರು ಧರ್ಮ ಪ್ರವರ್ತಕರಲ್ಲ. ಬದಲಾಗಿ ನೂರರಿಂದ ಇನ್ನೂರು ಕೋಟಿ ಬಂಡವಾಳವನ್ನು ಶಿಕ್ಷಣ ಕ್ಷೇತ್ರದಲ್ಲಿ ಹೂಡಿ ವ್ಯಾಪಾರಿಕರಣ ಮಾಡಲು ಹೊರಟಿರುವ ಶ್ರೀಮಂತರು. ಇಲ್ಲಿ ಬಡವರಿಗೆ ಸೀಟು ಸಿಗುವುದು ಇರಲಿ, ಮಧ್ಯಮ ವರ್ಗದ ಮಕ್ಕಳು ಶುಲ್ಕ ಕೊಟ್ಟು ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ಹೂಡಿದ ಬಂಡವಾಳ ಹಿಂಪಡೆಯಲು ತಮ್ಮದೇ ಆದ ದಾರಿ ಹಿಡಿಯುತ್ತಾರೆ. ಹೀಗಿರುವಾಗ ಸರ್ಕಾರ ಷರತ್ತುರಹಿತ ಒಪ್ಪಿಗೆ ಕೊಟ್ಟಿದ್ದು ನಾಚಿಕೆಗೇಡು ಎಂದರು.
ಧ್ವನಿಯೇ ಸತ್ತು ಹೋಗಿದೆ: ಸಮಾಜದ ಪರಿವರ್ತನೆಗೆ ಶಿಕ್ಷಣ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ಶಿಕ್ಷಣ ಇಂದು ವ್ಯಾಪಾರಿಕರಣವಾಗುತ್ತಿದೆ. ಖಾಸಗಿ ವಿವಿ ಸ್ಥಾಪನೆ ವಿಚಾರ ಜೀವ ಪಡೆದುಕೊಂಡಾಗ ಎಲ್ಲರೂ ವಿರೋಧಿಸಬೇಕಿತ್ತು. ಆದರೆ, ಇಂದು ವಿರೋಧದ ಧ್ವನಿಯೇ ಸತ್ತು ಹೋಗಿದೆ. ಒಂದು ಗಂಭೀರ ವಿಚಾರವನ್ನು ಕನಿಷ್ಠ ಎರಡು ತಿಂಗಳ ಮಟ್ಟಿಗೆ ಚರ್ಚೆಗೆ ತೆಗೆದುಕೊಂಡು ತಾರ್ಕಿಕ ಅಂತ್ಯ ಕಾಣಿಸಬೇಕು. ಅಲ್ಲದೇ ವಿವಿಗಳಿಗೆ ಕುಲಪತಿ ನೇಮಿಸುವಾಗ ಅನುಸರಿಸಬೇಕಾದ ಮಾನದಂಡದ ಅರಿವು ಸರ್ಕಾರಕ್ಕಿರಬೇಕು. ಇದ್ಯಾವುದನ್ನು ಇಂದಿನ ಸರ್ಕಾರ ಪಾಲಿಸಿಲ್ಲ ಎಂದು ಅವರು ಟೀಕಿಸಿದರು.
ಪ್ರಾಂಶುಪಾಲೆ ಪ್ರೊ.ಸ.ನ. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಡಾ. ಮಹಾಜಬೀನ್, ಸಮಾನವಕಾಶಗಳ ಕೇಂದ್ರ ವೀಕ್ಷಕ ಪ್ರೊ.ಡಿ.ಕೆ. ಶ್ರೀನಿವಾಸ, ಡಾ. ರೂಬಿ ಸೆಲೆಸ್ಟಿನಾ, ಡಾ.ಆರ್. ಗಣೇಶ್ ಇದ್ದರು.

ನಾಳೆ ಮಾನಸ ಕೀಲು ಮೂಳೆ ಆಸ್ಪತ್ರೆ ಉದ್ಘಾಟನೆ
ಕ.ಪ್ರ.ವಾರ್ತೆ ಮೈಸೂರು  ಮಾ.22

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಮೂಳೆತಜ್ಞ ಡಾ.ಟಿ.ಮಂಜುನಾಥ್ ಅವರು ನಿರ್ಮಿಸಿರುವ ಮಾನಸ ಕೀಲು ಮೂಳೆ ಆಸ್ಪತ್ರೆಯು ಮಾ.24 ರಂದು ಉದ್ಘಾಟನೆಯಾಗಲಿದೆ.
ಅಂದು ಬೆಳಗ್ಗೆ 10.30 ಕ್ಕೆ ಬೋಗಾದಿ ರಸ್ತೆಯಲ್ಲಿನ ಆಯ್ಬಿಳಿ ಇರುವ ಈ ನೂತನ ಆಸ್ಪತ್ರೆಯನ್ನು ಜಯದೇವ ಹೃದ್ರೋಗಗಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಉದ್ಘಾಟಿಸುವರು ಎಂದು ಡಾ.ಮಂಜುನಾಥ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.ಆಸ್ಪತ್ರೆ ಮುಂಭಾಗದಲ್ಲಿನ ವಾಣಿಜ್ಯ ಮಳಿಗೆಯನ್ನು ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಹೊರರೋಗಿಗಳ ವಿಭಾಗವನ್ನು ಶಾಸಕ ಸಾ.ರಾ. ಮಹೇಶ್, ವಾರ್ಡ್ಗಳನ್ನು ಮಾಜಿ ಮೇಯರ್ ವಾಸು, ಕ್ಷಕಿರಣ ವಿಭಾಗವನ್ನು ಎಂಡಿಎ ಅಧ್ಯಕ್ಷ ಎಲ್.ನಾಗೇಂದ್ರ ಹಾಗೂ ಶಸ್ತ್ರಚಿಕಿತ್ಸೆ ವಿಭಾಗವನ್ನು ಖ್ಯಾತತಜ್ಞ ಡಾ.ರವೀಂದ್ರನಾಥ್ ಉದ್ಘಾಟಿಸುವರು ಎಂದು ಅವರು ವಿವರಿಸಿದರು.ರಾಜಯೋಗಿನಿ ಬಿ.ಕೆ. ಲಕ್ಷ್ಮೀಜಿ ಅಧ್ಯಕ್ಷತೆ ವಹಿಸುವರು. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹಾಗೂ ಕೆಎಸ್ಎಫ್ಸಿ ಪ್ರಧಾನ ವ್ಯವಸ್ಥಾಪಕ ಜಿ.ನಾಗರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.ಹಿರಿಯ ಪುತ್ರಿ ದಿವಂಗತ ಡಾ.ಮಾನಸ ಸ್ಮರಣೆಗಾಗಿ ನಿರ್ಮಿಸಿರುವ ಈ ಆಸ್ಪತ್ರೆಯಲ್ಲಿ ನಿರ್ಗತಿಕರಿಗೆ ಉಚಿತವಾಗಿ, ಬಡವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಉದ್ದೇಶವಿದೆ ಎಂದ ಡಾ.ಮಂಜುನಾಥ್, ವಾಣಿಜ್ಯ ಮಳಿಗೆಯಲ್ಲಿನ ಬಾಡಿಗೆಯನ್ನು ಬಡರೋಗಿಗಳ ಸೇವೆಗೆ ವಿನಯೋಗಿಸುವುದಾಗಿ ತಿಳಿಸಿದರು.  ನಾಗಭೂಷಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement