ಪಪಂ ಗದ್ದುಗೆಗಾಗಿ ಕಾಂಗ್ರೆಸ್, ಜೆಡಿಎಸ್ ಗುದ್ದಾಟ
-ಅ.ರಾ.ಸುಬ್ಬರಾವ್
ಕ.ಪ್ರ ವಾರ್ತೆ ಅರಕಲಗೂಡು ಮಾ.22
ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆ ಮುಗಿದಿದ್ದು, 15 ಸ್ಥಾನ ಉಳ್ಳ ಪಂಚಾಯತಿಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಇಲ್ಲ. ಆದರೆ, ಕಾಂಗ್ರೆಸ್ ಕಳೆದ ಬಾರಿಗಿಂತ ಒಂದು ಸ್ಥಾನ ಹೆಚ್ಚಿಸಿಕೊಂಡು 7 ಸದಸ್ಯರ ಬಲ ಹೊಂದಿದ್ದರೆ, ಜೆಡಿಎಸ್ ಎರಡು ಸ್ಥಾನ ಕಳೆದುಕೊಂಡು 5 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಈ ನಡುವೆ ಪೊಟ್ಯಾಟೋ ಕ್ಲಬ್ನ ಕೃಪಾಪೋಷಿತ ಮೂವರು ಪಕ್ಷೇತರ ಸದಸ್ಯರು ಗೆಲವು ಸಾಧಿಸಿದ್ದಾರೆ. ಈ ಮೂವರು ಸದಸ್ಯರ ಗೆಲವು ಪಟ್ಟಣ ಪಂಚಾಯಿತಿಯನ್ನು ಅತಂತ್ರ ಸ್ಥಿತಿಗೆ ತರಲು ಕಾರಣವಾಗಿದೆ. ಅರ್ಥಾತ್ 7 ಸ್ಥಾನ ಹೊಂದಿರುವ ಕಾಂಗ್ರೆಸ್ ಇನ್ನೊಬ್ಬ ಸದಸ್ಯನ ಬೆಂಬಲ ಪಡೆಯಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಏಳು ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ಗೆ ತನ್ನ ಶಾಸಕರ ಮತವೂ ಇರುವುದರಿಂದ ಅಧಿಕಾರದ ಗದ್ದುಗೆ ಏರುತ್ತದೆಂಬ ಲೆಕ್ಕಾಚಾರ ನಿನ್ನೆ -ಮೊನ್ನೆಯ ವರೆಗೂ ಇತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಶಾಸಕರ ಮತ ಸದ್ಯಕ್ಕೆ ಚಲಾವಣೆ ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ತನ್ನ ಎದುರಾಳಿ ಜೆಡಿಎಸ್ ಸದಸ್ಯ ಇಲ್ಲವೇ ಪಕ್ಷೇತರರೊಬ್ಬರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.
ಪಕ್ಷೇತರರಾಗಿ ಪೊಟ್ಯಾಟೋ ಕೃಪಾಪೋಷಿತರಾಗಿರುವ ವಾಟಾಳ್ ರಮೇಶ್ ಕಾಂಗ್ರೆಸ್ ಟಿಕೆಟ್ ಬಸಿದ್ದರು.ಆದರೆ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸುವ ವೇಳೆ ಪಕ್ಷೇತರ ಎಂದು ನಮೂದಿಸಿದ್ದರಿಂದ ಕಾಂಗ್ರೆಸ್ ಬಿ ಫಾರಂ ಅನ್ನು ಬೇರೊಬ್ಬರಿಗೆ ನೀಡಬೇಕಾಯಿತು. ಹೀಗಾಗಿ ರಮೇಶ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ನಲ್ಲಿ ಇನ್ನೂ ಜೀವಂತವಾಗಿದೆ. ಈ ಮದ್ಯೆ ಜೆಡಿಎಸ್, ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಪೊಟ್ಯಾಟೋ ಎಂಬ ಪಕ್ಷೇತರ ಸಂಘಟನೆ ಮುಂದಿನ ರಾಜಕೀಯ ದಿನಗಳಲ್ಲಿ ಮಗ್ಗಲು ಮುಳ್ಳಾಗುವ ಸಾಧ್ಯತೆ ಗಮನದಲ್ಲಿರಿಸಿ,ಅದನ್ನು ದಮನಗೊಳಿಸುವ ನಿಟ್ಟಿನಲ್ಲಿ ಲೆಕ್ಕಾಚಾರ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ಮೈತ್ರಿ ನಡೆದು,ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಹಂಚಿಕೊಂಡರೂ ಅಚ್ಚರಿ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಎಲ್ಲದರ ನಡುವೆ ಪಕ್ಷೇತರರ ಬೆಂಬಲದ ಅನಿವಾರ್ಯತೆ ಗುಟ್ಟು ಅರಿತಿರುವ ಪೊಟ್ಯಾಟೋ ಕ್ಲಬ್ ತಾನೂ ಒಂದು ಅಧಿಕಾರದ ಸ್ಥಾನ ಗಳಿಸುವ ನಿಟ್ಟಿನಲ್ಲಿ ಲೆಕ್ಕಾಚಾರ ನಡೆಸಿದೆ. ಅದಕ್ಕಾಗಿ ಪಕ್ಷೇತರರು ಕುದುರೆ ವ್ಯಾಪಾರಕ್ಕೆ ಬಲಿಯಾಗದಂತೆ ಎಚ್ಚರ ವಹಿಸಿ. ಈಗಾಗಲೇ ಹೊರ ಜಿಲ್ಲೆಗಳ ಪ್ರವಾಸಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ. ಈ ನಡುವೆ ನ್ಯಾಯಾಲಯದಲ್ಲಿ ಇನ್ನೂ ಮೀಸಲಾತಿ ನಿಗದಿ ಕುರಿತು ತೀರ್ಪು ಹೊರಬರಬೇಕಿರುವುದರಿಂದ ಅಲ್ಲಿಯವರೆಗೂ ಈ ಪಕ್ಷೇತರರ ಯಾತ್ರೆ ಮುಂದುವರೆಯುವುದು ಅನಿವಾರ್ಯ.