'ಪರೀಕ್ಷಾ ವೇಳೆ ವಿದ್ಯುತ್ ಕಡಿತ ಇಲ್ಲ'
ಕ.ಪ್ರ ವಾರ್ತೆ ಹಾಸನ ಮಾ.22
ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಮುಗಿಯುವ ವರೆಗೆ ಸಂಜೆ 6ರಿಂದ ರಾತ್ರಿ 10ಗಂಟೆ ಯವರೆಗೆ ವಿದ್ಯುತ್ ಕಡಿತಗೊಳಿಸುವುದಿಲ್ಲ ಎಂದು ಚೆಸ್ಕಾಂ ಮುಖ್ಯ ಎಂಜಿನಿಯರ್ ವೇಣುಗೋಪಾಲ ಭರವಸೆ ನೀಡಿದ್ದಾರೆ.
ತಾಲೂಕಿನಲ್ಲಿ ತೀವ್ರ ವಿದ್ಯುತ್ ಕಡಿತ ಗೊಳಿಸುತ್ತಿರುವ ವಿರುದ್ದ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಂಘ ಸಂಸ್ಥೆ ಮುಖಂಡರೊಂದಿಗೆ ಚರ್ಚೆ ನಡೆಸಲಾಯಿತು.
ಅಧಿಕಾರಿಗಳು ಮಾತನಾಡಿ, ಉತ್ಪಾದನಾ ಕೇಂದ್ರಗಳಿಗೆ ಕಲ್ಲಿದ್ದಲು ಸರಬರಾಜಿನಲ್ಲಿ ಆಗಿರುವ ತೊಂದರೆಯಿಂದಾಗಿ ಉತ್ಪಾದನೆ ಕುಂಠಿತಗೊಂಡಿದೆ. ಈ ನಿಟ್ಟಿನಲ್ಲಿ ರಾತ್ರಿ ವೇಳೆ ಎರಡು ಗಂಟೆಗಳ ಅವಧಿಗೆ ಪವರ್ಕಟ್ ಮಾಡಲಾಗುತ್ತಿದೆ ಎಂದರು.
ವಿದ್ಯಾರ್ಥಿ ವರ್ಗದ ಪರೀಕ್ಷೆ ಮುಗಿಯುವ ವರೆಗೆ ರಾತ್ರಿ ವೇಳೆ ವಿದ್ಯುತ್ಕಡಿತ ಗೊಳಿಸದೆ ಇರುವ ಹಾಗೆ ಕ್ರಮ ತೆಗೆದು ಕೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕಾಗಿ ಇಲಾಖೆಯ ಮೇಲಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವು ದಾಗಿಯೂ ತಿಳಿಸಿದರು.
ಸಭೆಯ ನಂತರ ನಾನಾ ಸಂಘ-ಸಂಸ್ಥೆಗಳ ಮುಖಂಡರು ಮಾತನಾಡಿ, ಭರವಸೆ ಕಾರ್ಯ ರೂಪಕ್ಕೆ ತರದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಚೆಸ್ಕಾಂ ಕಾರ್ಯಕಾರಿ ಎಂಜಿನಿಯರ್ ರಮೇಶ್, ಚಲುಪತಿ ರೆಡ್ಡಿ ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
ಕಾಂತಮ್ಮ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಕ.ಪ್ರ ವಾರ್ತೆ ಹಾಸನ ಮಾ.22
ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಕಾನೂನು ಅರಿವು ಸಂಘ, ಕಲಾ ಸಂಘ ಮತ್ತು ವಿದ್ಯಾರ್ಥಿ ಸಂಘಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಹೆಣ್ಣುಮಕ್ಕಳ ಆಸ್ತಿಯ ಹಕ್ಕಿನ ಬಗ್ಗೆ ವಕೀಲ ನಟರಾಜ್ ಮಾತನಾಡಿ, 1994ರ ಉತ್ತರಾಧಿಕಾರಿ ಹಕ್ಕು ಕಾಯ್ದೆ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗಿದ್ದ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಮಹಿಳೆಯರಿಗೂ ಸಮಪಾಲು ಮಾಡಿ ಜೀವನ ಭದ್ರತೆ ಒದಗಿಸಿತು ಎಂದು ತಿಳಿಸಿದರು. ವಕೀಲ ಹರೀಶ್ಬಾಬು ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆ ಮಾಡಲು ಜನರ ದೃಷ್ಟಿಕೋನ ಬದಲಾಗಬೇಕೆಂದರು. ಸಮಾರಂಭದಲ್ಲಿ ಮಾರುತಿ ಡೈರಿ ಫಾರಂನ ಒಡತಿ ಪ್ರತಿಭಾ ಸನ್ಮಾನ ಸ್ವೀಕರಿಸಿ ತಮ್ಮ ಶ್ರಮ ಹಾಗೂ ಸಾಧನೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಜೆ.ಶೈಲಜಾಕುಮಾರಿ, ಮಹಿಳಾ ದಿನಾಚರಣೆಯ ಮಹತ್ವ ಹಾಗೂ ಆಕೆ ಎದುರಿಸಬೇಕಾದ ಸಮಸ್ಯೆ, ದೌರ್ಜನ್ಯ ಕುರಿತು ಮಾತನಾಡಿದರು. ಗಾಮಿನಿ ಮತ್ತು ತಂಡದವರು ಪ್ರಾರ್ಥಿಸಿದರು. ಕನ್ನಡ ಅಧ್ಯಾಪಕ ಪ್ರೊ.ಎಸ್.ಸಿ.ಯತೀಶ್ವರ್ ಸ್ವಾಗತಿಸಿದರು. ಮಮತ ವಂದಿಸಿದರು.
'ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ'
ಕ.ಪ್ರ ವಾರ್ತೆ ಹಾಸನ ಮಾ.22
ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳ ಮನೆಗಳಿಗೆ ತಕ್ಷಣವೇ ಹಕ್ಕುಪತ್ರ ವಿತರಿಸುವಂತೆ ಕೆಜೆಪಿ ಯುವ ಮುಖಂಡ ಶ್ರೀನಗರ ಯೋಗೀಶ್ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಸ್ಲಂ ನಿವಾಸಿಗಳ ಮನೆಗಳಿಗೆ ಹಕ್ಕುಪತ್ರ ವಿತರಿಸಲು ಯೋಜನೆ ಹಾಕಿಕೊಂಡಿದ್ದು ಹಾಗೂ ಕೆಲ ತಾಲೂಕುಗಳಲ್ಲೂ ಕೂಡ ಬಡತನದಲ್ಲಿರುವ ಸ್ಲಂ ನಿವಾಸಿಗಳ ಮನೆಗಳಿಗೆ ಹಕ್ಕುಪತ್ರವನ್ನು ಆಯಾ ತಾಲೂಕಿನ ಶಾಸಕರಿಂದ ರಾಜ್ಯ ಸರ್ಕಾರ ವಿತರಿಸಲು ಮುಂದಾಗಿದೆ. ಆದರೆ, ಹಾಸನದ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಶಾಸಕರು ಅಡ್ಡಗಾಲು ಹಾಕಿರುವುದು ಮೆಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆಪಾದಿಸಿರುವ ಯೋಗೀಶ್, ಇದೊಂದು ರಾಜಕೀಯದ ಷಡ್ಯಂತ್ರ ಎಂದು ಪ್ರಕಟಣೆಯಲ್ಲಿ ಅವರು ಕಿಡಿಕಾರಿದ್ದಾರೆ.
ಈ ಸಂಬಂಧ ಸ್ಥಳೀಯ ಶಾಸಕರು ಮೌನಕ್ಕೆ ಶರಣಾಗಿರುವುದು ಬಡವರ ಬಗ್ಗೆ ಚಕಾರ ಎತ್ತದೆ ಇರುವುದು ಕಡುಬಡವರ ಮೇಲೆ ಎಷ್ಟು ಪ್ರೀತಿ ಇದೆ ಎಂಬುದನ್ನು ಇದರಿಂದ ಅರ್ಥಮಾಡಿ ಕೊಳ್ಳಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸ್ಲಂ ನಿವಾಸಿಗಳ ಮನೆಗಳಿಗೆ ಹಕ್ಕು ಪತ್ರ ಕೊಡಿಸಲು, ಅವರಿಗೆ ಎಲ್ಲಾ ರೀತಿಯ ಅವಕಾಶಗಳಿದ್ದು ಅವರು ಸುಮ್ಮನಿರುವುದು ಏಕೆ ಎಂಬುದು ಪ್ರಶ್ನಿಸುವಂತಹ ವಿಚಾರವಾಗಿದೆ ಎಂದಿರುವ ಯೋಗೀಶ್ ಬಡ ಸ್ಲಂ ನಿವಾಸಿಗಳಿಗೆ ಮಾಡುತ್ತಿರುವ ಅನ್ಯಾಯದ ಪರಮಾವಧಿ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.