ಅವೈಜ್ಞಾನಿಕ ಆಧಾರ್ಕಾರ್ಡ್ ವಿತರಣೆ : ಆಕ್ರೋಶ
ಕ.ಪ್ರವಾರ್ತೆ ಅರಸೀಕೆರೆ ಮಾ. 23
ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುತ್ತಿರುವ ಆಧಾರ್ ಕಾರ್ಡ್ ಅವೈಜ್ಞಾನಿಕ ಆಧಾರ್ ಕಾರ್ಡ್ ವಿತರಣೆ ಖಂಡಿಸಿ ರಾಜ್ಯ ಹಸಿರು ಸೇನೆ ಹಾಗೂ ರೈತ ಸಂಘದ ಮುಖಂಡರು ಅಂಚೆ ಕಚರಿಗೆ ತೆರಳಿ ಸಮಸ್ಯೆ ಪರಿಹರಿಸಲು ಹಾಗೂ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಗ್ರಾಮಾಂತರ ಪ್ರದೇಶದ ದೂರದ ಊರುಗಳಿಂದ ಆಧಾರ್ ಕಾರ್ಡ್ ಪಡೆಯಲು ಬರುವ ಜನಸಾಮಾನ್ಯರು ಹಿಂದಿನ ದಿನವೇ ಬಂದು ರಾತ್ರಿಯಿಂದಲೇ ಅಂಚೆ ಇಲಾಖೆ ಬಳಿ ಸಾಲಾಗಿ ನಿಂತು ಆಧಾರ್ ಕಾರ್ಡ್ ಅರ್ಜಿ ಸಿಗದೇ ತಾಲೂಕು ಆಡಳಿತವನ್ನು ಶಪಿಸಿಕೊಂಡು ಹೋಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸದೆ ರೈತಾಪಿ ವರ್ಗದವರ, ಜನಸಾಮಾನ್ಯರ ದೈನಂದಿನ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಹಸಿರುಸೇನೆ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜ್ ಕಿಡಿಕಾರಿದರು.
ದಿನಕ್ಕೆ ಕೇವಲ 60 ಜನರಿಗೆ ಮಾತ್ರ ಆಧಾರ್ ಕಾರ್ಡ್ ಅರ್ಜಿಯನ್ನು ವಿತರಿಸುತ್ತಿದ್ದು, ತಾಲೂಕಿನಲ್ಲಿ ಎರಡೂವರೆ ಲಕ್ಷ ಜನಸಂಖ್ಯೆಯಿದ್ದು ಹಬ್ಬ, ಹರಿದಿನ ಹಾಗೂ ಸರ್ಕಾರಿ ರಜಾದಿನ ಹೊರತುಪಡಿಸಿ ಈ ರೀತಿ ದಿನಕ್ಕೆ 60 ಅರ್ಜಿ ವಿತರಿಸುವುದೇ ಆದರೆ ತಾಲೂಕಿನ ಎಲ್ಲಾ ಜನರಿಗೂ ವಿತರಿಸಲು ಸುಮಾರು 20 ವರ್ಷ ಬೇಕಾಗುತ್ತದೆ. ಇಂತಹ ಅವೈಜ್ಞಾನಿಕ ಕಾರ್ಯಕ್ರಮ ಸರ್ಕಾರ ರೂಪಿಸಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ರೈತ ಮುಖಂಡ ಅಣ್ಣಾಯಕನಹಳ್ಳಿ ಶಿವಮೂರ್ತಿ ಮಾತನಾಡಿ, ಸರ್ಕಾರ ತಕ್ಷಣವೇ ಎಲ್ಲಾ ಗ್ರಾಪಂ ವ್ಯಾಪ್ತಿ ಹಾಗೂ ಅಂಚೆಕಚೇರಿಯಲ್ಲಿ ಆಧಾರ್ ಕಾರ್ಡ್ ಅರ್ಜಿ ವಿತರಿಸಬೇಕು. ಅಲ್ಲದೇ ಪಟ್ಟಣದ ಎಲ್ಲಾ ಅಂಚೆ ಕಚೇರಿಗಳಲ್ಲಿ ಆಧಾರ್ಕಾರ್ಡ್ ಅರ್ಜಿ ವಿತರಿಸಲು ಪ್ರತ್ಯೇಕ ಶಾಖೆ ತೆರೆಯುವ ಮೂಲಕ ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಆಧಾರ್ ಕಾರ್ಡ್ ವಿತರಣೆಯ ಅವ್ಯವಸ್ಥೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಖಾಸಗಿ ಕಂಪನಿಯೊಂದಿಗೆ ಅಧಿಕಾರಿಗಳು ಶಾಮೀಲಾಗಿರುವಂತೆ ಕಂಡುಬರುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.