ಬೈಕ್, ಮೊಬೈಲ್ ಇಲ್ಲದೇ ಕಾಲೇಜಿಗೆ ಹೋಗಲ್ಲ ಎಂಬ ವಾತಾವರಣ ಸೃಷ್ಟಿ: ನ್ಯಾ. ಹಾಲಪ್ಪ ವಿಷಾದ
ಕ.ಪ್ರವಾರ್ತೆ ಹಾಸನ ಮಾ 23
ಇತ್ತೀಚೆಗೆ ವಿದ್ಯಾರ್ಥಿಗಳು ಬೈಕ್ ಹಾಗೂ ಮೊಬೈಲ್ ಇಲ್ಲದೆ ಕಾಲೇಜಿಗೇ ಹೋಗುವುದಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ಇಲ್ಲಿನ ಎರಡನೇ ತ್ವರಿತಗತಿ ನ್ಯಾಯಾಲಯ ನ್ಯಾಯಾಧೀಶ ಸಿ. ಹಾಲಪ್ಪ ವಿಷಾದಿಸಿದರು.
ನಗರದ ಬಿಈಜಿ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ನಾನಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಚ್ಚರಿಕೆಯ ಮೊದಲ ಪಾಠ: ಯುವಕರು ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿ ವಾಹನ ಓಡಿಸುವ ಮೂಲಕ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚೆಗೆ 20 ರಿಂದ 25 ವರ್ಷ ವಯೋವುತಿಯೊಳಗಿನವರು ಹೆಚ್ಚಾಗಿ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ವಾಹನ ಕೊಡಿಸುವಾಗ ಎಚ್ಚರಿಕೆಯ ಪಾಠ ಮೊದಲು ಹೇಳಿಕೊಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಯಾವ ಸವಲತ್ತು ಸಿಗುತ್ತಿದೆ ಎಂಬುದರ ಬಗ್ಗೆ ಅರಿವೇ ಇಲ್ಲವಾಗಿದೆ. ಸರ್ಕಾರದ ಯಾವ ಯಾವ ಇಲಾಖೆಗಳು ಯಾವ ಯೋಜನೆ ಆಯೋಜಿಸಿವೆ ಎಂಬುದನ್ನು ಅರಿತು ಅದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿಯೇ ಸಕಾಲ ಎಂಬ ಯೋಜನೆ ಜಾರಿಗೆ ತಂದಿದ್ದು, ಬೇಗನೆ ಮಾಹಿತಿ ಪಡೆಯುವ ಅವಕಾಶವಿದೆ ಎಂದರು.
ವಿದ್ಯಾರ್ಥಿಗಳು ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಬಾರದು. ನಿಯಮ ಉಲ್ಲಂಘನೆಯಿಂದ ಅಪಘಾತ ಸಂಭವಿಸಲು ಕಾರಣ. ಬಹಳ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಕಿವಿ ಮಾತು ಹೇಳಿದರು.
ವಕೀಲ ಬಿ.ಚಂದ್ರಶೇಖರ್ ಮಾಹಿತಿ ಹಕ್ಕಿನ ಬಗ್ಗೆ ಮತ್ತು ವಕೀಲ ಯು.ಎಂ.ಚಿದಾನಂದ್ ಮೋಟಾರು ವಾಹನ ಕಾಯ್ದೆಯ ಬಗ್ಗೆ ಉಪನ್ಯಾಸ ನೀಡಿದರು. ವಕೀಲ ಜೆ.ಪಿ.ಲಕ್ಮನ್, ಪಿ.ನಟೇಶ್ಕುಮಾರ್, ಬಿಈಜಿ ಕಾಲೇಜಿನ ಪ್ರಾಂಶುಪಾಲ ಬಿ.ಈ.ಜಗದೀಶ್, ಸರ್ಕಾರಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರೇಖಾ ಇದ್ದರು.
ಸಾಕ್ಷರತಾ ರಥಕ್ಕೆ ಚಾಲನೆ: ಮೊದಲು ಜಿಲ್ಲಾ ವಕೀಲರ ಸಂಘದ ಬಳಿ ಬೆಳಗ್ಗೆ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಜೆ.ಎಸ್.ಸೋಮಶೇಖರ್ ಚಾಲನೆ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ವಿಶ್ವನಾಥ್ ಇದ್ದರು.