ಪ್ರತಿಭಟನೆ: ಮಹಿಳೆಯರ ವಿರುದ್ಧ ಅಶ್ಲೀಲ ಭಿತ್ತಿಪತ್ರ
ಕ.ಪ್ರ.ವಾರ್ತೆ ಅರಸೀಕೆರೆ ಮಾ 24
ಅಕ್ರಮ ಮದ್ಯ ಮಾರಾಟದ ವಿರುದ್ಧ ಪ್ರತಿಭಟನೆ ನಡೆಸಿದ ಸ್ತ್ರೀಶಕ್ತಿ ಸಂಘದ ಮಹಿಳೆಯರ ವಿರುದ್ಧ ಅಶ್ಲೀಲ ಭಿತ್ತಿಪತ್ರಗಳನ್ನು ಅಂಟಿಸಿದ್ದರಿಂದ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯಗೆ ಪ್ರಯತ್ನಿಸಿ ಸರ್ಕಾರಿ ಜೆ.ಸಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಮುದುಡಿ ಗ್ರಾಮದ ರುದ್ರೇಶ್ ಎಂಬುವವರ ಪತ್ನಿ ಲೋಲಾಕ್ಷಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಇವರು ಮಾ.21ಗುರುವಾರ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಿದ್ದರು.
ಮಾ.21ರ ರಾತ್ರಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಲೋಕೇಶ್ ಎಂಬಾತ ಈ ಬಗ್ಗೆ ಆಕೆಯೊಂದಿಗೆ ಜಗಳ ತೆಗೆದಾಗ ಮೊಹಿದ್ದೀನ್ಸಾಬೀನ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದಾಗ ಲೋಲಾಕ್ಷಿ ಜ್ಞಾನ ತಪ್ಪಿ ಕೆಳಕ್ಕೆ ಬಿದ್ದರು. ಈ ಬಗ್ಗೆ ಗಂಡಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಭಾನುವಾರ ಗ್ರಾಮದ ಅಲ್ಲಲ್ಲಿ ಸ್ತ್ರೀಶಕ್ತಿ ಸಂಘದ ಮಹಿಳೆಯರ ಬಗ್ಗೆ ಅಶ್ಲೀಲ ಭಿತ್ತಿಪತ್ರಗಳನ್ನು ಗೋಡೆಗಳಿಗೆ ಅಂಟಿಸಿರುವುದನ್ನು ಕಂಡ ಲೋಲಾಕ್ಷಿ ನೊಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದರು. ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಸುದ್ದಿ ತಿಳಿದ ಸ್ತ್ರೀಶಕ್ತಿ ಸಂಘದ ಮಹಿಳೆಯರು ಆಸ್ಪತ್ರೆಯ ಬಳಿ ಜಮಾಯಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಗಂಡಸಿ ಠಾಣಾ ಎಸ್ಐ ನೆರೆದ ಮಹಿಳೆಯರನ್ನು ಸಮಾಧಾನ ಪಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೆ ಅಹಿತಕರ ಘಟನೆಗೆ ಅವಕಾಶ ನೀಡದೆ ಗ್ರಾಮಕ್ಕೆ ಹಿಂದಿರುಗುವಂತೆ ಮನವಿ ಮಾಡಿದರು. ಹಾಗೂ ನಿಮಗೆ ಯಾರಿಂದಲಾದರೂ ತೊಂದರೆಯಾದಲ್ಲಿ ತಕ್ಷಣ ದೂರವಾಣಿ ಕರೆ ಮಾಡಿದಲ್ಲಿ ರಕ್ಷಣೆ ನೀಡುವುದರೊಂದಿಗೆ ಗ್ರಾಮದಲ್ಲಿ ಪೊಲೀಸ್ ಕಾವಲು ಹಾಕಲಾಗುವುದೆಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಹಿಳೆಯರು ಗ್ರಾಮಕ್ಕೆ ಹಿಂದಿರುಗಿದರು. ದಲಿತ ಸಂಘರ್ಷ ಸಮಿತಿ ಮುಖಂಡ ರಂಗನಾಥ್, ವೆಂಕಟೇಶ್ ಇತರರು ಇದ್ದರು.