ರಾಜಿ ಸಂಧಾನದಿಂದ ಹಲವು ಪ್ರಕರಣಗಳ ಇತ್ಯರ್ಥ
ಕನ್ನಡಪ್ರಭವಾರ್ತೆ ಅರಸೀಕೆರೆಮಾ 24
ಕಾನೂನು ಸಾಕ್ಷರತಾ ರಥಯಾತ್ರೆಯ ಸಂಚಾರಿ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ.ವಿ.ಕೋಸಂದರ್ ಅವರು ಮಧ್ಯಸ್ಥಿಕೆದಾರರ ಮೂಲಕ ರಾಜಿಸಂಧಾನ ಮೂಲಕ ಹಲವಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.
ನಂತರ ಮಾತನಾಡಿದ ಅವರು ಸಾಮಾನ್ಯ ಜನರಲ್ಲಿ ಕಾನೂನಿನ ಬಗ್ಗೆ ಹೆಚ್ಚಿನ ಅರಿವು ಇಲ್ಲದ ಕಾರಣ ಸರ್ಕಾರ ನೀಡಿರುವ ಅವಕಾಶ ಬಳಸಿಕೊಳ್ಳಲು ಜನರು ಆಸಕ್ತಿ ವಹಿಸುತ್ತಿಲ್ಲ, ಅವರಲ್ಲಿ ಮನೆ ಮಾಡಿರುವ ತಪ್ಪು ಕಲ್ಪನೆಗಳೇ ಎಲ್ಲದಕ್ಕೂ ಕಾರಣವಾಗಿದೆ ಎಂದು ಹೇಳಿದರು.
ಗ್ರಾಮೀಣ ಜನರಲ್ಲಿ ಕಾನೂನು ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳು ವ್ಯಾಪಕವಾಗಿ ಇನ್ನೂ ನಡೆಯಬೇಕೆಂದು ಅಭಿಪ್ರಾಯ ಪಟ್ಟರು. ಸರ್ಕಾರಿ ಸಹಾಯಕ ಅಭಿಯೋಜಕ ದೇಶ ಭಂಡಾರಿ ಮಧ್ಯಸ್ಥಿಕೆದಾರ ಸಿದ್ದಲಿಂಗಯ್ಯ, ವಕೀಲರ ಸಂಘದ ಅಧ್ಯಕ್ಷ ಕೆ.ಎ.ರವಿಶಂಕರ್, ಹಿರಿಯ ವಕೀಲರಾದ ಬಿ.ಎನ್.ರವಿ, ಕಿರಣ್, ಶೋಭಾ ಜಯದೇವ್ ಅನೇಕ ಪ್ರಕರಣಗಳಲ್ಲಿ ಪರಸ್ಪರರಲ್ಲಿ ರಾಜಿ ಸಂಧಾನ ಮಾಡಿಸಿದರು.
ಇದಕ್ಕೂ ಮುನ್ನ ಕಳೆದ ಮೂರು ದಿನಗಳಿಂದ ತಾಲೂಕಿನ ಗೀಜೀಹಳ್ಳಿ, ಬಾಗೇಶಪುರ, ಮಹದೇವರಹಳ್ಳಿ, ಕುರುಬರಹಳ್ಳಿ, ಬಾಣಾವರ ಮತ್ತು ಅರಕೆರೆ ಗ್ರಾಮಗಳಲ್ಲಿ ಕಾನೂನು ಸಾಕ್ಷರತಾ ರಥಯಾತ್ರೆ ಮೂಲಕ ಪ್ರಧಾನ ನ್ಯಾಯಾಧೀಶ ದೇವಾನಂದ್ ಹಾಗೂ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಚನ್ನಪ್ಪ ಕುರುಬೆಟ್ ಹಾಗೂ ವಕೀಲರ ಸಂಘದ ಹಿರಿಯ ವಕೀಲರು ಸಂಚರಿಸಿ ಗ್ರಾಮೀಣ ಭಾಗದ ಜನರಲ್ಲಿ ಸಾಮಾನ್ಯ ಕಾನೂನುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿದರು.
ಸಂಚಾರಿ ನ್ಯಾಯಾಲಯ ಕಾರ್ಯಕ್ರಮ ಜಾವಗಲ್: ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಕಾನೂನು ಅರಿವು ಅತಿ ಅಗತ್ಯವಾಗಿದೆ ಎಂದು ಅರಸೀಕೆರೆ ಸಿವಿಲ್ ನ್ಯಾಯಾಧೀಶೆ ಸರಸ್ವತಿ ವಿ.ಕೋಸಂದರ್ ತಿಳಿಸಿದರು. ಜಾವಗಲ್ ಹೋಬಳಿ ಅರಕೆರೆ ಗ್ರಾಮದಲ್ಲಿ ಅರಸೀಕೆರೆ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಸ್ರೀಶಕ್ತಿ ಸಂಘದ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ಮಹಿಳಾ ದೌರ್ಜನ್ಯ ತಡೆ ಮತ್ತು ಮಕ್ಕಳ ಹಕ್ಕು ರಕ್ಷಣೆ ಬಗ್ಗೆ ಸಂಚಾರಿ ನ್ಯಾಯಾಲಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿರುವುದನ್ನು ತಡೆಯುವ ಸಲುವಾಗಿ ಮಹಿಳಾ ದೌರ್ಜನ್ಯ ತಡೆ ಕಾಯಿದೆ ಅಡಿ ಉಚಿತ ಕಾನೂನಿನ ನೆರವು ಪಡೆಯ ಬಹುದಾಗಿದೆ ಎಂದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂರಕ್ಷಣಾಧಿಕಾರಿಯನ್ನು ಸಂಪರ್ಕಿಸಿ ಸೂಕ್ತ ಮಾರ್ಗದರ್ಶನ ಪಡೆದು ಕೊಳ್ಳ ಬಹುದಾಗಿದೆ ಎಂದರು. ಎಸಿಡಿಪಿಒ ಚಂಪಾವತಿ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ನೆಮ್ಮದಿ ಸಹನೆಯಿಂದ ಬಾಳುವುದರ ಜೊತೆಗೆ ಹಿರಿಯರನ್ನು ಗೌರವಿಸುವುದನ್ನು ಮೈಗೂಡಿಸಿ ಕೊಳ್ಳ ಬೇಕೆಂದರು. ಸರ್ವೇಶ್ ವಕೀಲರ ಸಂಘದ ಅಧ್ಯಕ್ಷ ರವಿಶಂಕರ್, ಹಿರಿಯ ವಕೀಲ ಕೆಂಪೇಗೌಡ, ರವಿ, ನಟರಾಜು, ಮಹದೇವಪ್ಪ, ಸಿದ್ದಮಲ್ಲಪ್ಪ, ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶೋಭಾರವಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಾವಿತ್ರಮ್ಮ, ಎಸಿಡಿಪಿಓ ಅಂಬಿಕಾ, ಬಾಣಾವರ ಗ್ರಾಪಂ ಅಧ್ಯಕ್ಷೆ ವಸಂತ, ವಕೀಲ ಸದಾನಂದ, ವಿಜಯ ಕುಮಾರ್, ಅಂಗನವಾಡಿ ಮೇಲ್ವಿಚಾರಕಿ ರೇಣುಕಾ ಇಂದಿರಾ ಮೊದಲಾದವರು ಇದ್ದರು.
ಪರಂಪರಾ ಅರಿವು ಮೂಡಿಸುವ ಕಾರ್ಯಕ್ರಮ
ಕ.ಪ್ರ.ವಾರ್ತೆ ಹಾರನಹಳ್ಳಿ ಮಾ. 24
ಬೇಲೂರಿನ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಯೋಗದದೊಂದಿಗೆ ವಿದ್ಯಾರ್ಥಿಗಳಿಗೆ ಹಾರನಹಳ್ಳಿಯ ಪರಂಪರಾ ದರ್ಶನದ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪರಂಪರಾ ಕೂಟದ ಸಂಚಾಲಕ ಹಾಗೂ ಇತಿಹಾಸ ವಿಭಾಗದ ಉಪನ್ಯಾಸಕ ಜಯರಾಮು ಮಾತನಾಡಿ, ಇತಿಹಾಸ, ಕಲೆ ನಮ್ಮ ನಾಡಿನ ಪರಂಪರಾಗತವಾಗಿ ಬಂದಿರುವ ಕೃಷಿ ಕಲೆ, ಜಾನಪದ ಇತರ ಕಲಾ ಪ್ರಾಕಾರಗಳ ಬಗ್ಗೆ ಯುವಜನತೆ ಹಾಗೂ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಪ್ರಾಚ್ಯವಸ್ತು ಸಂಗ್ರಹಾಲಯಗಳು ಪರಂಪರಾ ಇಲಾಖೆ ಸಹಯೋಗದೊಂದಿಗೆ ಪರಂಪರಾ ಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಬೇಲೂರಿನ ಇತಿಹಾಸ ಸಂಶೋಧಕ ಡಾ.ಶ್ರೀವತ್ಸ ವಟಿ ಮಾತನಾಡಿ, ಹಾರನಹಳ್ಳಿ ಒಂದು ಪರಂಪರಾ ಗ್ರಾಮ. ಗಂಗರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಹಾಗೂ ಮೈಸೂರಿನ ಅರಸರು ಇವರ ಆಳ್ವಿಕೆಯಲ್ಲಿ ಹಾರನಹಳ್ಳಿಯಲ್ಲಿ ಅನೇಕ ದೇವಾಲಯ, ಕೋಟೆ ಕೊತ್ತಲಗಳನ್ನು ನಿರ್ಮಾಣ ಮಾಡಿದ್ದಾರೆ. ಇಂತಹ ಭವ್ಯ ಪರಂಪರೆ ಹೊಂದಿರುವ ಗ್ರಾಮದ ಶಾಸನ ಹಾಗೂ ಲಿಪಿ ಅಧ್ಯಯನ, ಕಲೆ ಮತ್ತು ವಾಸ್ತು ಶಿಲ್ಪಗಳು ಇವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಜೊತೆಗೆ ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳ ಬೇಕೆಂದರು. ಪತ್ರಕರ್ತ ಹಾರನಹಳ್ಳಿ ನಾಗೇಂದ್ರ ಹಾರನಹಳ್ಳಿಯ ಶಾಸನ ಪರಿಚಯಿಸಿದರು.