ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವ್ಯಾಪಾರಿ ಭಾವಕ್ಕೆ ಸೀಮಿತಗೊಂಡ ಮಹಿಳಾ ದಿನಾಚರಣೆ

Srinivasa Murthy VN
Updated On : 25 Mar 2013, 12:01 pm

ಕನ್ನಡಪ್ರಭವಾರ್ತೆಹಾಸನ ಮಾ.  24
ಮಾಧ್ಯಮಗಳಲ್ಲಿ ಮಹಿಳೆಯ ದಿನೋಪಯೋಗಿ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟಮಾಡುವ ವ್ಯಾಪಾರಿ ಮನೋಧರ್ಮಕ್ಕೆ ಮಹಿಳಾ ದಿನಾಚರಣೆ ಸೀಮಿತಗೊಂಡಿವೆ. ಆದರೆ ಮಹಿಳಾ ದಿನಾಚರಣೆಯ ನೈಜ ಆಶಯ ದೌರ್ಜನ್ಯ ರಹಿತ ಸಮಾಜ ನಿರ್ಮಾಣ ಮಾಡುವುದೇ ಆಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ ನೌಕರರ ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಗೀತ ವಿಷಾದಿಸಿದ್ದಾರೆ.
 ನಗರದ ಎಸ್.ಜಿ.ಆರ್. ಶಾಲಾ ಆವರಣದಲ್ಲಿನ ಸಾವಿತ್ರಿ ಬಾಯಿಫುಲೆ ವೇದಿಕೆಯಲ್ಲಿ ಉತ್ತರ ಬಡಾವಣೆ ಹಾಗೂ ಶಾಂತಿನಗರದ ಭಾರತ ಜ್ಞಾನ ವಿಜ್ಞಾನ ಸಮಿತಿ ಘಟಕ ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಹಿಳಾ ಸಮಾನತೆಯ ಕೂಗು:  19-20ನೇ ಶತಮಾನದಲ್ಲಿ ಅಮೆರಿಕದ ಜವಳಿ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರು ಪ್ರಜಾಪ್ರಭುತ್ವ ಹಾಗೂ ಮಾನವಹಕ್ಕುಗಳ ಹಕ್ಕುದಾರನೆಂದು ತನ್ನನ್ನು ತಾನೇ ಬಣ್ಣಿಸಿಕೊಳ್ಳುತ್ತಿದ್ದ ಅಮೆರಿಕ  ಮಹಿಳೆ ಹಾಗೂ ಬಡವರಿಗೆ ಮತದಾನದ ಹಕ್ಕು ನೀಡಿರಲಿಲ್ಲ.
 ಹಾಗೂ ಕನಿಷ್ಠ ಕೂಲಿ ಕೊಟ್ಟು ಹೆಚ್ಚು ದುಡಿಸಿಕೊಂಡು ಪಶುಗಳಂತೆ ನಡೆಸಿಕೊಳ್ಳುತ್ತಿದ್ದ ರೀತಿಗೆ ರೊಚ್ಚಿಗೆದ್ದ ಮಹಿಳಾ ಕಾರ್ಮಿಕರು ಸಮಾನ ವೇತನಕ್ಕಾಗಿ, ಸಮಾನ ಗೌರವ ಮತ್ತು ಕಡಿಮೆ ಕೆಲದ ವೇಳೆ ಹಾಗೂ ಮತದಾನದ ಹಕ್ಕಿಗಾಗಿ ನಡೆಸಿದ ಐತಿಹಾಸಿಕ ಹೋರಾಟದ ಫಲವಾಗಿ ಜಗತ್ತಿನಾದ್ಯಾಂತ ಈ ಚಳವಳಿ ಹಬ್ಬಿ ಮಹಿಳಾ ಸಮಾನತೆಯ ಕೂಗನ್ನು ಮಾನವೀಯ ಮೌಲ್ಯದ ನೆಲೆಗಟ್ಟಿನೊಳಗೆ ಜಗಜ್ಜಾಹಿರು ಗೊಳಿಸಿದ ಪರಿಣಾಮ ಮಹಿಳಾ ಹಕ್ಕುಗಳ ಬಗ್ಗೆ ವ್ಯವಸ್ಥೆ ಕಣ್ಣು ತೆರೆಸುವಂತೆ ಮಾಡಿದ ಆ 1917 ಮಾರ್ಚ್ 8ರ ಐತಿಹಾಸಿಕ ನೆನಪೇ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಸ್ಪೂರ್ತಿ ಎಂದು ವಿವರಿಸಿದರು.
ಗರ್ಭ ಮಾರಿಕೊಳ್ಳುವ ದೈನೇಸಿ ಸ್ಥಿತಿಯಲ್ಲಿ:   ಗುಜರಾತಿನ ಆರ್ಥಿಕ ಅಭ್ಯುದಯದ ಬುನಾದಿ ಅಮೂಲ್ ಡೈರಿ. ಅಮೂಲ್ ಡೈರಿಯ ಆಧಾರ ಸ್ಥಂಭಗಳು ಮಹಿಳೆಯರೇ ಆಗಿದ್ದಾರೆ.
 ದುರಂತ ಎಂದರೆ ದೇಶದಲ್ಲಿ ಅತಿ ಹೆಚ್ಚು ಮಹಿಳಾ ಶೋಷಣೆ ಹೊಂದಿರುವ ರಾಜ್ಯ ಎಂದರೆ ಗುಜರಾತೇ ಆಗಿದೆ. ಇದೇ ರಾಜ್ಯದಲ್ಲಿ ಮಹಿಳೆಯರು ತಮ್ಮ ಬಡತನ ನೀಗಿಸಿಕೊಳ್ಳಲು ಶ್ರೀಮಂತ ಮಹಿಳೆಯರಿಗೆ ಬಾಡಿಗೆ ತಾಯಂದಿರಾಗಿ ಗರ್ಭ ಮಾರಿಕೊಳ್ಳುವ ದೈನೇಸಿ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.
  ಹೆಣ್ಣನ್ನು ಭೋಗದ ವಸ್ತು ಎಂದು ತಿಳಿಯುವ ಸಮಾಜದ ಮನಸ್ಸು ಬದಲಾಗಬೇಕಿದೆ ಎಂದ ಅವರು ಬಿಜಿವಿಎಸ್ ಮಹಿಳಾ ಹಕ್ಕುಗಳಿಗೋಸ್ಕರ ಭೌದ್ದಿಕ ಚಳವಳಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
 ಸಮಾರಂಭ ಉದ್ಘಾಟಿಸಿದ ನಗರಸಭಾ ಸದಸ್ಯೆ ಉಷಾಕುಮಾರ್, ಮಹಿಳಾ ಸಂವೇದನೆಯನ್ನು ಪುರುಷ ಪ್ರಧಾನ ಸಮಾಜ ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಅರ್ಥೈಸಿಕೊಳ್ಳಬೇಕಿದೆ ಎಂದು ನುಡಿದರು.
  ಬಿಜಿವಿಎಸ್ ಸಮತ ರಾಜ್ಯ ಸಂಚಾಲಕಿ ಎನ್.ಪ್ರಭ ಮಾತನಾಡಿ,  ಪ್ರತಿನಿತ್ಯ 22 ನಿಮಿಷಕ್ಕೊರ್ಥಂದು ಅತ್ಯಾಚಾರ ಈ ದೇಶದಲ್ಲಿ ನಡೆಯುತ್ತಲೇ ಇವೆ ದಾಖಲುಗೊಂಡ ಪ್ರಕರಣಗಳಲಿ ಕೇವಲ 237 ಪ್ರಕರಣಗಳು ಮಾತ್ರ ಇತ್ಯರ್ಥ ಕಂಡಿವೆ ಎಂದು ಹೇಳಿದರು.
ಮಹಿಳೆಯ ಮಾನ ಪ್ರಾಣಕ್ಕೆ ರಕ್ಷಣೆ ಇಲ್ಲ:   ಲೇಖಕಿ ರೂಪ ಹಾಸನ ಮಾತನಾಡಿ,  ಮಹಿಳಾ ಹೋರಾಟದ ಫಲವಾಗಿ ಮಹಿಳೆ ಎಷ್ಟೆಲ್ಲಾ ಸಾಧನೆ ಮಾಡಿದ್ದರೂ ಮಹಿಳೆಯ ಮಾನ ಪ್ರಾಣಕ್ಕೆ ಮನೆಯ ಹೊರಗಿರಲಿ, ಮನೆಯೊಳಗೂ ರಕ್ಷಣೆ ಇಲ್ಲದಾಗಿದೆ.
  ಲೈಂಗಿಕ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ, ಅತ್ಯಾಚಾರ, ಮರ್ಯಾದಾ ಹತ್ಯೆ, ಹೆಣ್ಣು ಮಕ್ಕಳು ಕಾಣೆಯಾಗುವಿಕೆ, ಹೆಣ್ಣು ಮಕ್ಕಳ ಮಾರಾಟ, ಕೌಟುಂಬಿಕ ಇನ್ನೂ ಅನೇಕ ದೌರ್ಜನ್ಯಗಳನ್ನು ಯಾವುದೇ ಭಯವಿಲ್ಲದೆ ಸಮಾಜ ಎಸಗುತ್ತಿದೆ ಎಂದು ತಿಳಿಸಿದರು.
 19ನೇ ಶತಮಾನದಲ್ಲಿ ಸಾವಿತ್ರಿಬಾಯಿಫುಲೆ ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕಿಗಾಗಿ ಹಾಗೂ ಸಾಮಾಜಿಕ ಸಮಾನತೆಗಾಗಿ ಹೋರಾಡಿ ಶಾಲೆ ತೆರೆದು ಭಾರತದಲ್ಲಿ ವಿಮೋಚನಾ ಚಳವಳಿಯ ಕಿಡಿ ಹಚ್ಚಿದವರು. ಆ ದಂಪತಿ ಹೋರಾಟದ ಕಿಚ್ಚು ನಮ್ಮೆಲ್ಲರಿಗೂ ದಾರಿದೀಪವಾಗಬೇಕು ಎಂದು ನುಡಿದರು.
  ಬಿಜಿವಿಎಸ್ ತಾಲೂಕು ಅಧ್ಯಕ್ಷ ಡಿ.ಟಿ.ಶಿವಣ್ಣ ಮಾತನಾಡಿ, ಸಮಾಜವಾದಿ ನೆಲೆಗಟ್ಟಿನಲ್ಲಿ ಕ್ರಾಂತಿಕಿಡಿ ಹತ್ತಿಸಿದ ಭಗತ್‌ಸಿಂಗ್, ರಾಜಗುರು ಹಾಗೂ ಸುಖದೇವ್ ಅವರನ್ನು  ಗಲ್ಲಿಗೆ ಹಾಕಿದ ಹುತಾತ್ಮ ದಿನವಾಗಿದೆ ಈ ದಿನದಿಂದಲೆ ಭಾರತ ಉಪಖಂಡದಲ್ಲಿ ಗಟ್ಟಿಯಾಗಿ ಬೇರು ಬಿಟ್ಟರುವ ಎಲ್ಲ ವಿಧಧ ಶೋಷಣೆಯನ್ನು ಕಿತ್ತೆಸೆದು ಸಮಾನ ಗೌರವದ ದೇಶವನ್ನು ಕಟ್ಟುವ ಫಣ ತೊಡಬೇಕಿದೆ ಎಂದರು.
  ಬಿಜಿವಿಎಸ್ ಶಾಂತಿನಗರ ಘಟಕ ಅಧ್ಯಕ್ಷ ದೇವರಾಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಉತ್ತರ ಬಡಾವಣೆ ಘಟಕ ಅಧ್ಯಕ್ಷೆ ಮಮತ ಶಿವು ಮಾತನಾಡಿ ಹೆಣ್ಣಿನ ಸ್ಥಾನ  ಶತಮಾನಗಳಿಂದಲೂ ಮೂರನೆ ದರ್ಜೆಯದೇ ಆಗಿದೆ. ಭಾರತದ ಅಭಿವೃದ್ಧಿಗೆ ಗಂಡು ಮತ್ತು ಹೆಣ್ಣು ಸಮ ಸಮವಾಗಿ ನಡೆದರೆ ಮಾತ್ರ ಸಾಧ್ಯ ಎಂದರು.
  ಮಹಿಳೆಯರ ಕೌಶಲ್ಯ ಪ್ರದರ್ಶನ  ಬಿಜಿವಿಎಸ್ ಜಿಲ್ಲಾ ಸಹ ಕಾರ್ಯದರ್ಶಿ ಪ್ರಮೀಳ ಉದ್ಘಾಟಿಸಿದರು. ತೀರ್ಪುಗಾರರಾಗಿ ಕುಮಾರ್, ದಾಕ್ಷಾಯಿಣಿ ಹಾಗೂ ಮೈಮುನ ಭಾಗವಹಿಸಿದ್ದರು. ವೇದಾವತಿ ನಿರೂಪಿಸಿದರು.  ವೀರೇಶ್ ಸ್ವಾಗತಿಸಿದರು. ವೇದಶ್ರಿರಾಜ್ ವಂದಿಸಿದರು. ರೇಖಾ ಮಂಜುನಾಥ್, ರೇಖಾ ಹಾಗೂ ಪದ್ಮ ಮಂಜುನಾಥ್ ಜಾಗೃತಿಗೀತೆಗಳನ್ನು ಹಾಡಿದರು. ವಿಶ್ವ ಚೇತನ ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಸಿಹಿ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement