ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಹಾಸನ: ಹಣಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹರಪ್ಪನಳ್ಳಿ ತಾಲೂಕಿನ ಚಿನ್ನಳ್ಳಿ ತಾಂಡ್ಯದ ಸುನಿಲ್ ಹಾಗೂ ಅದೇ ತಾಲೂಕಿನ ಮೂಡ್ಲಿಗಿರಿ ತಾಂಡ್ಯದ ಸುನಿಲ್ನಾಯ್ಕ್ ಶಿಕ್ಷೆಗೆ ಒಳಗಾದವರು.
ಸಕಲೇಶಪುರ ತಾಲೂಕಿನ ಬೈರಾಪುರ ಗ್ರಾಮದ ಅರುಣಕುಮಾರ್ ಬೈಕಿನಲ್ಲಿ 14-8- 2011 ರಂದು ಕಿರುವಾಲೆ ಗ್ರಾಮದ ಬಿ.ಬಿ.ಅಶ್ವಥ್ರವರ ಮನೆಗೆ ಡಿಶ್ ಕೊಡಿಸಲು ಹೋಗಿ ವಾಪಸ್ ಸಂಜೆ 4-45 ರಲ್ಲಿ ಶಿಡಿಗಳಲೆ ಗ್ರಾಮದ ಎಸ್.ಎಸ್.ರವೀಂದ್ರರವರ ಕಾಫಿ ತೋಟದ ಸಮೀಪ ಬರುತ್ತಿದ್ದರು. ಈ ಸಂದರ್ಭದಲ್ಲಿ ಹರಪ್ಪನಹಳ್ಳಿ ತಾ. ಚಿನ್ನಳ್ಳಿ ತಾಂಡ್ಯದ ಆರೋಪಿ ಸುನಿಲ್ ಹಾಗೂ ಹರಪ್ಪನಹಳ್ಳಿ ತಾಲೂಕಿನ ಮೂಡ್ಲಿಗಿರಿ ತಾಂಡ್ಯದ ಸುನಿಲ್ನಾಯ್ಕ್ ಅವರುಗಳು ಅರುಣಕುಮಾರ್ ಬೈಕ್ ಅಡ್ಡಗಟ್ಟಿ ಹಣ ಕೊಡುವಂತೆ ಬೆದರಿಸಿ, ಅರುಣಕುಮಾರ್ ಜರ್ಕಿನ್ನಿಂದ ಕುತ್ತಿಗೆಗೆ ಬಿಗಿದು ಮರ್ಮಾಂಗದ ಮೇಲೆ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿದ್ದರು.ಸಾಕ್ಷ್ಯ ನಾಶಪಡಿಸಲು ಹೆಣವನ್ನು ಕಾಫಿ ತೋಟದ ಒಳಗಡೆ ಎಳೆದುಕೊಂಡು ಹೋಗಿ ಯಾರಿಗೂ ಕಾಣದಂತೆ ಬಿಸಾಕಿ ಅರುಣ್ ಬಳಿಯಿದ್ದ 650 ರು. ಹಾಗೂ ಮೊಬೈಲ್ ತೆಗೆದುಕೊಂಡು ಹೋಗಿದ್ದರು. ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆ ಎಸ್ಐ ಗಣೇಶ ತನಿಖೆ ಮಾಡಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 2 ನೇ ತ್ವರಿತಗತಿ ನ್ಯಾಯಾಧೀಶರು ಸಿ.ಹಾಲಪ್ಪ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಕ್ರಮ ಮದ್ಯ ಮಾರಾಟ: ಬಂಧನ
ಅರಸೀಕೆರೆ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ತಾಲೂಕಿನ ಗಂಡಸಿ ಹೋಬಳಿಯಲ್ಲಿ ಮಂಗಳವಾರ ಬಂಧಿಸಲಾಗಿದೆ. ತಾಲೂಕಿನ ಗಂಡಸಿ ಹೋಬಳಿ, ರಂಗೇನಹಳ್ಳಿ ಗ್ರಾಮದ ಚಂದ್ರಪ್ಪ (30) ಎಂಬುವರನ್ನು ಬಂಧಿಸಿದ್ದು, ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಮಾರಾಟಕ್ಕಿಟ್ಟಿದ್ದ 2300 ರು. ಬೆಲೆಯ ಮದ್ಯದ ಬಾಟಲಿಗಳು, ರಾಜಾ ವಿಸ್ಕಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಮುಖಾಮುಖಿ ಡಿಕ್ಕಿ: ಒಬ್ಬ ಸಾವು
ಚನ್ನರಾಯಪಟ್ಟಣ: ರಾಷ್ಟ್ರೀಯ ಹೆದ್ದಾರಿ 48ರ ನಂದಿಪುರ ಗೇಟ್ ಬಳಿ ಬೈಕ್ಗಳ ಮುಖಾಮುಖಿ ಡಿಕ್ಕಿಯಲ್ಲಿ ಒಬ್ಬ ಮೃತಪಟ್ಟಿದ್ದು ಇಬ್ಬರಿಗೆ ಗಾಯಗಳಾಗಿರುವ ಘಟನೆ ಬುಧವಾರ ಸಂಜೆ ಸಂಭವಿಸಿದೆ. ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಕಗ್ಗೆರೆ ಗ್ರಾಮದ ರಾಜೇಶ್(38) ಸ್ಥಳದಲ್ಲೇ ಮೃತಪಟ್ಟಿರುವ ದುರ್ದೈವಿ. ಈತ ತನ್ನ ಗ್ರಾಮದಿಂದ ಚನ್ನರಾಯಪಟ್ಟಣಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟರು. ಚನ್ನರಾಯಪಟ್ಟಣ ಕಡೆಯಿಂದ ಬರುತ್ತಿದ್ದ ಬೈಕ್ ಸವಾರರಿಬ್ಬರಿಗೆ ಗಾಯಗಳಾಗಿದ್ದು, ಅವರ ವಿವರ ತಿಳಿದು ಬಂದಿಲ್ಲ. ಪಟ್ಟಣ ಪೋಲಿಸರು ದೂರು ದಾಖಲಿಸಿ ಕ್ರಮ ತೆಗೆದುಕೊಂಡಿದ್ದಾರೆ.
ವ್ಯಕ್ತಿ ನಾಪತ್ತೆ
ಹಾಸನ: ನಗರದ ಕೆ.ಆರ್.ಪುರಂನ ಅನಂತ (40) ಮನೆಯಿಂದ ಅಡುಗೆ ಕೆಲಸಕ್ಕೆಂದು ಚನ್ನರಾಯಪಟ್ಟಣಕ್ಕೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಚಹರೆ 5.5 ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲುಮುಖ, ಕನ್ನಡ, ಇಂಗ್ಲಿಷ್ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಶರ್ಟ್ ಕಪ್ಪು ಪ್ಯಾಂಟ್ ಧರಿಸಿದ್ದರು. ತಂಗಿ ರೂಪ ಹಾಸನ ಬಡಾವಣೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬೈಕ್ ಕಳವು
ಬೇಲೂರು: ತಾಲೂಕಿನ ಹಳೆಬೀಡು ಕೆಲಹಟ್ಟಿಯ ರವಿಕುಮಾರ್ ಅವರ ಟಿವಿಎಸ್ ಬೈಕನ್ನು ಮನೆಯ ಮುಂದೆ ನಿಲ್ಲಿಸಿ ಬೆಳಿಗ್ಗೆ 6 ಗಂಟೆಯಲ್ಲಿ ನೋಡಿದಾಗ 20 ಸಾವಿರ ರು. ಬೆಲೆಯ ಬೈಕ್ ಕಳವಾಗಿದೆ. ರವಿಕುಮಾರ್ರ್ವರು ಹಳೇಬೀಡು ಠಾಣೆಗೆ ದೂರು ನೀಡಿದ್ದಾರೆ.
ಸಂಘಕ್ಕೆ ಆಯ್ಕೆ
ಮಂಡ್ಯ: ಅಖಿಲ ಕರ್ನಾಟಕ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಲೇಪಾಕ್ಷಿಗೌಡ, ಅಧ್ಯಕ್ಷರಾಗಿ ಬೈರೇಶ್, ಉಪಾಧ್ಯಕ್ಷರಾಗಿ ಹರಿಚರಣ್ ತಿಲಕ್, ಆರ್.ಸುಷ್ಮಾ, ಪ್ರಧಾನ ಕಾರ್ಯದರ್ಶಿಯಾಗಿ ತಮ್ಮೇಗೌಡ, ಕಾರ್ಯದರ್ಶಿಯಾಗಿ ರಾಜು, ಸಹ ಕಾರ್ಯದರ್ಶಿಯಾಗಿ ಪಿ.ರಶ್ಮಿ, ಖಜಾಂಚಿಯಾಗಿ ಮಲ್ಲು, ಸಂಘಟನಾ ಕಾರ್ಯದರ್ಶಿಯಾಗಿ ವಾಸು, ಜಿಲ್ಲಾ ಸಂಚಾಲಕರಾಗಿ ಶಿವಮೂರ್ತಿ, ಗೌರವ ಸಲಹೆಗಾರರಾಗಿ ಜಗದೀಶ್, ಗೋವಿಂದರಾಜು, ಮದ್ದೂರು ಸಂಚಾಲಕರಾಗಿ ಮಧು, ಮಂಡ್ಯ ರಮೇಶ್, ಶ್ರೀರಂಗಪಟ್ಟಣ ಅಣ್ಣಪ್ಪಸ್ವಾಮಿ, ಮಳವಳ್ಳಿ ಚಂದ್ರಶೇಖರ್, ಪಾಂಡವಪುರ ಮಂಚೇಶ್, ನಾಗಮಂಗಲ ಚಂದ್ರಶೇಖರ್, ಹಲಗೂರು ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಶಿವೇಗೌಡ ಳಿಸಿದ್ದಾರೆ.
ಸೌದೇನಹಳ್ಳಿ ಪುರದಯ್ಯ
ಮಂಡ್ಯ: ಬಸವ ಸಮಿತಿ ಉಪಾಧ್ಯಕ್ಷ ಸೌದೇನಹಳ್ಳಿ ಪುರದಯ್ಯ ಬುಧವಾರ ಗ್ರಾಮದಲ್ಲಿ ನಿಧನರಾದರು. ಮೃತರು ಜಿಪಂ ಮಾಜಿ ಉಪಾಧ್ಯಕ್ಷೆ ಜಗದಾಂಬ ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಇಂದು ಅಂತ್ಯಕ್ರಿಯೆ: ಮಾ.28 ರಂದು ಬೆಳಗ್ಗೆ 10 ಗಂಟೆಗೆ ಸೌದೇನಹಳ್ಳಿ ಗ್ರಾಮದಲ್ಲಿ ನಡೆಯಲಿದೆ.
ಕಾಂಗ್ರೆಸ್ಗೆ ನೇಮಕ
ಮಂಡ್ಯ: ಮಂಡ್ಯ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾಗಿ ಚಾಮುಂಡೇಶ್ವರಿ ನಗರದ ಲಲಿತಾ ಭಾಸ್ಕರ್ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷೆ ಆರ್.ಮಂಜುಳಾ ನಾಯ್ಡು ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆಜೆಪಿಗೆ ಆಯ್ಕೆ
ಮಂಡ್ಯ: ಜಿಲ್ಲಾ ಕೆಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಮದ್ದೂರಿನ ದಾಕ್ಷಾಯಿಣಿ, ಸಂಘಟನಾ ಕಾರ್ಯದರ್ಶಿಯಾಗಿ ಮಂಡ್ಯ ಗಾಂಧಿನಗರದ ಕವಿತಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹಾಲಹಳ್ಳಿ ಹರಿಶ್ಚಂದ್ರ ಸರ್ಕಲ್ನ ಮಮತಾ, ನಗರದ ಘಟಕದ ಅಧ್ಯಕ್ಷರಿ ಗಾಂಧಿನಗರ ಅಶ್ವಿನಿ, ಉಪಾಧ್ಯಕ್ಷರಾಗಿ ಹೇಮಲತ ಅವರನ್ನು ನೇಮಕ ಮಾಡಿ ಜಿಲ್ಲಾ ಸಂಚಾಲಕರು ಆದೇಶ ಹೊರಡಿಸಿದ್ದಾರೆ.
ಗೃಹಿಣಿ ಆತ್ಮಹತ್ಯೆ
ಮಂಡ್ಯ: ತಾಲೂಕಿನ ಮುತ್ತೇಗೆರೆಯಲ್ಲಿ ಗೃಹಿಣಿ ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ. ಕುಬೇರಪ್ಪ ಎಂಬುವರ ಪತ್ನಿ ದೀಪಾ (21) ಮೃತ ಗೃಹಿಣಿ. ಈ ಸಂಬಂಧ ಪತಿ ಮನೆಯವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿರುವ ದೀಪಾ ಪೋಷಕರು ಬಸರಾಳು ಠಾಣೆಗೆ ದೂರು ನೀಡಿದ್ದಾರೆ.
ರಸ್ತೆ ಅಪಘಾತ: ಇಬ್ಬರ ಸಾವು
ಮಂಡ್ಯ: ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಬುಧವಾರ ಹನಕೆರೆ ಬಳಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕು ಗೌಡಹಳ್ಳಿಯ ಪುಟ್ಟಸ್ವಾಮಾಚಾರ್ ಪುತ್ರ ರವಿ (24) ಮೃತಪಟ್ಟಿದ್ದಾರೆ. ಕಾರ್ಯನಿಮಿತ್ತ ಬೈಕಿನಲ್ಲಿ ಗೆಜ್ಜಲಗೆರೆಗೆ ಹೋಗುತ್ತಿದ್ದಾಗ ಬೆಂಗಳೂರಿಂದ ಮೈಸೂರಿಗೆ ತೆರಳುತ್ತಿದ್ದ ರಾಜಹಂಸ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಹಳೇಬೂದನೂರು ವಾಸಿ ಮಹದೇವಯ್ಯ ಸಾವನ್ನಪ್ಪಿದ್ದಾರೆ. ಗ್ರೀನ್ಪ್ಯಾಲೆಸ್ನಲ್ಲಿ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದ ಮಹದೇವಯ್ಯ ಸೈಕಲ್ನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.
ರಾಮಕೃಷ್ಣಗೆ ಮಾತೃವಿಯೋಗ
ಮದ್ದೂರು: ವಿಧಾನ ಪರಿಷತ್ ಸದಸ್ಯ ಬಿ.ರಾಮಕೃಷ್ಣ ಅವರ ಮಾತೃಶ್ರೀ ನಿಂಗಮ್ಮ (90) ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಮಧ್ಯರಾತ್ರಿ ಹೃದಯಘಾತದಿಂದ ನಿಧನರಾದರು. ಅವರಿಗೆ ಬಿ.ರಾಮಕೃಷ್ಣ ಸೇರಿದಂತೆ ಮೂವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಮಧ್ಯಾಹ್ನ ನೆರವೇರಿತು.
ಸಂಸದ ಚಲುವರಾಯಸ್ವಾಮಿ, ಶಾಸಕರಾದ ಕಲ್ಪನಾ ಸಿದ್ದರಾಜು, ರಮೇಶ್ ಬಂಡಿಸಿದ್ದೇಗೌಡ, ಎಂ.ಶ್ರೀನಿವಾಸ್, ಮಾಜಿ ಶಾಸಕರಾದ ಮಧು ಜಿ.ಮಾದೇಗೌಡ, ಡಿ.ಸಿ. ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ, ಜಿ.ಬಿ.ಶಿವಕುಮಾರ್, ಡಾ.ಅನ್ನದಾನಿ, ಜಿಪಂ ಮಾಜಿ ಅಧ್ಯಕ್ಷ ಶಿವಣ್ಣ, ಮಾಜಿ ಉಪಾಧ್ಯಕ್ಷ ಜಯಲಕ್ಷ್ಮಮ್ಮ, ಜಿಪಂ ಸದಸ್ಯರಾದ ಕೆ.ರವಿ, ಬಸವರಾಜು, ಸುರೇಶ್ ಕಂಠಿ, ಲಲಿತಾ ಪ್ರಕಾಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಮತ್ತಿತರ ಮುಖಂಡರು, ಇಲಾಖೆ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ಸಂತಾಪ: ನಿಂಗಮ್ಮ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಕೆಪಿಸಿಸಿ ಸದಸ್ಯರಾದ ಎಸ್.ಎಂ.ಶಂಕರ್, ಎಸ್.ಗುರುಚರಣ್ ಸಂತಾಪ ಸೂಚಿಸಿದ್ದಾರೆ.