ಸ್ನಾತಕೋತ್ತರ ಕೇಂದ್ರ ಸಮಸ್ಯೆಗಳ ಆಗರ
-ಪಿ.ರವಿಕುಮಾರ್
ಹಾಸನ: ಮೈಸೂರು ವಿಶ್ವವಿದ್ಯಾನಿಲಯ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸಂಕಲ್ಪ ಹೊಂದಿ ಅದಕ್ಕಾಗಿ ಕೋಟ್ಯಂತರ ರು.ಗಳನ್ನು ವೆಚ್ಚ ಮಾಡುತ್ತಿದೆ. ಆದರೆ ಈ ನೀತಿ ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಬರುವ ಜಿಲ್ಲೆಯ ಹೇಮಗಂಗೋತ್ರಿಗಾಗಲೀ ಅಥವಾ ಪ್ರಥಮ ದರ್ಜೆ ಕಾಲೇಜುಗಳಿಗಾಗಲೀ ಅನ್ವಯಿಸುತ್ತಿಲ್ಲ.
ಸರ್ಕಾರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕೋಟ್ಯಂತರ ರು. ವೆಚ್ಚ ಮಾಡಿ ಬೃಹತ್ ಕಟ್ಟಡಗಳನ್ನೇನೋ ನಿರ್ಮಿಸುತ್ತದೆ. ಆದರೆ ಅವಶ್ಯಕ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಮಾತ್ರ ವಿಫಲವಾಗಿರುವುದು ಇತ್ತೀಚೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಈ ವಿರುದ್ಧ ಪ್ರತಿಭಟನೆಯ ಕೂಗು ಹೆಚ್ಚಾಗಿದೆ.
ಮೇಲ್ನೋಟಕ್ಕೆ ಮಾತ್ರ ಸುಂದರ: ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸ್ಥಿತಿ ಮಾತ್ರ ಅತಂತ್ರವಾಗಿದೆ. ಕಾಲೇಜು ಕಟ್ಟಡಗಳು ಮಾತ್ರ ಮೇಲ್ನೋಟಕ್ಕೆ ಸುಂದರ ಹಾಗೂ ಬೃಹದಾಕಾರವಾಗಿ ಕಾಣುತ್ತವೆ. ಆದರ ಒಳ ಹೋದರೆ ಕಳಪೆ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯವಿಲ್ಲದಿರುವುದರ ನಿಜ ದರ್ಶನವಾಗುತ್ತದೆ.
ನಗರದ ಹೊರವಲಯದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರ, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕುಡಿಯುವ ನೀರು, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳು ಹಾಗೂ ಪರಿಪೂರ್ಣ ಲ್ಯಾಬ್, ಕಂಪ್ಯೂಟರ್ ವ್ಯವಸ್ಥೆ, ಶೌಚಾಲಯ ಇಲ್ಲದಿರುವುದು ಕಾಣಬರುತ್ತದೆ. ಮೂಲಭೂತ ಸೌಕರ್ಯದ ಸಮಸ್ಯೆ ಒಂದೆಡೆಯಾದರೆ, ಉಪನ್ಯಾಸಕರ ಕೊರತೆ ಮತ್ತೊಂದೆಡೆಯಾಗಿದೆ.
ಹಲ್ಲು ಇದ್ದವನಿಗೆ ಕಡ್ಲೆ ಇಲ್ಲ, ಕಡ್ಲೆ ಇದ್ದವನಿಗೆ ಹಲ್ಲು ಇಲ್ಲ ಅನ್ನೋ ನಾಣ್ಣುಡಿಯಂತೆ ವ್ಯಾಸಂಗಕ್ಕೆ ಅವಶ್ಯಕವಾದಂತಹ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಇದ್ದ ಕಡೆಗಳಲ್ಲಿ ಉಪನ್ಯಾಸಕರ ಕೊರತೆ ಎದ್ದು ಕಾಣುತ್ತಿದ್ದರೆ, ಅವಶ್ಯಕತೆ ಇದ್ದಷ್ಟು ಉಪನ್ಯಾಸಕರು ಇರುವ ಕಡೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ವ್ಯಾಸಂಗ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಂದಂಭಪಟ್ಟವರ ಗಮನಕ್ಕೆ ತಂದರೂ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಮೇಲಾಧಿಕಾರಿಗಳು ಕಾಲ ಕಳೆಯುತ್ತಿದ್ದಾರೆ.
ನಿರ್ಲಕ್ಷ್ಯ ಹೆಚ್ಚು: ವಿಶ್ವವಿದ್ಯಾನಿಯ ವ್ಯಾಪ್ತಿಯಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಅಧ್ಯಯನ ಕೇಂದ್ರಗಳು ಹಾಗೂ ಪ್ರಥಮ ದರ್ಜೆ ಕಾಲೇಜು ತೆರೆಯುತ್ತಾರೆ. ಆದರೆ, ಅವಶ್ಯಕ ಸೌಕರ್ಯಗಳನ್ನು ಒದಗಿಸದೆ ನಿರ್ಲಕ್ಷ್ಯ ಮನೋಭಾವ ತಾಳ ಲಾಗುತ್ತಿರುವುದರಿಂದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಅವಶ್ಯಕತೆ ಇರುವಷ್ಟು ಕಾಲೇಜು ತೆರೆದು, ಸಮರ್ಪಕ ಶಿಕ್ಷಣ ನೀಡುವುದು ಸೂಕ್ತ. ಆದರೆ ಹೆಚ್ಚುವರಿಯಾಗಿ ತೆರೆದ ಕಾಲೇಜುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗದೆ ಕಾಲೇಜು ಕಳಪೆ ಮಟ್ಟದಿಂದ ಕೂಡಿವೆ.
ಕಾಲೇಜುಗಳನ್ನು ತೆರೆಯುವ ಸಂದರ್ಭದಲ್ಲಿ ತೋರುವ ಆಸಕ್ತಿ, ಉತ್ಸಾಹ ಕಾಲೇಜು ಪ್ರಾರಂಭವಾದ ನಂತರ ಸರ್ಕಾರ ಅದೇ ರೀತಿಯಲ್ಲಿ ತೋರುತ್ತಿಲ್ಲ. ಕಾಲೇಜುಗಳಿಗೆ ಅವಶ್ಯಕ ಸೌಕರ್ಯ ಒದಗಿಸಿ ಎಂದು ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಉಪನ್ಯಾಸಕರ ಪ್ರತಿಭಟನೆಯ ಕೂಗು ಕೇಳಿ ಬಂದರೂ ಅದಕ್ಕೆ ವಿಶ್ವವಿದ್ಯಾನಿಲಯವಾಗಲಿ, ನ್ಯಾಕ್ ಕಮಿಟಿಯಾಗಲಿ ಅಥವಾ ಸರ್ಕಾರವಾಗಲೀ ಕ್ರಮ ಕೈಕೊಳ್ಳದೇ ನಿರ್ಲಕ್ಷ್ಯ ತಾಳಿದೆ.
ವಿದ್ಯಾರ್ಥಿಗಳ ಭವಿಷ್ಯ ಅತಂತ್ರ: ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಬೇಕಾದ ಅಗತ್ಯತೆ ಒದಗಿಸ ಕಾರಣ, ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.
ಪರೀಕ್ಷೆ ಹತ್ತಿರವಾಗುತ್ತಿದ್ದರೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಪಾಠ ಪ್ರವಚನಕ್ಕೆ ಅಡಚಣೆ ಉಂಟಾಗಿದೆ. ಅವ್ಯವಸ್ಥೆಯಿಂದ ಬೇರ್ಪಟ್ಟು ಬೇರೆ ಕಾಲೇಜುಗಳಿಗೆ ಸೇರಲು ಮುಂದಾಗಲು ಸಮಯ ಮೀರಿರುವುದರಿಂದ ವಿದ್ಯಾರ್ಥಿಗಳ ಪರಿಸ್ಥಿತಿ ದಯನೀಯ ಸ್ಥಿತಿಯಾಗಿದೆ.
ಕಾಲೇಜಿನಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಕಷ್ಟ ಪಡುತ್ತಿದ್ದೇವೆ. ಪಾಠ ಪ್ರವಚನಕ್ಕೆ ತೊಂದರೆಯಾಗಿದೆ. ಪರೀಕ್ಷೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿದ್ಯುತ್, ಲ್ಯಾಬ್ ಕೊರತೆ, ನೀರಿನ ಸಮಸ್ಯೆಯಿಂದಾಗಿ ಬಹಳ ತೊಂದರೆ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
- ಶಶಿಕುಮಾರ್, ವಿದ್ಯಾರ್ಥಿ
ಉನ್ನತ ವ್ಯಾಸಂಗಕ್ಕೆಂದು ಈ ಕಾಲೇಜಿಗೆ ದಾಖಲಾದೆ. ಆದರೆ ಇದು ಅವ್ಯವಸ್ಥೆಯ ಆಗರವಾಗಿದೆ ಅನ್ನೋ ಕಟು ಸತ್ಯ ಗೊತ್ತಿರಲಿಲ್ಲ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಇರುವಂತಹ ಮೂಲಭೂತ ಸೌಕರ್ಯ ಇಲ್ಲಿಯೂ ಇರುತ್ತದೆ ಅಂದು ಕೊಂಡಿದ್ದೇವು. ಆದರೆ ಇಲ್ಲಿ ಯಾವುದೇ ಸೌಕರ್ಯಗಳು ಇಲ್ಲ. ಇದರಿಂದ ಪಾಠ ಪ್ರವಚನಕ್ಕೆ ತುಂಬಾ ಅಡ್ಡಿಯಾಗಿದೆ.
- ಗಿರೀಶ್, ವಿದ್ಯಾರ್ಥಿ