ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತಾಲೂಕಿನಲ್ಲಿ ವರುಣನ ಆರ್ಭಟ ಭಾರಿ ಗಾಳಿ, ಮಳೆ; ಅಪಾರ ಹಾನಿ

Srinivasa Murthy VN
Updated On : 28 Mar 2013, 9:57 am

ಕ.ಪ್ರ.ವಾರ್ತೆ ಹಾಸನ ಮಾ. 28
ಕಳೆದ ಎರಡು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಬೆಳೆ ಸೇರಿದಂತೆ ಲಕ್ಷಾಂತರ ರು.ನಷ್ಟ ಉಂಟಾಗಿರುವ ಘಟನೆ ತಾಲೂಕಿನ ಮೊಸಳೆ ಹೊಸಳ್ಳಿ ಸುತ್ತಮುತ್ತ ನಡೆದಿದೆ.
ತಾಲೂಕಿನ ಅಂಚೇಹಳ್ಳಿ, ಮಾರೇನಹಳ್ಳಿ ಮತ್ತು ಮೊಸಳೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಂಗಳವಾರ, ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿದೆ.
ದಿಢೀರನೆ ಹೆಚ್ಚು ಸಮಯ ಆಲಿಕಲ್ಲಿನೊಂದಿಗೆ ಬಿದ್ದ ಭಾರಿ ಮಳೆಯಿಂದಾಗಿ ಈ ಗ್ರಾಮಗಳ ಮನೆಗಳು, ದನದ ಕೊಟ್ಟಿಗೆ ಸೇರಿದಂತೆ ಅಷ್ಟೋ ಇಷ್ಟೋ ನೀರನ್ನು ಹಾಕಿ ಬೆಳೆಸಿದ್ದ ಎಕರೆ ಗಟ್ಟಲೆ ಬಾಳೆ ತೋಟಗಳು ಹಾನಿಗೀಡಾಗಿವೆ.
ಅಷ್ಟೇ ಅಲ್ಲದೆ ಕೆಲವು ಗ್ರಾಮಗಳಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿ, ಗಾಳಿ ಮತ್ತು ಮಳೆಯ ಆರ್ಭಟಕ್ಕೆ ಮರಗಳು ಧರಗೆ ಉರುಳಿ ಗ್ರಾಮಸ್ಥರಿಗೆ ತೀರಾ ತೊಂದರೆ ಉಂಟಾಗಿ, ಲಕ್ಷಾಂತರ ರು. ಮೌಲ್ಯದ ಆಸ್ತಿ ನಷ್ಟ ಉಂಟಾಗಿದೆ.
ಬಿಸಿಲ ಬೇಗೆ ಹೆಚ್ಚಾಗಿ ಇದ್ದಕ್ಕಿದ್ದಂತೆ ಸುರಿದ ಭಾರೀ ಮಳೆ ಮತ್ತು ಗಾಳಿಗೆ ಗ್ರಾಮೀಣ ಪ್ರದೇಶದ ಜನರು ತತ್ತರಿಸಿ ಹೋಗಿದ್ದಾರೆ. ಭಾರೀ ಗಾತ್ರದ ಆಲಿಕಲ್ಲುಗಳೊಂದಿಗೆ ಎಡಬಿಡದೆ ಸುರಿದ ಮಳೆಯಿಂದಾಗಿ ಗ್ರಾಮದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ತಾಲೂಕಿನ ಮೊಸಳೆಹೊಸಳ್ಳಿ ಸಮೀಪದ ಅಂಚೇಹಳ್ಳಿಯಲ್ಲಿ ದೇವೇಗೌಡ ಎಂಬ ರೈತರಿಗೆ ಸೇರಿದ್ದ 50 ಸಿಂಧಿ ಹಸುಗಳಿಗಾಗಿ 5 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಿದ್ದ ನೂತನ ಕೊಟ್ಟಿಗೆ ಗಾಳಿ ಮಳೆಗೆ ಮುರಿದು ಬಿದ್ದು, ಹೆಚ್ಚಿನ ನಷ್ಟ ಉಂಟಾಗಿದೆ. ಕೊಟ್ಟಿಗೆಯಲ್ಲಿದ್ದ ಸಿಂಧಿ ಹಸುಗಳಿಗೆ ಅಲ್ಪಸ್ವಲ್ಪ ಹಾನಿಯಾಗಿದ್ದು, ಕೊಟ್ಟಿಗೆ ಮೇಲ್ಛಾವಣಿ ಸಂಪೂರ್ಣವಾಗಿ ಮುರಿದು ಬಿದ್ದಿದೆ. ಜೀವನಾಧರವಾಗಿದ್ದ ರೈತರ ಹೈನುಗಾರಿಕೆಗೆ ನಷ್ಟ ಉಂಟಾಗಿದೆ. ಅದೇ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದ ಮೇಲ್ಚಾವಣಿಗೆ ಹಾಕಲಾಗಿದ್ದ ಸಿಮೆಂಟ್ ಶೀಟ್‌ಗಳು ಹಾರಿ ಹೋಗಿವೆ. ಕೆಲವು ಮನೆಗಳ ಗೋಡೆಗಳು ಮುರಿದು ಬಿದ್ದಿದ್ದು, ಗ್ರಾಮದಲ್ಲಿ ಲಕ್ಷಾಂತರ ರು. ಹಾನಿ ಉಂಟಾಗಿದೆ ಎಂದು ಗ್ರಾಮದ ರೈತರು ಅಲವತ್ತುಕೊಂಡರು.
ಮಳೆ ಇಲ್ಲದೆ ಭೂಮಿ ಬರಡಾಗಿತ್ತು. ಮಳೆ ಬಂತೆಂಬ ಖುಷಿಯಲ್ಲಿ ಇದ್ದೇವು. ಆದರೆ ಬಿದ್ದ ಭಾರೀ ಗಾಳಿ ಮತ್ತು ಮಳೆ ಗ್ರಾಮದಲ್ಲಿ ಹಾನಿಗೀಡಾಗುತ್ತದೆ ಎಂದುಕೊಂಡಿರಲಿಲ್ಲ ಎನ್ನುತ್ತಾರೆ ರೈತರು. ಮಾರೇನಹಳ್ಳಿಯ ಅಶೋಕ್ ಎಂಬುವರಿಗೆ ಸೇರಿದ 1 ಎಕರೆ ಜಾಗದಲ್ಲಿ ಬಾಳೆ ಬೆಳೆದಿದ್ದರು. ದಿಢೀರನೆ ಬಿದ್ದ ಭಾರಿ ಮಳೆಯಿಂದಾಗಿ ಫಲ ಬಿಟ್ಟಿ ಬಾಳೆಗಿಡಗಳು ಸಂಪೂರ್ಣವಾಗಿ ನಾಶವಾಗಿವೆ. ಮೊದಲ ಫಸಲನ್ನು ತೆಗೆದು ಕೊಳ್ಳಬೇಕಾದ ಸಂದರ್ಭದಲ್ಲಿ ಪ್ರಕೃತಿಯ ವಿಕೋಪಕ್ಕೆ ಬಾಳೆಗಿಡಗಳು ಸಂಪೂರ್ಣವಾಗಿ ನಾಶವಾಗಿ ಲಕ್ಷಾಂತರ ರು.ಗಳು ನಷ್ಟ ಉಂಟಾಗಿದೆ. ಮಳೆಯ ಆರ್ಭಟಕ್ಕೆ ಫಲವತ್ತಾಗಿದ್ದ ಮಣ್ಣು ಕೊಚ್ಚಿಕೊಡು ಹೋಗಿದೆ.
ಅದೇ ರೀತಿ ಮೊಸಳೆ ಗ್ರಾಮದ ಕಾವೇರಮ್ಮ ಎಂಬುವರಿಗೆ ಸೇರಿದ ಎರಡೂವರೆ ಎಕರೆ ತೋಟದಲ್ಲಿ ಚೆನ್ನಾಗಿ ಬಾಳೆ ಬೆಳೆಯಲಾಗಿತ್ತು. ಬಾಳೆಗಿಡಗಳು ಈಗ ತಾನೆ ಫಸಲನ್ನು ಬಿಟ್ಟಿದ್ದವು. ಮಳೆಯ ಅವಾಂತರಕ್ಕೆ ಬಾಳೆ ಗಿಡಗಳೆಲ್ಲ ನಾಶವಾಗಿವೆ. ಸುಮಾರು 400 ಕ್ಕೂ ಹೆಚ್ಚು ಬಾಳೆಗಿಡಗಳು ಸಂಪೂರ್ಣವಾಗಿ ನಾಶವಾಗಿ ರೈತರಿಗೆ ಲಕ್ಷಾಂತರ ರು. ನಷ್ಟು ಸಂಭವಿಸಿ, ಕೈಸುಟ್ಟುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  
ಗ್ರಾಮದಲ್ಲಿ ತೆಂಗಿನ ಮರ ಸೇರಿದಂತೆ ನಾನಾ ಮರಗಳು ಮನೆಯ ಮೇಲೆ ಉರುಳಿ ಬಿದ್ದಿವೆ. ಅನೇಕ ಮನೆಗಳ ಮೇಲ್ಛಾವಣಿ ಕುಸಿದು ಬಿದ್ದಿವೆ. ಕೆಲ ಮನೆಯ ಹೆಂಚುಗಳು ಹಾರಿ ಹೋಗಿವೆ. ಒಟ್ಟಾರೆ ಮಳೆಯಿಂದ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಹಾನಿಯಾಗಿ ರೈತರು, ಸಾರ್ವನಿಕರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಮೊಸಳೆಹೊಸಳ್ಳಿಯ ಮುಖಂಡ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ದೇವೇಗೌಡ, ಮುತ್ತಿಗೆ ಹಿರೇಹಳ್ಳಿ ಕಾಳೇಗೌಡ, ಶೇಷಾದ್ರಿ, ಹನುಮೇಗೌಡ, ಮಾರೇನಹಳ್ಳಿ ಕುಮಾರ್, ಗ್ರಾಮ ಪಂಚಾಯ್ತಿ ಪಿಡಿಓ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಇತರರು ಇದ್ದರು.

ತಾಲೂಕಿನ ಮೊಸಳೆಹೊಸಳ್ಳಿ ಸಮೀಪದ ಅಂಚೇಹಳ್ಳಿಯಲ್ಲಿ ದೇವೇಗೌಡ ಎಂಬ ರೈತರಿಗೆ ಸೇರಿದ್ದ 50 ಸಿಂಧಿ ಹಸುಗಳಿಗಾಗಿ 5 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಿದ್ದ ನೂತನ ಕೊಟ್ಟಿಗೆ ಗಾಳಿ ಮಳೆಗೆ ಮುರಿದು ಬಿದ್ದು, ಹೆಚ್ಚಿನ ನಷ್ಟ ಉಂಟಾಗಿದೆ.

ಮಾರೇನಹಳ್ಳಿಯ ಅಶೋಕ್ ಎಂಬುವರಿಗೆ ಸೇರಿದ 1 ಎಕರೆ ಜಾಗದಲ್ಲಿ ಬಾಳೆ ಬೆಳೆದಿದ್ದರು. ದಿಢೀರನೆ ಬಿದ್ದ ಭಾರಿ ಮಳೆಯಿಂದಾಗಿ ಫಲ ಬಿಟ್ಟ ಬಾಳೆಗಿಡಗಳು ಸಂಪೂರ್ಣವಾಗಿ ನಾಶವಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement