ಕಾಡಾನೆಗಳ ಪ್ರತ್ಯಕ್ಷ: ಭೀತಿಯಲ್ಲಿ ಗ್ರಾಮಸ್ಥರು
ಕ.ಪ್ರ.ವಾರ್ತೆ ಅರಸೀಕೆರೆ ಮಾ 31
ಬನ್ನೇರುಘಟ್ಟ ಕಾಡಿನಿಂದ ಆಹಾರ ಹುಡುಕುತ್ತಾ ನಾಡಿಗೆ ಬಂದ 3 ಕಾಡಾನೆಗಳು ತಾಲೂಕಿನ ಕೋಡಿಹಳ್ಳಿ, ಬೆಳಗುಂಬ, ಜ್ಯೋತಿಮಲ್ಲಾಪುರ ಹಾಗೂ ತಳಲೂರು ಸುತ್ತಮುತ್ತ ಕಾಣಿಸಿಕೊಂಡು ಈ ಭಾಗದ ಜನರನ್ನು ಭಯಭೀತರಾಗುವಂತೆ ಮಾಡಿದೆ.
ಬನ್ನೇರುಘಟ್ಟ ಕಾಡಿನಿಂದ ತುಮಕೂರು ಮಾರ್ಗವಾಗಿ ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ಮಾರ್ಗವಾಗಿ ಬಂದಿರುವ ಈ ಆನೆಗಳು ಶನಿವಾರ ಸಂಜೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದ ಲಚ್ಚಾನಾಯ್ಕ ಎಂಬಾತನನ್ನು ಕೊಂದಿದ್ದು ಮತ್ತೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿವೆ. ಈ ಪುಂಡಾನೆಗಳು ನಂತರ ಅರಸೀಕೆರೆ ತಾಲೂಕಿನ ಗ್ರಾಮಾಂತರ ಪ್ರದೇಶದ ಸುತ್ತಮುತ್ತ ಲಗ್ಗೆ ಇಟ್ಟಿವೆ.
ಭಾನುವಾರ ಮುಂಜಾನೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕಾಡಾನೆಗಳನ್ನು ಕಂಡ ಸುತ್ತಮುತ್ತಲ ಗ್ರಾಮಸ್ಥರು ಭಯಭೀತರಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಇಲಾಖೆಯವರು ಅಪಾಯದ ಮುನ್ಸೂಚನೆ ಅರಿತು ಜನರನ್ನು ನಿಯಂತ್ರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ನಂತರ ತಳಲೂರು ಮಾರ್ಗವಾಗಿ ಕೋಡಿಹಳ್ಳಿಗೆ ಆಗಮಿಸಿದ ಆನೆಗಳ ಹಿಂಡು ಮಧ್ಯ ಮಧ್ಯ ಸಿಕ್ಕ ಬಾಳೆ ತೋಟ, ಮುಳ್ಳು ತಂತಿ ಕಂಬಗಳನ್ನು ಮುರಿದು ಜ್ಯೋತಿಮಲ್ಲಾಪುರ ಗ್ರಾಮಕ್ಕೆ ಲಗ್ಗೆ ಇಟ್ಟು ನೆರಳಿನ ಆಶ್ರಯದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಕುತೂಹಲಗೊಂಡ ಗ್ರಾಮಸ್ಥರು ಆನೆಗಳನ್ನು ಅಲ್ಲಿಂದ ಓಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷ ಒಂಟಿಸಲಗದ ದಾಳಿಯಿಂದ ತಾಲೂಕಿನಲ್ಲಿ ಮೂರು ಮಂದಿ ಮೃತ ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತಿಪಟೂರು ವಲಯ ಅರಣ್ಯಾಧಿಕಾರಿ ಸತ್ಯನಾರಾಯಣ್ ಇದು ಆನೆ ಕಾರಿಡಾರ್ ಆಗಿದ್ದು ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆ ಉಂಟಾದಾಗ ವರ್ಷದಲ್ಲಿ ಒಮ್ಮೊಮ್ಮೆ ಈ ಆನೆಗಳು ಈ ದಾರಿಯಲ್ಲಿ ಆಗಮಿಸುತ್ತಿವೆ. ಮನುಷ್ಯನ ಅತಿಯಾದ ದುರಾಸೆ ಹಾಗೂ ಅರಣ್ಯ ನಾಶವೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಸಂಭವನೀಯ ಅಪಾಯ ತಡೆಗಟ್ಟುವ ಉದ್ದೇಶದಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ನೆರವು ಪಡೆಯಲಾಗುತ್ತಿದೆ. ಗ್ರಾಮಸ್ಥರು ಸಂಯಮದಿಂದ ವರ್ತಿಸಬೇಕು. ಆನೆಗಳು ಸಂಜೆಯ ವೇಳೆಗೆ ಇಲ್ಲಿಂದ ಹೊರಡುವ ನಿರೀಕ್ಷೆ ಇದೆ. ಚಿಕ್ಕಮಗಳೂರು ಅರಣ್ಯ ಪ್ರದೇಶ ಅಥವಾ ಬನ್ನೇರುಘಟ್ಟಕ್ಕೆ ಆನೆಗಳನ್ನು ಕಳಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಕಾಡಾನೆ ಹಾವಳಿ ತಪ್ಪಿಸಲು ಆಗ್ರಹಿಸಿ ಇಂದು ಪ್ರತಿಭಟನೆ
ಹಾಸನ: ಕಾಡಾನೆ ಹಾವಳಿ ತಪ್ಪಿಸುವಂತೆ ಆಗ್ರಹಿಸಿ ಸಕಲೇಶಪುರ ತಾಲೂಕಿನ ಗ್ರಾಮಸ್ಥರು ಏ.1 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಮುಖಂಡ ಸಿ.ಕೆ.ರವಿ ಹಾಗೂ ಬಿ.ಎಸ್. ಹರೀಶ್ ತಿಳಿಸಿದ್ದಾರೆ. ಕಾಡಾನೆ ಹಾವಳಿಯಿಂದ ತತ್ತರಿಸಿರುವ ಚಿಕ್ಕಲ್ಲೂರು, ಕೊತ್ತನಹಳ್ಳಿ, ದೊಡ್ಡಕಲ್ಲೂರು, ಕೆರೋಡಿ, ಐಗೂರು, ಮಾಗಲು, ಸರಗಳ್ಳಿ, ಕುಂಬಾರಗೇರಿ, ಯಡಕೇರಿ, ಬಿಳ್ಳಳ್ಳಿ, ಕುಂಬ್ರಹಳ್ಳಿ ಗ್ರಾಮದ ರೈತರು ಪ್ರತಿಭಟನೆ ಮಾಡಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.
ಇದು ಆನೆ ಕಾರಿಡಾರ್ ಆಗಿದ್ದು ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆ ಉಂಟಾದಾಗ ವರ್ಷದಲ್ಲಿ ಒಮ್ಮೊಮ್ಮೆ ಈ ಆನೆಗಳು ಈ ದಾರಿಯಲ್ಲಿ ಆಗಮಿಸುತ್ತಿವೆ
-ಸತ್ಯನಾರಾಯಣ್, ತಿಪಟೂರು ವಲಯ ಅರಣ್ಯಾಧಿಕಾರಿ