ಭಾಷೆಗೆ ಮಹತ್ವ ನೀಡದ ಯುವಕರು
ಖ್ಯಾತ ವಿಜ್ಞಾನ ಲೇಖಕ ವಸುಧೇಂದ್ರ ಅಸಮಾಧಾನ
ಕ.ಪ್ರ.ವಾರ್ತೆ ಹಾಸನ ಮಾ. 31
ಇತ್ತೀಚೆಗೆ ಯುವ ಪೀಳಿಗೆ ವಿಜ್ಞಾನದತ್ತ ಒಲವು ತೋರುವ ಮೂಲಕ ಭಾಷೆಗೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ ಎಂದು ಲೇಖಕ ವಸುಧೇಂದ್ರ ಅಸಮಾಧಾನನ ವ್ಯಕ್ತಪಡಿಸಿದರು.
ನಗರದಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಭಾನುವಾರ ಯುವಜನರ ಮುಂದಿರುವ ಸವಾಲು ಮತ್ತು ಮೌಲ್ಯಗಳು ಕುರಿತು ನಡೆದ ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಧುನಿಕ ಜಗತ್ತು ಸಾಕಷ್ಟು ಆಕರ್ಷಣೆಗಳಿಂದ ಕೂಡಿದೆ. ಹೊಸ ಹೊಸ ಅಕರ್ಷಣೆಗಳು ಹೆಚ್ಚಾಗುತ್ತಿದೆ. ಆದ್ದರಿಂದ ಭಾಷೆಯ ಮೇಲೆನ ಒಲವು ಕಡಿಮೆಯಾಗಲು ಕಾರಣವಾಗಿದೆ ಎಂದರು. ಇಂತಹ ಆಕರ್ಷಣೆಗಳನ್ನು ತಪ್ಪಿಸಿಕೊಂಡು ಬದುಕು ಮತ್ತು ಮಾತೃಭಾಷೆಯನ್ನು ಉಳಿಸಿಕೊಳ್ಳುವುದು ಪ್ರಸ್ತುತ ಸವಾಲಿನ ಸಂಗತಿ. ಮನುಷ್ಯ ವಿಶಾಲ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಂಕುಚಿತ ಮನೋಭಾವಗಳು ದೂರವಾಗಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಫೇಸ್‌ಬುಕ್, ಇಂಟರ್‌ನೆಟ್‌ನಿಂದ ಯುವ ಪೀಳಿಗೆ ಅಡ್ಡ ದಾರಿ ಹಿಡಿಯುತ್ತಿದ್ದಾರೆ ಅನ್ನೋ ಕೂಗು ಹೆಚ್ಚಾಗಿದೆ. ಆದರೆ ಇದರಿಂದ ಸಮಾಜ ಅಷ್ಟೊಂದು ಕೆಟ್ಟು ಹೋಗಿಲ್ಲ ಎಂದು ಹೇಳಿದರು.
ಬದಲಾವಣೆ ಕಂಡುಕೊಳ್ಳಬೇಕು: ಜಗತ್ತು ಎಷ್ಟು ವೇಗವಾಗಿ ಬದಲಾವಣೆಯಾಗುತ್ತಿದೆಯೋ ಅದಕ್ಕೆ ಹೊಂದಿಕೊಂಡಂತೆ ಪ್ರತಿಯೊಬ್ಬರು ಬದಲಾವಣೆ ಕಂಡುಕೊಳ್ಳಬೇಕು. ಜಗತ್ತಿನ ವೇಗಕ್ಕೆ ಬದಲಾವಣೆ ಕಂಡುಕೊಳ್ಳದಿದ್ದಲ್ಲಿ ನಾವು ನಿರರ್ಥಕವಾಗುತ್ತೇವೆ. ವಿಜ್ಞಾನದತ್ತ ಒಲವು ಹೆಚ್ಚಾಗುತ್ತಿರುವುದರಿಂದ ಭಾಷೆಯನ್ನು ನಿರ್ಲಕ್ಷಿಸುವಂತಾಗಿದೆ. ಭಾಷೆಯನ್ನು ನಿರ್ಲಕ್ಷಿಸುತ್ತಿರುವುದರಿಂದ ಸಾಹಿತ್ಯ ಬಗ್ಗೆ ನಿರಾಸಕ್ತಿ ಹೆಚ್ಚಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಪೋಷಕರೇ ಮಕ್ಕಳಿಗೆ ವಿಜ್ಞಾನದತ್ತ ಒಲವು ಹೆಚ್ಚಿಸುತ್ತಿದ್ದಾರೆ. ಭಾಷೆಯನ್ನು ಅಭ್ಯಸಿಸುವಂತೆ ಹೇಳುತ್ತಿಲ್ಲ. ಇದರಿಂದ ಪ್ರಾರಂಭದ ಹಂತದಲ್ಲಿಯೇ ಭಾಷೆಯನ್ನು ಚಿವುಟಿದಂತಾಗುತ್ತದೆ. ಎಲ್ಲಿಯವರೆಗೂ ಭಾಷೆಗೆ ಮಹತ್ವ ಸಿಗುವುದಿಲ್ಲವೋ ಅಲ್ಲಿಯ ತನಕ ಭಾಷೆ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಯುವ ಪೀಳಿಗೆಯು ತಮ್ಮ ಪಾಠ-ಪ್ರವಚನದ ಚೊತೆಗೆ ಭಾಷೆಗೆ ಹೆಚ್ಚಿನ ಒಲವನ್ನು ತೋರಿ ಭಾಷೆ ಉಳಿಸಿ ಬೆಳೆಸಬೇಕು ಎಂದು ಹೇಳಿದರು. ಯಾವುದೇ ಕೆಲಸ ಮೌಲ್ಯಯುತವಾಗಿ ಮಾಡಬೇಕು. ಮೌಲ್ಯಗಳು ಇಲ್ಲದಿದ್ದಾಗ ಏನೇ ಒಳ್ಳೆಯ ಕೆಲಸಗಳನ್ನು ಮಾಡಿದರೂ ಅದು ನಿಷ್ಪ್ರಯೋಜಕವಾಗುತ್ತದೆ. ಯುವ ಪೀಳಿಗೆ ಮೌಲ್ಯ ಅರಿತುಕೊಂಡು ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಮಾದರಿ ಪ್ರಜೆಯಾಗಬೇಕು ಎಂದು ಕರೆ ನೀಡಿದರು.
ಲೇಖಕ ಸಿ.ಕೆ.ಹರೀಶ್ ಆಶಯ ನುಡಿದರು. ಡಾ.ಜಾನಕಿ ಸುಂದರೇಶ್ ಮೌಲ್ಯಗಳ ಬೆಳವಣಿಗೆಯಲ್ಲಿ ಸಾಹಿತ್ಯದ ಪಾತ್ರ ಎಂಬ ವಿಚಾರಗೋಷ್ಠಿ ನಡೆಸಿದರು. ಶೃತಿ ಶರ್ಮಾ, ಡಾ.ಶ್ರೀಹರ್ಷ, ಸಿ.ನಾಗೇಶ್ ಸಂವಾದ ನಡೆಸಿದರು.