ರಾಜ್ಯದಲ್ಲಿ ಜೆಡಿಎಸ್ ಪರ ಅಲೆ
ಕನ್ನಡಪ್ರಭವಾರ್ತೆ ಅರಕಲಗೂಡು ಮಾ.31
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲಿ ಕೈಕೊಂಡ ಅಭಿವೃದ್ಧಿ ಕಾರ್ಯಗಳು ಇಂದಿಗೂ ರಾಜ್ಯದ ಜನತೆಯ ಮನದಲ್ಲಿದ್ದು ಅದನ್ನು ಮನಗಂಡಿರುವ ಜನತೆ ಮತ್ತೆ ಜೆಡಿಎಸ್ನ್ನು ಬೆಂಬಲಿಸಲ್ಲಿದ್ದಾರೆ ಎಂದು ಮಾಜಿ ಶಾಸಕ ಡಾ. ಎ.ಟಿ. ರಾಮಸ್ವಾಮಿ ಹೇಳಿದರು.
ರಾಮನಾಥಪುರದ ಕೋಟವಾಳು ಗ್ರಾಮದಲ್ಲಿ ನಡೆದ ಕಾರ್ಯಕರ್ತರ, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಮುಂದಿನ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬಂದಲ್ಲಿ ರೈತರ ಎಲ್ಲಾ ಸಾಲ ಮನ್ನಾ ಮಾಡಲಾಗುವುದು ಎಂದು ಮುಂದೆ ಕುಮಾರಸ್ವಾಮಿ ಈಗಾಗಲೇ ಘೋಷಿಸಿದ್ದಾರೆ ಎಂದರು.
ರಾಜ್ಯದ ಅಭಿವೃದ್ಧಿಗಾಗಿ ಜನ ಬಿಜೆಪಿಗೆ ಅಧಿಕಾರ ನೀಡಿದರು. ಅದರೆ ಅದನ್ನು ದುರುಪಯೋಗ ಪಡಿಸಿಕೊಂಡ ಬಿಜೆಪಿ ಮುಖಂಡರು ತಮ್ಮ ಅಸ್ತಿಯನ್ನು ಹೆಚ್ಚಿಸಿಕೊಂಡರೇ ವಿನಾ ಅಭಿವೃದ್ಧಿ ಕಡೆ ಚಿಂತಿಸಲಿಲ್ಲ ಎಂದು ಟೀಕಿಸಿದರು. ಪ್ರಸ್ತುತ ರಾಜ್ಯದಲ್ಲಿ ಜಾತ್ಯತೀತ ಜನತಾದಳದ ಬಗ್ಗೆ ಬಲವಾದ ಅಲೆ ಎದ್ದಿದೆ ಎಂದೂ ತಿಳಿಸಿದರು.
ಜೆಡಿಎಸ್ ಮುಖಂಡ ಕೋಟವಾಳು ಬಸವರಾಜಶೆಟ್ಟಿ, ಕಾಳೇನಹಳ್ಳಿ ತಿಮ್ಮೇಗೌಡ, ಬಸವಪಟ್ಟಣದ ಚಂದ್ರಶೇಖರಯ್ಯ, ನಿವೃತ್ತ ಅಧಿಕಾರಿ ಜಗನ್ನಾಥ್, ತಾಪಂ ಮಾಜಿ ಅಧ್ಯಕ್ಷ ಸಂತೋಷಗೌಡ, ಬಸವಪಟ್ಟಣ ಬಿ.ಸಿ.ವೀರೇಶ್, ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್, ತಾಲೂಕು ಜೆಡಿಎಸ್ ಹಿಂದುಳಿದ ವರ್ಗದ ಅಧ್ಯಕ್ಷ ಅರ್.ಎಂ. ಸಾದೀಕಾಸಾಬ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ರುದ್ರಪಟ್ಟಣ ಸತೀಶ್, ಸದಸ್ಯ ಬಸವೇಗೌಡ ಗ್ರಾಮ ಪಂಚಾಯಿತಿ ಸದಸ್ಯ ಅರ್.ಎಂ. ಗೋವಿಂದೇಗೌಡ, ಯುವ ಮುಖಂಡ ಅನೀಫ್, ಜಲೇಂದ್ರ, ಶೇಖರ್ ಮೊದಲಾದವರು ಇದ್ದರು. ಗೋವಿಂದೇಗೌಡ ಸ್ವಾಗತಿಸಿದರು.
ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
ಕ.ಪ್ರ. ವಾರ್ತೆ ಹೊಳೆನರಸೀಪುರ ಮಾ. 31
ಕಾನೂನಿನ ಅರಿವು ಸಮಾಜದ ಮುಖ್ಯ ವಾಹಿನಿಯಲ್ಲಿ ಉತ್ತಮ ನಾಗರಿಕನನ್ನಾಗಿ ಮಾಡುತ್ತದೆ ಎಂದು ಜೆಎಂಎಫ್ಸಿ ಹಿರಿಯ ನ್ಯಾಯಾಧೀಶ ಡಿ.ಕಂಭೇಗೌಡ ಹೇಳಿದರು.
ತಾಲೂಕಿನ ನಾನಾ ಕಡೆಗಳಲ್ಲಿ ನಡೆಯಲಿರುವ ಕಾನೂನು ಅರಿವು-ನೆರವು ಕಾನೂನು ಸಾಕ್ಷರತಾ ರಥಕ್ಕೆ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಗೊತ್ತಿಲ್ಲದೆ ಅಪರಾಧ ಮಾಡಿದರೂ ಅದು ಕ್ಷಮಾರ್ಹವಲ್ಲ ಎಂದ ಅವರು, ಈ ನಿಟ್ಟಿನಲ್ಲಿ ಕಾನೂನು ಸಮಿತಿ ಕೈಗೊಂಡಿರುವ ಯೋಜಿತ ಕಾರ್ಯಕ್ರಮಗಳು ಸ್ವಾಗತಾರ್ಹ. ಜನತೆ ಕಾನೂನು ಸದುದ್ದೇಶ ಪಡಿಸಿಕೊಳ್ಳಲು ಮುಂದಾಗಬೇಕೆಂದರು.ಪಟ್ಟಣದಿಂದ ಹೊರಟ ಕಾನೂನು ಸಾಕ್ಷರತಾ ರಥ ಕೆರಗೋಡುನಲ್ಲಿ ಪ್ರಥಮ, ಬಿದರಕ್ಕದಲ್ಲಿ ದ್ವಿತೀಯ ಹಾಗೂ ಮಧ್ಯಾಹ್ನ ಹಳ್ಳಿಮೈಸೂರು ಗ್ರಾಪಂ ಆವರಣದಲ್ಲಿ ಮೂರನೇ ಅಧಿವೇಶನ ಪೂರ್ಣಗೊಳಿಸಿತು.ನ್ಯಾ. ಸಿ.ವಿ.ಸನತ್, ತಹಸೀಲ್ದಾರ್ ಈಶ್ವರಪ್ಪ, ಎಪಿಪಿ ಮಲ್ಲಿಕಾರ್ಜುನ, ದೊಡ್ಡಗೌಡರ್, ವಕೀಲರ ಸಂಘದ ಅಧ್ಯಕ್ಷ ಆರ್. ಭಾಷ್ಯಂ, ಸಹಾಯಕ ನಿರ್ದೇಶಕ ರಂಗರಾಜು ಶ್ರೀರಾಮ ಕಲಾತಂಡದ ಕಲಾವಿದ ಪಿ.ಚನ್ನರಾಯಿ ಇದ್ದರು.
ಇತಿಹಾಸ ಮಾನವ ಜೀವನದ ಮೂಲ ಸೆಲೆ
ಹೊಳೆನರಸೀಪುರ: ಇತಿಹಾಸ ನಿಂತ ನೀರಲ್ಲ, ಅದು ಸದಾ ಕಾಲ ಹರಿಯುತ್ತಿರುವ ಜೀವಜಲವಿದ್ದಂತೆ ಎಂಬ ಮಾತಿನಂತೆ ಇಂದಿಗೂ ಅನ್ವೇಷಣೆಗಳ ಫಲವಾಗಿ ಇತಿಹಾಸ ಮರುಹುಟ್ಟು ಪಡೆಯುತ್ತಿದೆ. ಇತಿಹಾಸದ ಅಧ್ಯಯನ ಮಹತ್ವಪೂರ್ಣವಾದುದು ಎಂದು ಗೊರೂರಿನ ಎ.ಎನ್.ವಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ನೈಮತ್ತುಲ್ಲಾ ಷರೀಫ್ ಅಭಿಪ್ರಾಯಪಟ್ಟರು.
ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದಿಂದ ಏರ್ಪಡಿಸಲಾಗಿದ್ದ ಮಧ್ಯಕಾಲೀನ ಭಾರತದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತಿನಂತೆ ಮನುಕುಲದ ಜೀವನ ಚಿತ್ರಣವನ್ನು ಬಿಂಬಿಸುವುದು ಇತಿಹಾಸವಾಗಿದೆ ಎಂದು ಹೇಳಿದರು. ಪ್ರೊ.ಚಂದ್ರಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಬಿ.ಇರ್ಷಾದ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಬಸವಣ್ಣ ಅವರು ಮಾತನಾಡಿದರು.