ಹಿಂದುಳಿದ ಜಾತಿ, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲು ಆಗ್ರಹ
ಕ.ಪ್ರ.ವಾರ್ತೆ ಹಾಸನ ಮಾ. 31
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಹಾಸನ ಕ್ಷೇತ್ರಕ್ಕೆ ಹಿಂದುಳಿದ ಜಾತಿ, ವರ್ಗ, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಂತೆ ಹಿಂದುಳಿದ ಜಾತಿ, ವರ್ಗ ಅಲ್ಪಸಂಖ್ಯಾತರು ಮುಖಂಡರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಚನ್ನವೀರಪ್ಪ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರು ಸಾಕಷ್ಟು ಸಾಮಾಜಿಕ, ಧಾರ್ಮಿಕ, ಜನಪರ ಕೆಲಸಗಳನ್ನು ಕೈಕೊಂಡು ಜನಾನುರಾಗಿಯಾಗಿದ್ದಾರೆ. ನಾಲ್ಕು ಬಾರಿ ನಗರಸಭೆ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಜೆಡಿಎಸ್ ಮುಖಂಡರು ಟಿಕೆಟ್ ನೀಡಿದರೆ ಗೆಲವು ಖಚಿತ ಎಂದು ಮುಖಂಡ ಲಕ್ಷ್ಮಣ, ಮಂಜುನಾಥ್, ರಾಮು, ರಾಜೀವ್, ಸರ್ದಾರ್‌ಪಾಷ, ರಾಮಯ್ಯ ತಿಳಿಸಿದ್ದಾರೆ.
ಹಿಂದಿನಿಂದಲೂ ಬಹುಸಂಖ್ಯಾತ ಕೋಮಿಗೇನೇ ಆದ್ಯತೆ ನೀಡಲಾಗಿದೆ.
ಈ ಬಾರಿ ಹಿಂದುಳಿದ ಜಾತಿ, ವರ್ಗ, ಅಲ್ಪಸಂಖ್ಯಾತರ ಕೋಮಿನ ಆಕಾಂಕ್ಷಿಗಳಿಗೆ ಜೆಡಿಎಸ್ ಅವಕಾಶ ಕಲ್ಪಿಸಿಕೊಟ್ಟಲ್ಲಿ ಜೆಡಿಎಸ್ ಸದೃಢವಾಗುವುದರಲ್ಲಿ ಯಾವ ಸಂದೇಹವಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ದಿ. ಮುಖ್ಯಮಂತ್ರಿ ದೇವರಾಜ ಅರಸು ಹಿಂದುಳಿದ ಅಲ್ಪಸಂಖ್ಯಾತ ವರ್ಗದವರನ್ನು ಗುರುತಿಸಿ ಅವರ ಅಭ್ಯರ್ಥಿಗೆ ಪಣತೊಟ್ಟು ಜನಪ್ರೀತಿ ಗಳಿಸಿದ್ದರು. ಆದರಂತೆ ದೇವೇಗೌಡರು ಜಿಲ್ಲೆಯಲ್ಲಿ ಹಿಂದುಳಿದ ಅಲ್ಪಸಂಖ್ಯಾತ ವರ್ಗದ ನಾಯಕರನ್ನು ಗುರುತಿಸಿ ಚುನಾವಣಾ ಟಿಕೆಟ್ ನೀಡಿದರೆ ಅವರನ್ನು ಜನತೆ ನೆನೆಯುತ್ತಾರೆ ಎಂದರು.
ಚುನಾವಣಾ ನಿಯಮದ ಪ್ರಕಾರ ಶೇ. 50 ರಷ್ಟು ಮಹಿಳೆಯರಿಗೆ ಅವಕಾಶವಿದ್ದು, ಅದರಂತೆ ಸಮಾಜದ ಹಿಂದುಳಿದ ಅಲ್ಪಸಂಖ್ಯಾತ ವರ್ಗಕ್ಕೆ ತಮ್ಮದೇ ಆದ ಮೀಸಲಾತಿ ಇದೆ. ಇದು ಅನುಷ್ಠಾನಕ್ಕೆ ಬರಬೇಕು. ಇದರಿಂದ ಎಲ್ಲ ವರ್ಗಕ್ಕೆ ಸಮಾನತೆ ಸಿಗುತ್ತದೆ ಎಂದು ನುಡಿದರು.