ಹಾಸನ

ಹೊಯ್ಸಳ ಹುಲಿ ಕೊಂದ ಸ್ಥಳಕ್ಕೆ ಭೇಟಿ, ಮಾಹಿತಿ ಸಂಗ್ರಹ

ಕ.ಪ್ರ. ವಾರ್ತೆ೤ ಹೊಳೆನರಸೀಪುರ೤ ಮೇ 10
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರಾ ಕೂಟದ ವಿದ್ಯಾರ್ಥಿಗಳು ಕೂಟದ ಸಂಚಾಲಕ, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಂಶುಪಾಲರಾದ ಪ್ರೊ. ಎಂ.ಬಿ.ಇರ್ಷಾದ್ ನೇತೃತ್ವದಲ್ಲಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಗೆ ತನ್ನದೇ ಆದ ವಿಶಿಷ್ಟ ಕಾಣಿಕೆಯನ್ನು ನೀಡಿದ ಹೊಯ್ಸಳ ಸಾಮ್ರಾಜ್ಯದ ಉಗಮ ಸ್ಥಳವಾದ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮಕ್ಕೆ ಭೇಟಿ ನೀಡಿ ಹೊಯ್ಸಳ ಸಾಮ್ರಾಜ್ಯದ ಉಗಮ, ಆಳ್ವಿಕೆ ಕುರಿತಾದ ಮಾಹಿತಿಗಳನ್ನು ಕಲೆ ಹಾಕಿದರು.
 ತನ್ನ ವಿಭಿನ್ನ ಮತ್ತು ವಿಶಿಷ್ಟ ಕಲಾ ಪರಂಪರೆಯನ್ನು ಜಗತ್ಪ್ರಸಿದ್ಧ ಗೊಳಿಸಿ, ಕಲೋಪಾಸಕರ ನೇತ್ರ ಪಠಲದಲ್ಲಿ ಅಮರತ್ವ ಪಡೆದ ಹೊಯ್ಸಳ ಸಾಮ್ರಾಜ್ಯ ಅದರಲ್ಲೂ ಬಹುಮುಖ್ಯವಾಗಿ ಜಿಲ್ಲೆಯ ಐತಿಹಾಸಿಕ ಪರಂಪರೆಯ ಕೀರ್ತಿಯನ್ನು ತನ್ನ ಶಿಲ್ಪ ವೈಭವಗಳ ಮೂಲಕ ವಿಶ್ವವಿಖ್ಯಾತಗೊಳಿಸಿದ ಒಂದು ಅವಿಸ್ಮರಣೀಯ ಸಾಮ್ರಾಜ್ಯದ ಉಗಮ ಸ್ಥಳ ಈ ಅಂಗಡಿ ಗ್ರಾಮ ಎಂದು ಪ್ರೊ. ಎಂ.ಬಿ.ಇರ್ಷಾದ್ ತಿಳಿಸಿದರು.
 ಇತಿಹಾಸದ ಕಾಲಗರ್ಭದಲ್ಲಿ ಗತಿಸಿಹೋದ ಘಟನಾವಳಿಗಳನ್ನು ಮರಳಿ ಜ್ಞಾಪಿಸುವ ಅಂಗಡಿ ಗ್ರಾಮ ಹೊಯ್ಸಳ ಸಾಮ್ರಾಜ್ಯದ ಮೊದಲ ಅರಸನೆಂದು ಶಾಸನಗಳಲ್ಲಿ ಬಿಂಬಿತವಾಗಿರುವ, ಹೊಯ್ಸಳ ವಂಶದ ಮೂಲ ಪುರುಷನೆಂಬ ಇತಿಹಾಸ ಹೊಂದಿರುವ ಸಳನ ಆಳ್ವಿಕೆಯ ಕುರುಹುಗಳು ಇಲ್ಲಿ ಅಷ್ಟಾಗಿ ಇಲ್ಲದಿದ್ದರೂ, ಹೊಯ್ಸಳರ ರಾಜ್ಯ ಲಾಂಛನ ಮತ್ತು ಚಿಹ್ನೆಗೆ ಸಂಬಂಧಿಸಿದ ಐತಿಹಾಸಿಕ ಮಹತ್ವವನ್ನು ಸಾರುವ ಶಾಸನಗಳಲ್ಲಿ ಅದರಲ್ಲೂ ಮುಖ್ಯವಾಗಿ ಎಫಿಗ್ರಾಫಿಯಾ ಆಫ್ ಕರ್ನಾಟಕದ ಸಂಪುಟದಲ್ಲಿ ಬೆಳವಾಡಿ ಶಾಸನ (560) ಕ್ರಿ.ಶ 1207ರಲ್ಲಿ ಬರೆಯಲ್ಪಟ್ಟಿರುವುದಾಗಿ ಅವರು ವಿವರಿಸಿದರು.
 ಹೊಯ್ಸಳರ ಪ್ರಥಮ ರಾಜಧಾನಿ ಶಶಕಪುರ(ಅಂಗಡಿ) ಹೇಗೆ ನಿರ್ಮಾಣವಾಯಿತೆಂಬುದರ ಬಗೆಗಿನ ಇತಿಹಾಸವನ್ನು ಈ ಶಾಸನವು ತಿಳಿಸುತ್ತದೆ ಎಂದ ಅವರು, ಅಂಗಡಿ ಗ್ರಾಮಕ್ಕೆ ಪ್ರಾಚೀನ ಹೆಸರು ಸೊಸೆಯೂರು ಎಂದು ಇತ್ತು ತಿಳಿಸಿದರು.
 ಹಿಂದೊಮ್ಮೆ ದಟ್ಟವಾದ ಗೊಂಡಾರಣ್ಯದಲ್ಲಿ ಜೈನ ಮುನಿಗಳ ಜ್ಞಾನ ತಪಸ್ಸಿಗೆ ಯೋಗ್ಯವಾದ ಸ್ಥಳ ಇದಾಗಿತ್ತೆಂದು, ಚಾಳುಕ್ಯ ನಾಡಿನಿಂದ ಮಲ್ಲಚಂದ್ರದೇವ ಇಲ್ಲಿಗೆ ಬಂದನೆಂದು ವಿಷಯ 10ನೇ ಶತಮಾನದ ಶಾಸನದಲ್ಲಿ ಉಲ್ಲೇಖಿಸಲಾಗಿದೆ ಎಂತಲೂ ನುಡಿದರು.
  ಅಂಗಡಿ ಗ್ರಾಮದ ಹೊಯ್ಸಳರ ಕಾಲದ ವಾಸಂತಿಕ ದೇವಾಲಯ ಹಾಗೂ ಮಕರ ಜೀನಾಲಯ, ನೇಮೀನಾಥ ಬಸದಿ, ಶಾಂತಿನಾಥ ಬಸದಿ, ವೈಷ್ಣವ ಪಂಥದ ಕೇಶವ ದೇವಾಲಯ, ಶೈವ ಪಂಥದ ಪಾತಾಳ ರುದ್ರೇಶ್ವರ ದೇವಾಲಯ ಹಾಗೂ ಮಲ್ಲೇಶ್ವರ, ಮಲ್ಲಿಕಾರ್ಜುನ ದೇವಾಲಯಗಳು ಈ ಸ್ಥಳದ ಮಹಿಮೆಯನ್ನು ಸಾರುತ್ತವೆ ಎಂದರು.
 ಒಂದೊಮ್ಮೆ ಈಗಿನ ಅಂಗಡಿ ಗ್ರಾಮದ ವಾಸಂತಿಕಾದೇವಿಯ ಗುಡಿ ಮುಂದೆ ಸುದತ್ತಾಚಾರ್ಯರು ತಮ್ಮ ಶಿಷ್ಯರಿಗೆ ಪಾಠ ಪ್ರವಚನ ಕಲಿಸುತ್ತಿದ್ದ ಸಂದರ್ಭದಲ್ಲಿ, ಹುಲಿಯೊಂದು ದಿಢೀರನೆ ಗುಡಿಯ ಬಳಿ ಇದ್ದ ಶಿಷ್ಯಾರ್ಥಿಗಳ ಮೇಲೆ ಎರಗಲು ಬಂದಾಗ ಸುದತ್ತಾಚಾರ್ಯರು ಕೂಡಲೇ ತನ್ನ ಶಿಷ್ಯನಾದ ಸಳನನ್ನು ಕೂಗಿ ಹುಲಿಯನ್ನು ಕೊಲ್ಲುವಂತೆ (ಸಳ-ಹೊಯ್ಸುಳ ಹುಲಿಯನ್ನು ಕೊಲ್ಲು) ಕೂಗಿದರಂತೆ. ಕೂಡಲೇ ಸ್ಥಳದಲ್ಲಿದ್ದ ಸಳನು ತನ್ನ ಗುರುಗಳ ಆಜ್ಞೆಯಂತೆ ಹುಲಿಯೊಂದಿಗೆ ವೀರಾವೇಶದಿಂದ ಹೋರಾಡಿ ಹುಲಿಯನ್ನು ಕೊಂದ ಸ್ಥಳವೇ ಈಗಿನ ಅಂಗಡಿ ಗ್ರಾಮ ಎಂದು ತಿಳಿಸಿದರು.
 ಈ ಸ್ಥಳವೇ ಮುಂದೆ ಶಶಕಪುರ ಎಂಬ ಹೆಸರು ಪಡೆದು ಕನ್ನಡದಲ್ಲಿ ಸೊಸೆಯೂರು ಎಂದು ನಾಮಾಂಕಿತವಾಯಿತು ಎಂದ ಅವರು, ಈ ಸ್ಥಳದ ಉಲ್ಲೇಖ ಶಾಸನಗಳಲ್ಲಿ ಉಲ್ಲೇಖಿತವಾಗಿದೆ ಎಂದು ಮಾಹಿತಿ ನೀಡಿದರು. ಹೊಯ್ಸಳ ಸಾಮ್ರಾಜ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಲ್ಲದೇ, ಕ್ರಿ.ಶ 1062 ರಲ್ಲಿ ವಿನಯಾದಿತ್ಯ ತನ್ನ ರಾಜಧಾನಿಯನ್ನು ಸೊಸೆಯೂರಿನಿಂದ(ಶಶಕಪುರ-ಅಂಗಡಿ) ಬೇಲೂರಿಗೆ ವರ್ಗಾಯಿಸಿದನೆಂದು ಹೇಳಿದರು.
 ಆದರೆ ಅಂಗಡಿ ಗ್ರಾಮದಲ್ಲಿರುವ ಈ ಸ್ಮಾರಕಗಳು ಆಧುನಿಕತೆಯ ಸೋಂಕು ತಗುಲಿ ಐತಿಹಾಸಿಕ ಕುರುಹುಗಳು ಮರೆಯಾಗುತ್ತಿವೆ ಎಂದು ವಿಷಾದಿಸಿದ ಅವರು, ಹಿಂದೆ ಇದ್ದ ಚರಿತ್ರೆಯ ಸೊಬಗು ಮರೆಯಾಗಿ ಎಲ್ಲೆಂದರಲ್ಲಿ ನಾವು ಕಾಣುವ ಅಂಗಡಿ ಗ್ರಾಮದಲ್ಲಿ ಆಧುನಿಕತೆ ಗಾಲಿ ಬೀಸತೊಡಗಿವೆ ಎಂದ ಅವರು, ನಮ್ಮ ಸಂಸ್ಕತಿ ಹಾಗೂ ಪರಂಪರೆಯ ಕುರುಹುಗಳನ್ನು ಹೆಕ್ಕಿ ತೆಗೆದು ಅವುಗಳನ್ನು ಜತನದಲ್ಲಿ ಕಾಪಾಡಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದೂ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET-UG 2026: ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ 'ಸೋರಿಕೆ' ಆರೋಪ ತಳ್ಳಿಹಾಕಿದ NTA; ಸುಳ್ಳು ಸುದ್ದಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ಅಲ್ಪ ಜ್ಞಾನ ಅಪಾಯಕಾರಿ: NFHS-6 ಸಂಶೋಧನೆಗಳ ಕುರಿತು ಖರ್ಗೆ ವಿರುದ್ಧ ನಡ್ಡಾ ವಾಗ್ದಾಳಿ

ಈ ಬೆದರಿಕೆಗಳನ್ನು ನಿಲ್ಲಿಸಿ, ನಾಗಾ ಬಾಬು: DCM ಪವನ್ ಕಲ್ಯಾಣ್ ಸಹೋದರನಿಗೆ ಪ್ರಕಾಶ್ ರಾಜ್ ಎಚ್ಚರಿಕೆ!

ಕಾಂಗ್ರೆಸ್ ಸಚಿವ ಸಂಪುಟ ಭಿನ್ನಮತ ಶಮನ: ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾ ರೆಡ್ಡಿ!

'ಇದು ಕೇವಲ ಟ್ರೇಲರ್ ಅಷ್ಟೇ.. CJP ಪ್ರತಿಭಟನೆ ಬಳಿಕ ಅಭಿಜೀತ್ ದಿಪ್ಕೆ ಮೊದಲ ಪ್ರತಿಕ್ರಿಯೆ..

SCROLL FOR NEXT