ಅಕ್ಷರ ದಾಸೋಹ ನೌಕರರ ಧರಣಿ
ಹಾಸನ: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರು ಸಿಐಟಿಯು ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ನಡೆಸಿ ಎನ್.ಆರ್.ವೃತ್ತದ ಮೂಲಕ ತಾಲೂಕು ಪಂಚಾಯ್ತಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿದರು.
ದೇಶದ ಅಭಿವೃದ್ಧಿಗೆ ಪೂರಕವಾಗಿ ಪ್ರತಿ ಮಗು ಶಿಕ್ಷಣ ಪಡೆಯಬೇಕು. ಮಗು ಶಿಕ್ಷಣಕ್ಕೆ ಆಕರ್ಷಿತವಾಗುವ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೂ 69,23,932 ಮಕ್ಕಳಿಗೆ 1,03,874 ಮಹಿಳೆಯರು ಅಡುಗೆ ಮಾಡಿ ಬಿಸಿಯೂಟ ಸಿದ್ಧಪಡಿಸಲಾಗುತ್ತಿದೆ. ಇವರಿಗೆ ಯಾವ ಸೇವಾ ಸೌಲಭ್ಯಗಳು ಹಾಗೂ ಕನಿಷ್ಠ ವೇತನ ಇಲ್ಲದೆ ದಾಸೋಹ ನೌಕರರು ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಅಂಕಿಅಂಶದ ಪ್ರಕಾರ ಹಾಜರಾತಿಯಲ್ಲಿ ಈ ಯೋಜನೆಯಿಂದ ಪ್ರಗತಿ ಕಾಣಲಾಗಿದೆ. ಈ ಯೋಜನೆ ಅಭಿವೃದ್ಧಿಗಾಗಿ ಕಳೆದ 11 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಡ ಮಹಿಳೆಯರ ಬೇಡಿಕೆಗೆ ಸರ್ಕಾರ ಸ್ಪಂದಿಸುವಂತೆ ಒತ್ತಾಯಿಸಿದರು.
2001ರಿಂದ ಅಕ್ಷರ ದಾಸೋಹ ಯೋಜನೆಯಲ್ಲಿ ಸುಮಾರು 1 ಲಕ್ಷ ಮಹಿಳೆಯರು ಯಾವುದೇ ಸವಲತ್ತು ಇಲ್ಲದೆ ದಿನಕ್ಕೆ 38 ರು.ಗೆ ದುಡಿಯುತ್ತಿದ್ದಾರೆ. ಈಗ ಕೆಲಸದ ಅವಧಿ ಬೆಳಗ್ಗೆ 9ರಿಂದ 3ರವರೆಗೆ ಆಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಅಡುಗೆಯವರ ಗೌರವ ಧನ ದಿನಕ್ಕೆ 150 ರು. ಇದೆ. ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವವರಿಗೆ 174 ರು.ಕೊಡಲಾಗುತ್ತದೆ. ಸರ್ಕಾರದ ಯಾವುದೇ ವಿಬಾಗದಲ್ಲಿ ದುಡಿಯವವರಿಗೆ 130ರು.ನಿಂದ 150ರು.ಗಳಿಗೆ ಕಡಿಮೆ ಇಲ್ಲದಂತೆ ಕೂಲಿಯನ್ನು ನೀಡಲಾಗುತ್ತದೆ.
ಈ ಯೋಜನೆಯಿಂದ ಗೈರು ಹಾಜರಾತಿಯ ಪ್ರಮಾಣ ಕಡಿಮೆಯಾಗಿ ಮಧ್ಯಾಹ್ನದ ನಂತರವು ಶಾಲಾ ಚಟುವಟಿಕೆಯಲ್ಲಿ ಮಕ್ಕಳು ಕ್ರಿಯಾತ್ಮಕವಾಗಿ ಭಾಗವಹಿಸುತ್ತಿರುವುದು ಕಂಡು ಬಂದಿದೆ ಎಂದು ಇಲಾಖಾ ವರದಿಗಳು ತಿಳಿಸಿವೆ.
ಕಳೆದ ಮೇ 17-18 ರಂದು ನಡೆದ 45ನೇ ಐಎಲ್‌ಸಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ದುಡಿಯುವ ಕಾರ್ಯಕರ್ತರಿಗೆ ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ ಮತ್ತು ಕೆಲಸದ ಭದ್ರತೆ ಒದಗಿಸಬೇಕೆಂದೂ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸಿನ ಆಧಾರದಲ್ಲಿ ಬಿಸಿಯೂಟ ನೌಕರರಿಗೆ ಕನಿಷ್ಟ 3 ಸಾವಿರ ರು.ಗಳನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಬಾರದು, ಬಿಹಾರದಲ್ಲಿ ಬಿಸಿಯೂಟ ಯೋಜನೆಯಲ್ಲಿ ಆದ ಘಟನೆಗಳನ್ನು ಆಧರಿಸಿ ರಾಜ್ಯದ ದಿನಪತ್ರಿಕೆಗಳಲ್ಲಿ ಬಂದ ಸುದ್ದಿಯ ಕುರಿತು ವಿಧಾನ ಪರಿಷತ್‌ನಲ್ಲಿ ನಡೆದ ಚರ್ಚೆಯಲ್ಲಿ ಶಿಕ್ಷಣ ಮಂತ್ರಿಗಳು ಕಾರ್ಪೋರೇಟ್ ಸಂಸ್ಥೆಗಳಿಗೆ ಬಿಸಿಯೂಟದ ಯೋಜನೆಯನ್ನು ವಹಿಸಿ ಕೊಡುತ್ತೇನೆ ಎಂಬುದಾಗಿ ತಿಳಿಸಿದ್ದರು. ಸರ್ಕಾರದ ಈ ಪ್ರಯತ್ನ ನಿಲ್ಲಬೇಕು.
ಈಗಾಗಲೇ ಬಿಸಿಯೂಟ ಖಾಸಗೀಕರಣದ ಭಾಗವಾಗಿ 40 ಸಾವಿರ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ, ಇಸ್ಕಾನ್‌ನಂತಹ ಸಂಸ್ಥೆಗಳು ಸರ್ಕಾರದ ಅನುದಾನ ಪಡೆದು ಮತ್ತೆ ಹೊರಗಿನ ವ್ಯಕ್ತಿಗಳು, ಸಂಸ್ಥೆಗಳು ಮತ್ತು ವಿದೇಶಗಳಲ್ಲಿ ಸಹಸ್ರ ಕೋಟಿಗಟ್ಟಲೆ ನಿಧಿ ಸಂಗ್ರಹಿಸಿ ಬಿಸಿಯೂಟವನ್ನು ವ್ಯಾಪಾರವಾಗಿ ಮಾಡಿಕೊಂಡಿದ್ದಾರೆ.
ಇಲಾಖಾ ಮಾರ್ಗದರ್ಶನದಂತೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 93 ಸಂಸ್ಥೆಗಳು ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಮಾತ್ರ ಈ ಯೋಜನೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೆ ಈ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಬಾರದು.
ಒಂದು ವೇಳೆ ಖಾಸಗಿ ಸಂಸ್ಥೆಗಳು ಸಹಾಯ ಮಾಡಿದರೆ ಆ ಹಣವನ್ನು ಯೋಜನೆಯ ಇನ್ನಿತರ ಅಂದರೆ ಕಟ್ಟಡ ಪರಿಕರಗಳಿಗೆ ಉಪಯೋಗಿಸಬಹುದು.
ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಯೋಜನೆಯ ಅಧಿಕಾರಿಗಳಿಗೆ ಮತ್ತು ಅಡಿಗೆ ಸಿಬ್ಬಂದಿಗೆ ನೀಡಬೇಕು. ಇದರಿಂದ ಶಿಕ್ಷಕರ ಬಿಸಿಯೂಟದ ಜವಾಬ್ದಾರಿ ಕಡಿಮೆ ಮಾಡಬಹುದು.
ಸಾಮಾಜಿಕ ಭದ್ರತೆಯ ಭಾಗವಾಗಿ ಕೇಂದ್ರದ ಜನಶ್ರೀ ಯೋಜನೆಯನ್ನು ಜಾರಿ ಮಾಡುವುದರಿಂದ ಬಿಸಿಯೂಟ ನೌಕರರ ಮಕ್ಕಳಿಗೆ ಮತ್ತು ನೌಕರರಿಗೆ ಸಾಕಷ್ಟು ಪ್ರಯೋಜನವಾಗುವುದರಿಂದ ಈ ಯೋಜನೆಯನ್ನು ಎಲ್ಲಾ ನೌಕರರಿಗೆ ವಿಸ್ತರಿಸಬೇಕು. ಹಾಜರಾತಿ ಆಧಾರದಲ್ಲಿ ಕಳೆದ 11 ವರ್ಷದಿಂದ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿಯವರನ್ನು ಕೆಲಸದಿಂದ ತೆಗೆಯುವ ಕ್ರಮ ನಿಲ್ಲಬೇಕು. ಹಾಜರಾತಿ ಆಧಾರದಲ್ಲಿ ಶಾಲೆಗಳನ್ನು ವಿಲೀನಗೊಳಿಸುವಾಗ ಶಿಕ್ಷಕರನ್ನು ವರ್ಗಾವಣೆ ಮಾಡುವ ಹಾಗೆ ಅಡುಗೆಯವರನ್ನು ಹತ್ತಿರದ ಶಾಲೆಗಳಿಗೆ ವರ್ಗಾವಣೆ ಮಾಡಬೇಕು.
ಬರಗಾಲದಲ್ಲಿ ಹಾಗೂ ವಿಶೇಷ ರಜಾದಿನಗಳಲ್ಲಿ ಕೆಲಸ ಮಾಡಿದರೆ ದುಪ್ಪಟು ವೇತನ ನೀಡಬೇಕು. ರೋಸ್ಟರ್ ಪದ್ಧತಿ ಪ್ರಕಾರ ಕೆಲವೆಡೆ ಹಿಂದುಳಿದ ಮಹಿಳೆಯರಿಗೆ ಆದ್ಯತೆ ಕೊಡುವ ನೆಪದಲ್ಲಿ 11 ವರ್ಷಗಳಿಂದ ಕೆಲಸ ಮಾಡಿದವರನ್ನು ಕೆಲಸದಿಂದ ತೆಗೆಯುವುದನ್ನು ನಿಲ್ಲಿಸಬೇಕು. ಅಗತ್ಯ ಸೇವಾ ಸೌಲಭ್ಯಗಳನ್ನು ಕೊಡಬೇಕು. ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ಕೊಡಬೇಕು. ಶಿಕ್ಷಕರಿಗೆ ನೀಡುವ ಹಾಗೆ ಬೇಸಿಗೆ ರಜೆಯ ವೇತನವನ್ನು ಬಿಸಿಯೂಟ ನೌಕರರಿಗೆ ನೀಡಬೇಕು.
ಬಿಸಿಯೂಟ ಯೋಜನೆಯನ್ನು ಕಾಯಂಗೊಳಿಸಬೇಕು. ಬಿಸಿಯೂಟ ನೌಕರರನ್ನು ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಪತ್ರಗಳನ್ನು ನೀಡಬೇಕು. ಕೂಡಲೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಅಧ್ಯಕ್ಷೆ ಎಂ.ಬಿ. ಪುಷ್ಪ, ಕಲಾವತಿ, ಮಂಜುಳ ಮೀನಾಕ್ಷಿ, ಸಿಐಟಿಯು ಅರವಿಂದ್ ಇತರರು ಇದ್ದರು.