ಕನಿಷ್ಠ ವೇತನ ಇಲ್ಲದೇ ಸತತ ದುಡಿತ: ದಾಸೋಹ ಕಾರ್ಯಕರ್ತೆಯರ ಅಳಲು
ಆಲೂರು: ದಿನಕ್ಕೆ ಕೇವಲ 38 ರು.ಗೆ ದುಡಿಸುವ ಸರ್ಕಾರದ ನೀತಿಯನ್ನು ವಿರೋಧಿಸಿ ಅಕ್ಷರ ದಾಸೋಹ ನೌಕರರು ಪ್ರತಿಭಟನೆ ನಡೆಸಿದರು. ನಂತರ ತಹಸೀಲ್ದಾರ್ ಶಾರದಾಂಬರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ 1ರಿಂದ 10ನೇ ತರಗತಿವರೆಗೆ 69,23,932 ಮಕ್ಕಳಿಗೆ 1,03,874 ಮಹಿಳೆಯರು ಅಡುಗೆ ಮಾಡಿ ಬಿಸಿಯೂಟ ನೀಡುತ್ತಿದ್ದಾರೆ ಆದರೆ ಅವರಿಗೆ ಯಾವುದೇ ಸೇವಾ ಸೌಲಭ್ಯ ಗಳಿಲ್ಲದೆ ಕನಿಷ್ಠ ವೇತನವೂ ಇಲ್ಲದೆ ಕೆಲಸ ಮಾಡಬೇಕಾಗಿದೆ ಎಂದು ದೂರಿದರು.
ಬಿಸಿ ಊಟ ಯೋಜನೆಯ ಖಾಸಗಿಕರಣ ವಿರೋಧಿಸಿ ಕನಿಷ್ಠ ಕೂಲಿ ಜಾರಿಗೆ ಒತ್ತಾಯಿಸಿ ಕೆಲಸದ ಕಾಯಂಗೆ ಆಗ್ರಹಿಸಿ 45ನೇ ಭಾರತೀಯ ಕಾರ್ಮಿಕ ಸಮ್ಮೇಳ ಶಿಫಾರಸ್ಸುಗಳ ಜಾರಿಗಾಗಿ ಹಾಗೂ ಬಿಸಿಯೂಟ ನೌಕರರ ಬಗ್ಗೆ ಗಂಭಿರತೆಯಿಲ್ಲದ ಶಿಕ್ಷಣ ಇಲಾಖೆಯ ನೀತಿಯನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ಸರ್ಕಾರ ಕೂಡಲೇ ಸ್ಪಂದಿಸಿ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿ ಕೊಡಬೇಕೆಂದು ತಹಸೀಲ್ದಾರರಿಗೆ ಮನವಿ ಸಲ್ಲಿಸುವ ಮೂಲಕ ವಿನಂತಿಸಿಕೊಳ್ಳುತ್ತೇವೆಂದರು. ಪ್ರತಿಭಟನೆಯಲ್ಲಿ ಉಷಾ, ಕಲಾವತಿ, ಮಂಜಮ್ಮ, ರಾಧ, ಗಿರಿಜಮ್ಮ, ರತ್ನಮ್ಮ, ಭಾಗ್ಯಮ್ಮ, ಶೋಭ ಇತರರಿದ್ದರು.
ಚನ್ನರಾಯಪಟ್ಟಣ ವರದಿ: ವೇತನ ಹೆಚ್ಚಳ ಹಾಗೂ ಕಾಯಂ ಮಾಡಬೇಕೆಂದು ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತರು ಸಿಐಟಿಯು ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಾಲೂಕು ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದರು.
ತಾಲೂಕಿನ ಬಿಸಿಯೂಟ ಕಾರ್ಯಕರ್ತರು ಸಿಐಟಿಯು ನೇತೃತ್ವದಲ್ಲಿ ವೇತನ ಹೆಚ್ಚಿಸಿ ತಮ್ಮನ್ನು ಖಾಯಂ ಮಾಡಬೇಕೆಂದು ಒತ್ತಾಯಿಸಿ ಪಟ್ಟಣದ ಗಣಪತಿ ಪೆಂಡಾಲ್ನಿಂದ ಮೆರವಣಿಗೆಯಲ್ಲಿ ಸಾಗಿ ಬಿ.ಎಂ ರಸ್ತೆ, ಮೈಸೂರು ರಸ್ತೆಯಲ್ಲಿ ತಮ್ಮ ಬೇಡಿಕೆಗಳನ್ನು ಒತ್ತಾಯಿಸಿ ತಾಲೂಕು ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದರು.
ಧರಣಿ ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷೆ ಸತ್ಯವತಿ ಬಿಸಿಯೂಟ ಕಾರ್ಯಕರ್ತರಿಗೆ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದು ಒಂದರ ಮೇಲೊಂದು ಕೆಲಸವನ್ನು ಏರುತ್ತಿದೆ. ಆದರೆ ಕೆಲಸಕ್ಕೆ ತಕ್ಕ ವೇತನ ನೀಡಬೇಕು.
ತಾವು ಕಳೆದ 11 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮನ್ನು ಕಾಯಂ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಾಲೂಕು ಬಿಸಿಯೂಟ ಆಧಿಕಾರಿ ಚಂದ್ರಪ್ಪ ಮಾತನಾಡಿ ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ತಾಲೂಕಿನಲ್ಲಿ ಎಲ್ಲಾ ಶಾಲೆಗಳಿಗೆ ಹೆಚ್ಚುವರಿಯಾಗಿ ಸಿಲಂಡರ್ಗಳನ್ನು ನೀಡುವ ಉದ್ದೇಶದಿಂದ 472 ಸಿಲಂಡರ್ಗಳನ್ನು ಸಧ್ಯದಲ್ಲಿಯೇ ನೀಡಲಾಗುವುದು ಎಂದು ತಿಳಿಸಿದರು.
ಬಿಸಿಯೂಟ ಕಾರ್ಯಕರ್ತರ ಸಂಘದ ಪದಾಧಿಕಾರಿಗಳಾದ ನಾಗಮ್ಮ, ಶೋಭಾ ಮೊದಲಾದವರು ಭಾಗವಹಿಸಿದ್ದರು.