ಕರವೇ ಅನಿರ್ದಿಷ್ಟಾವಧಿ ಧರಣಿ ಆರಂಭ
ಕನ್ನಡಪ್ರಭ ವಾರ್ತೆ ಹಾಸನ ನ. 11
ಹಾಸನ-ದುದ್ದ-ತಿಪಟೂರು ಮಾರ್ಗದ ರಸ್ತೆ ದುರಸ್ತಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ಹಾಸನದಿಂದ ದುದ್ದ ಮಾರ್ಗವಾಗಿ ತಿಪಟೂರು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕನಸು ಅದೇಕೋ ನನಸಾಗುವ ಲಕ್ಷಣಗಳಿಲ್ಲ. ಈ ರಸ್ತೆಯ ಅಭಿವೃದ್ಧಿಗೆ ಇನ್ನೂ ಗ್ರಹಣ ಬಿಟ್ಟಿಲ್ಲ. ರಸ್ತೆಯಲ್ಲಿ ಮಂಡಿ ಮಟ್ಟದ ಆಳದ ಗುಂಡಿಗಳಾಗಿದ್ದು, ಅದನ್ನು ಮುಚ್ಚುವ ಕಾರ್ಯಕ್ಕೆ ಸಂಬಂಧಪಟ್ಟ ಇಲಾಖೆಯವರು ಮುಂದಾಗುತ್ತಿಲ್ಲ. ಸಾರ್ವಜನಿಕರು ಪ್ರತಿನಿತ್ಯ ರಸ್ತೆಗಳಲ್ಲಿ ಓಡಾಡಲು ಪ್ರಯಾಸ ಪಡುತ್ತಿದ್ದಾರೆ. ಅಧಿಕಾರಿಗಳು ಕಂಡರೂ ಕಂಡರಿಯಂತೆ ಕೈಕಟ್ಟಿ ಕುಳಿತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಹಾಸನ-ದುದ್ದ-ತಿಪಟೂರು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇದರ ಕಾಮಗಾರಿ ಹೊಣೆ ಹೊತ್ತ ಅಭಿಜಿತ್ ಗ್ರೂಪ್ನವರುಕಾಮಗಾರಿ ನಿರ್ವಹಿಸದೆ ಕಾಣೆಯಾಗಿದ್ದಾರೆ. ಈ ಹದಗೆಟ್ಟ ರಸ್ತೆಯಿಂದಾಗಿ ವಾಹನಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು, ವಾಹನಗಳು ಕೆಟ್ಟು ರಸ್ತೆಯಲ್ಲಿಯೇ ನಿಲ್ಲುವಂತಾಗಿವೆ. ವಾಹನಗಳ ಟೈರ್ ಪಂಚರ್ ಆಗಿ ಪ್ರಯಾಣಿಕರು ಪಡಿಪಾಟಲು ಪಡುತ್ತಿದ್ದರೂ ಸರ್ಕಾರ ಇತ್ತ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 15 ವರ್ಷಗಳಿಂದ ಈ ರಸ್ತೆ ಹದಗೆಟ್ಟಿದ್ದು, ಈ ವಿಚಾರಕ್ಕಾಗಿ ಹಲವು ಬಾರಿ ಹೋರಾಟ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ದುರಸ್ತಿ ಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಫಲವಾಗಿ ಕರವೇ ಕಾರ್ಯಕರ್ತರ ಮೇಲೆ ಮೊಕದ್ದಮೆ ದಾಖಲಿಸಿರುವ ಕಾರಣ ಕರವೇ ಕಾರ್ಯಕರ್ತರು ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ. ಸುತ್ತಮುತ್ತಲ ಗ್ರಾಮಸ್ಥರು, ರೈತರು, ವಿದ್ಯಾರ್ಥಿಗಳು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಎರಡು ವರ್ಷಗಳ ಹಿಂದಷ್ಟೇ ಸರ್ಕಾರ ರಸ್ತೆ ಕಾಮಗಾರಿ ಆರಂಭಿಸಲು ಖಾಸಗಿ ಕಂಪನಿಗೆ ಗುತ್ತಿಗೆ ನೀಡಿತ್ತು. ಆದರೆ ಖಾಸಗಿ ಕಂಪನಿಯವರು ತಮ್ಮ ವೈಯಕ್ತಿಕ ವಿಚಾರಕ್ಕಾಗಿ ಕಾಮಗಾರಿ ಪ್ರಾರಂಭಿಸಿ ಅರ್ಧಕ್ಕೆ ಬಿಟ್ಟಿದ್ದಾರೆ. ಸರ್ಕಾರದ ಅನುಮತಿ ಸೂಚಿಸಿದಂತೆ ಈಗಾಗಲೇ ರಸ್ತೆ ಕಾಮಗಾರಿ ಅಂತ್ಯಗೊಳ್ಳಬೇಕಾಗಿತ್ತು. ದಿನ ನಿತ್ಯ ಈ ಭಾಗದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು, ಸಾರ್ವಜನಿಕರು, ಗ್ರಾಮಸ್ಥರು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಶಾಪ ಹಾಕುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು ಅಪಘಾತಗಳಿಗೆ ಅಹ್ವಾನ ನೀಡುತ್ತಿವೆ. ಕೆಲವೆಡೆ ಗುಂಡಿ ಮುಚ್ಚುವ ಕಾರ್ಯ ಮಾಡಿಲ್ಲ. ರಸ್ತೆಯಲ್ಲಿ ಪ್ರತಿ ನಿತ್ಯ ಸಂಚರಿಸುವ ವಾಹನ ಚಾಲಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಅನಾರೋಗ್ಯ ಪೀಡಿತರು ಮತ್ತು ಗರ್ಭಿಣಿಯರನ್ನು ಈ ರಸ್ತೆಯಲ್ಲಿ ಕರೆತರುವುದೇ ಕಷ್ಟವಾಗಿದೆ. ಹದಗೆಟ್ಟಿರುವ ರಸ್ತೆಯಲ್ಲಿ ಗರ್ಭಿಣಿಯವರು ಪ್ರಯಾಣಿಸಿದರೆ ಆಸ್ಪತ್ರೆ ಸೇರುವ ಮುನ್ನವೇ ರಸ್ತೆಯಲ್ಲಿ ಹೆರಿಗೆ ಆಗುವ ಪರಿಸ್ಥಿತಿ ಉಂಟಾಗಿದೆ. ಇನ್ನೂ ಅನಾರೋಗ್ಯ ಪೀಡಿತರನ್ನು ಈ ರಸ್ತೆಗಳಲ್ಲಿ ಕರೆದುಕೊಂಡ ಹೋಗಲು ಸಾಧ್ಯವಾಗದೆ ಆಳುದ್ದ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಸಾವು-ಬದುಕಿನ ನಡೆಸುವೆ ಹೋರಾಟ ಮಾಡುವಂತಾಗಿದೆ, ಎಷ್ಟೋ ಜನ ಆಸ್ಪತ್ರೆ ಸೇರುವ ಮುನ್ನವೇ ಪ್ರಾಣವನ್ನು ಕಳೆದುಕೊಂಡಿದ್ದಾರೆ. ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ತಮ್ಮ ಸ್ಥಳಕ್ಕೆ ತಲುಪಲು ಪ್ರಯಾಣಿಕರಿಗೆ ಹಾಗೂ ರೋಗಿಗಳಿಗೆ ಸಾಧ್ಯವಾಗದೆ ಅನಾಹುತಗಳು ಸಂಭವಿಸುತ್ತಿವೆ. ಸರ್ಕಾರಗಳು ಸರಿಯಾಗಿ ಹಣ ಬಿಡುಗಡೆ ಮಾಡದೇ ವಿಳಂಬ ಮಾಡಿರುವುದು ಹಾಗೂ ರಾಜಕೀಯ ದ್ವೇಷದಿಂದ ಜಿಲ್ಲೆಯನ್ನು ಕಡೆಗಣಿಸಿದ ಪರಿಣಾಮವಾಗಿ ಸಾಕಷ್ಟು ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತು ಹೋಗಿರುವುದರಿಂದ ರಸ್ತೆ ಸಂಚಾರ ಅಸಾಧ್ಯವಾಗಿದೆ.ಸಂಬಂಧಪಟ್ಟ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ. ಜಿಲ್ಲಾಡಳಿತ, ಅಥವಾ ಉಸ್ತುವಾರಿ ಸಚಿವರಾಗಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದರು.
ಆದ್ದರಿಂದ ಕೂಡಲೇ ರಸ್ತೆಯನ್ನು ದುರಸ್ತಿ ಪಡಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಮನುಕುಮಾರ್, ಉಪಾಧ್ಯಕ್ಷ ಸೀತಾರಾಂ, ಹರೀಶ್ಗೌಡ, ಲೋಕೇಶ್ ಬಳಗಟ್ಟೆ, ನಗರಾಧ್ಯಕ್ಷ ಶಿವಕುಮಾರ್, ಬೇಲೂರು ತಾಲೂಕು ಅಧ್ಯಕ್ಷ ಚಂದ್ರಶೇಖರ್, ಜಗನ್ನಾಥ್, ಮಹಿಳಾ ಮುಖಂಡರಾದ ಸರೋಜಮ್ಮ ಇತರರು ಇದ್ದರು.