ಕಾಂಗ್ರೆಸ್ ವಿರುದ್ಧ ಕೆಜೆಪಿ ಪ್ರತಿಭಟನೆ
ಕ.ಪ್ರ. ವಾರ್ತೆ ಬೇಲೂರು ನ.11
ಕಾಂಗ್ರೆಸ್ ಸರ್ಕಾರ ಶಾದಿಭಾಗ್ಯ ಯೋಜನೆಯನ್ನು ಎಲ್ಲಾ ವರ್ಗದವರಿಗೂ ವಿಸ್ತರಿಸಬೇಕು ಮತ್ತು ಎಲ್ಲಾ ಸಮುದಾಯದವರಿಗೆ ಸವಲತ್ತುಗಳು ದೊರಕಬೇಕು ಎಂದು ಒತ್ತಾಯಿಸಿ ರಾಜ್ಯ ಕೆಜೆಪಿ ಕಾರ್ಯದರ್ಶಿ ಕೊರಟಿಕೆರೆ ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ತಾಲೂಕು ಕೆಜೆಪಿ ಘಟಕದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ, ರಸ್ತೆತಡೆ ಹಾಗೂ ತಾಲೂಕು ಕಚೇರಿ ಮುಂಭಾಗ ಕೆಲಕಾಲ ಧರಣಿ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ಕೆಜೆಪಿ ಕಾರ್ಯದರ್ಶಿ ಕೊರಟಿಕೆರೆ ಪ್ರಕಾಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮನಬಂದಂತೆ ಯೋಜನೆಗಳನ್ನು ಜಾರಿಗೆ ತಂದು, ಜಾತಿ ಪಂಗಡಗಳಲ್ಲಿ ವೈಷಮ್ಯದ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತ ಸಮುದಾಯದವರು ಕೇಳದಿದ್ದರೂ ಶಾದಿಭಾಗ್ಯದಂತಹ ಯೋಜನೆಯನ್ನು ಜಾರಿಗೆ ತಂದು ನಗೆಪಾಟಲಿಗೀಡಾಗಿದೆ. ವರ್ಷಕ್ಕೆ 1 ಸಾವಿರ ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗೆ 50 ಸಾವಿರ ರು. ನೀಡುವ ಯೋಜನೆ ಬಗ್ಗೆ ಮುಸ್ಲಿಂ ಬಾಂಧವರೇ ಟೀಕೆ ಮಾಡುತ್ತಿದ್ದಾರೆ. ತೀರಾ ಬಡತನದಲ್ಲಿರುವ ಕುರುಬ ಜನಾಂಗ ಸೇರಿದಂತೆ ಇತರೆ ಕಡುಬಡವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದ ಎಲ್ಲಾ ಜನತೆಗೂ ಸಮಪಾಲು, ಸಮಬಾಳು ಎಂಬ ನೀತಿ ಅನುಸರಿಸಿ ಯೋಜನೆಗಳನ್ನು ರೂಪಿಸಿದ್ದರು. ಆದರೆ ಕಾಂಗ್ರೆಸ್ ಅಂತಹ ಯೋಜನೆಗಳನ್ನು ಮೂಲೆಗುಂಪು ಮಾಡುತ್ತಿದೆ. ಎಪಿಎಲ್ ಕಾರ್ಡ್ದಾರರಿಗೂ ನ್ಯಾಯಬೆಲೆ ಅಂಗಡಿಯಿಂದ ಆಹಾರ ಧಾನ್ಯ ನೀಡಬೇಕು, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ವಿಧವಾ ವೇತನದ ಫಲಾನುಭವಿಗಳಿಗೆ ಕೂಡಲೇ ಹಣವನ್ನು ಬಿಡುಗಡೆ ಮಾಡಬೇಕು, ಕಬ್ಬು ಬೆಳೆಗಾರರಿಗೆ ಸಮರ್ಪಕವಾಗ ಬೆಲೆಯನ್ನು ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.