ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ
ಹಾಸನ: ವಿದ್ಯಾರ್ಥಿಗಳ ಶುಲ್ಕದ ಹಣ ಹಿಂದಿರುಗಿಸಲು ಕಾಲೇಜು ಆಡಳಿತ ಮಂಡಳಿ ವಿನಾ ಕಾರಣ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಮಲೆನಾಡು ತಾಂತ್ರಿಕ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಸೋಮವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳು ನಗರದ ಮಲೆನಾಡು ತಾಂತ್ರಿಕ ಕಾಲೇಜಿನ ಎದುರು ಜಮಾಯಿಸಿ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜಿಗೆ ದಾಖಲಾಗುವ ವೇಳೆ ವಿದ್ಯಾರ್ಥಿಗಳು ಪಾವತಿಸಿದ್ದ ಶುಲ್ಕದಲ್ಲಿ ಮುಕ್ಕಾಲು ಭಾಗವನ್ನು ಸರ್ಕಾರ ಕಾಲೇಜಿಗೆ ಪಾವತಿಸಿದ ನಂತರ ವಿದ್ಯಾರ್ಥಿಗಳಿಗೆ ರೀಫಂಡ್ ಮಾಡಬೇಕು ಎಂಬ ನಿಯಮವಿದೆ. ಸರ್ಕಾರದಿಂದ ವಿದ್ಯಾರ್ಥಿ ವೇತನ ತರಿಸಿಕೊಂಡು ಮರುಪಾವತಿ ಮಾಡುವ ಜವಾಬ್ದಾರಿ ಕಾಲೇಜು ಆಡಳಿತ ಮಂಡಳಿದಾಗಿದ್ದು, ಅದನ್ನು ಸರಿಯಾಗಿ ನಿರ್ವಹಿಸಿದೆ ನಿರ್ಲಕ್ಷ ವಹಿಸಲಾಗಿದೆ ಎಂದು ಆರೋಪಿಸಿದರು.
ಉಳಿದ ಎಲ್ಲಾ ಖಾಸಗಿ ತಾಂತ್ರಿಕ ಕಾಲೇಜುಗಳಲ್ಲೂ ಶುಲ್ಕದ ಹಣವನ್ನು ವಿದ್ಯಾರ್ಥಿಗಳಿಗೆ ಹಿಂದಿರುಗಿಸಲಾಗಿದ್ದು, ಮಲೆನಾಡು ಕಾಲೇಜಿನಲ್ಲಿ ಮಾತ್ರ ಎರಡೂವರೆ ವರ್ಷದಿಂದ ಹಣ ರೀಫಂಡ್ ಮಾಡಿಲ್ಲ. ಎಲ್ಲಾ ಸೆಮಿಸ್ಟರ್‌ನ ಒಟ್ಟು 1217 ವಿದ್ಯಾರ್ಥಿಗಳ 8 ಕೋಟಿ ರು.ಗೂ ಅಧಿಕ ಹಣವನ್ನು ಹಿಂದಿರುಗಿಸಬೇಕಿದ್ದು, ಹಣ ನೀಡದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದರು. ಈಗಾಗಲೇ ಇತರೆ ಜಿಲ್ಲೆಯಲ್ಲಿನ ಕಾಲೇಜಿನ ವಿದ್ಯಾರ್ಥಿಗಳ ಹಣ ಕಳೆದ ಫೆಬ್ರವರಿಯಲ್ಲಿಯೇ ವಾಪಸ್ ನೀಡಲಾಗಿದೆ. ಇನ್ನು ಎರಡು ತಿಂಗಳು ಕಳೆದರೆ ಮೂರು ವರ್ಷದ ಹಣವನ್ನು ನೀಡಬೇಕಾಗುತ್ತದೆ. ವಿದ್ಯಾರ್ಥಿಗಳು ಬ್ಯಾಂಕಿನಿಂದ ಸಾಲ ಮಾಡಿ ಕಾಲೇಜಿಗೆ ಹಣ ಪಾವತಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಸರಿಯಾದ ಸಮಯಕ್ಕೆ ಶುಲ್ಕದ ಹಣ ವಾಪಸ್ ವಿದ್ಯಾರ್ಥಿಗಳಿಗೆ ನೀಡದ ಕಾರಣ ತೊಂದರೆ ಉಂಟಾಗಿದೆ ಎಂದು ಅಲವತ್ತುಕೊಂಡರು.
ಶುಲ್ಕ ಮರುಪಾವತಿಗೆ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದ್ದು, ಕೂಡಲೇ ಹಣ ವಾಪಸ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದ ವಿದ್ಯಾರ್ಥಿಗಳು, ಸಂಜೆ ತನಕವೂ ಪ್ರತಿಭಟನೆ ಮುಂದುವರೆಸಿ ಆಡಳಿತ ಮಂಡಳಿ ವಿರುದ್ಧ ಕಿಡಿ ಕಾರಿದರು. ಸ್ಥಳಕ್ಕಾಗಮಿಸಿದ ಆಡಳಿತ ಮಂಡಳಿ ಸದಸ್ಯರನ್ನು ಪ್ರತಿಭಟನಾನಿರತ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡರು.
ಹಣ ವಾಪಸ್ ನೀಡದಿದ್ದರೆ ನಾಳೆಯೂ ಪ್ರತಿಭಟನೆ ಮುಂದುವರೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು. ಬಿ.ಆರ್.ದೀಕ್ಷಿತ್, ಅನ್ವೀಕ್, ಜಿ.ಉಲ್ಲಾಸ್, ಸಚಿನ್, ಅನು, ಗಣೇಶ್ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.