ಕೊಣನೂರು ದೊಡ್ಡಕೆರೆಗಿಲ್ಲ ತಡೆಗೋಡೆ, ಸವಾರರೇ ಎಚ್ಚರ
ಅರಕಲಗೂಡು: ತಾಲೂಕಿನ ರಾಮನಾಥಪುರ ಬಳಿ ಇರುವ ಕೊಣನೂರು ಪಟ್ಟಣದ ದೊಡ್ಡಕೆರೆ ಕೋಡಿಗೆ ಸೇತುವೆ ಹಾಗೂ ತಡೆಗೋಡೆ ಇಲ್ಲದೆ ಅಪಾಯದ ಅಂಚಿನಲ್ಲಿದೆ. ಸೇತುವೆ ಇಲ್ಲದೆ ಕೋಡಿ ಮೇಲೆಯೇ ವಾಹನಗಳು ತಿರುಗಾಡುತ್ತಿವೆ. ಮಳೆ ಹೆಚ್ಚಾದಾಗ ಹಾಗೂ ಕೆರೆಕೋಡಿ ಬಿದ್ದಾಗ ಇಲ್ಲಿಯೇ ವಾಹನಗಳು ಮತ್ತು ಸಾರ್ವಜನಿಕರು ಕೊಣನೂರು-ಮಲ್ಲಿಪಟ್ಟಣದ ಹೆದ್ದಾರಿ ಮಾರ್ಗ ಕೋಡಿಯಲ್ಲಿಯೇ ತಿರುಗಾಡುವುದರಿಂದ ಯಾವಾಗ ಅಪಾಯ ಕಾದಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕೆರೆ ಕೋಡಿಗೆ ಸೇತುವೆ ಹಾಗೂ ತಡೆಗೋಡೆ ಇಲ್ಲದಿರುವುದರಿಂದ ವಾಹನ ಚಾಲಕರು ಆತಂಕದಿಂದಲೇ ನಿತ್ಯ ವಾಹನ ಚಾಲನೆ ಮಾಡುತ್ತಾರೆ. ಈ ಭಾಗದಲ್ಲಿ ಹಂದ್ರಂಗಿ, ಅರಸಿಕಟ್ಟೆ ಅಮ್ಮನ ದೇವಸ್ಥಾನ, ಕೆಸವತ್ತೂರು, ದೊಡ್ಡಬೆಮ್ಮತ್ತಿ ಮಾರ್ಗ ಮಲ್ಲಿಪಟ್ಟಣ, ಸೋಮವಾರಪೇಟೆ, ಶನಿವಾರಸಂತೆ ಮುಂತಾದ ಕಡೆಗಳಿಗೆ ಬಸ್ಗಳು ಈ ಮಾರ್ಗದಲ್ಲಿಯೇ ಸಂಚರಿಸುತ್ತವೆ. ಹಂದ್ರಂಗಿ, ಕೆಸವತ್ತೂರು, ದೊಡ್ಡಬೆಮ್ಮತಿ ಈ ಭಾಗದಿಂದ ಸಾರ್ವಜನಿಕರು, ಸಾವಿರಾರು ಶಾಲಾ ಮಕ್ಕಳು ದ್ವಿಚಕ್ರ ವಾಹನ ಸವಾರರು ಸಂಚರಿಸುತ್ತಾರೆ.
ಬಲ ಭಾಗ ಕೆರೆ. ಹಾಗೂ ಎಡ ಭಾಗದಲ್ಲಿ ತೋಟ ಮತ್ತು ಗದ್ದೆಗಳು ಸುಮಾರು 30-40 ಅಡಿ ಅಳದಲ್ಲಿ ಇವೆ. ಆದರೆ ರಸ್ತೆಯ ಎರಡೂ ಭಾಗಗಳಲ್ಲಿಯೂ ತಡೆಗೋಡೆ ನಿರ್ಮಾಣ ಮಾಡಿಲ್ಲ. ಈ ರಸ್ತೆಯಲ್ಲಿ ಪ್ರತಿನಿತ್ಯ 20 ರಿಂದ 25 ಬಸ್ಗಳು ಮತ್ತು 400ಕ್ಕೂ ಹೆಚ್ಚು ಇತರೆ ವಾಹನಗಳು ಸಂಚರಿಸುತ್ತವೆ. ರಸ್ತೆ ತುಂಬ ಗುಂಡಿ ಹಳ್ಳ ಹಾಗೂ ತಿರುವಿನಿಂದ ಕೂಡಿದ್ದು ಎಚ್ಚರ ತಪ್ಪಿದರೆ ವಾಹನಗಳು ಕೆರೆಗೆ ಬೀಳುವುದರಲ್ಲಿ ಗ್ಯಾರಂಟಿ ಎನ್ನುತ್ತಾರೆ ಸಾರ್ವಜನಿಕರು. ಕೂಡಲೇ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ಕೆರೆ ಕೋಡಿಗೆ ಸೇತುವೆ ಹಾಗೂ ಕೆರೆಯ ಎರಡು ಬದಿ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಕ್ರಮ ಮರಳು ದಂಧೆ: ಗ್ರಾಮಸ್ಥರ ತೀವ್ರ ಆಕ್ರೋಶ
ರಾಮನಾಥಪುರ: ಇಲ್ಲಿನ ಕಾವೇರಿ ನದಿ ಪಾತ್ರದಲ್ಲಿ ಮಿತಿ ಮೀರಿ ನಡೆಯುತ್ತಿರುವ ಮರಳು ದಂಧೆಯಿಂದ ನದಿ ಪಾತ್ರ ಹಾಳಾಗಿ ಹೋಗುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಡಿಸುತ್ತಿದ್ದಾರೆ.
ಇಪ್ಪತ್ತು ದಿವಸಗಳ ಹಿಂದೆ ಸಕಲೇಶಪುರ ಉಪ ವಿಭಾಗಾಧಿಕಾರಿ ಕಾವೇರಿ ನದಿಯಲ್ಲಿ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದ ಸ್ಥಳಗಳ ಮೇಲೆ ದಾಳಿ ಮಾಡಿದಾಗ ಆ ಸಮಯದಲ್ಲಿ ಮರಳು ತುಂಬಿಕೊಂಡು ಹೋಗುವ ಲಾರಿಗಳು ಇರಲಿಲ್ಲ. ಹಾಗೂ ಮರಳು ತೆಗೆಯಲು ಬಳಸುವ ಬಿದಿರುತೆಪ್ಪೆಗಳನ್ನು ನದಿ ಮಧ್ಯೆ ಹಾಕಿ ಆಸಾಮಿಗಳು ಕಣ್ಮರೆಯಾಗಿದ್ದರು. ಮರಳು ದಂಧೆ ಕಡುವಿನಹೊಸಹಳ್ಳಿ, ಸರಗೂರು, ಬಾನಗುಂದಿ, ಮಾದಾಪುರ, ಗೊಬ್ಬಳಿ, ಕಟ್ಟೆಪುರ, ಮತ್ತು ಅಣೆಕಟ್ಟಿನ ಕೆಳಗೆ ಮತ್ತಿಗೋಡು, ರುದ್ರಪಟ್ಟಣ, ಆನಂದೂರು, ಕೇರಳಾಪುರಗಳಲ್ಲಿ ನಡೆಯುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದನ್ನು ತಡೆಯಲು ಅಸಮರ್ಥರಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ಷೇಪಿಸಿದ್ದಾರೆ.
ಬೆಳಗ್ಗೆ 6 ರಿಂದ 9 - ಮಧ್ಯಾಹ್ನ 12 ರಿಂದ 3ರ ವರೆಗೆ ಮರಳು ದಂಧೆ ನಡೆಯುತ್ತಿದ್ದು ಕೂಡಲೇ ತನಿಖಾದಳ ನಿಯೋಜಿಸಿ ಮರಳು ದಂಧೆ ನಡೆಸುವವರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.