ಬಿಜೆಪಿ ಕಾರ್ಯಕರ್ತರ ಸಮಾವೇಶ ಇಂದು
ಹೊಳೆನರಸೀಪುರ: ದೇಶದ ಭವಿಷ್ಯದ ಆಶಾಕಿರಣ ಹಾಗೂ ಭಾರತೀಯ ಜನತಾಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರಮೋದಿಯವರ ಕೈ ಬಲಪಡಿಸುವ ಸಲುವಾಗಿ ಮತ್ತು ನ.17ರಂದು ಬೆಂಗಳೂರಿನಲ್ಲಿ ನಡೆಯಲಿರುವ ನರೇಂದ್ರ ಮೋದಿಯವರ ಸಮಾವೇಶದ ಹಿನ್ನೆಲೆಯಲ್ಲಿ ಸಂಘಟನೆಯ ದೃಷ್ಟಿಯಿಂದ ತಾಲೂಕಿನ ಹಳ್ಳಿಮೈಸೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಹಾಗೂ ಬಹಿರಂಗ ಸಭೆಯನ್ನು ನ.12 ಮಂಗಳವಾರ ಬೆಳಿಗ್ಗೆ ಹತ್ತು ಗಂಟೆಗೆ ಆಯೋಜಿಸಿರುವುದಾಗಿ ಹೋಬಳಿ ಶಕ್ತಿ ಕೇಂದ್ರದ ಮುಖ್ಯಸ್ಥ ಶಿವಪ್ಪ ತಿಳಿಸಿದ್ದಾರೆ. ಹಳ್ಳಿಮೈಸೂರು ಗ್ರಾಮದ ಹಳೆ ಬಸ್ನಿಲ್ದಾಣದಲ್ಲಿ ಕಾರ್ಯಕರ್ತರ ಸಮಾವೇಶ ಮತ್ತು ಬಹಿರಂಗ ಸಭೆಯನ್ನು ಏರ್ಪಡಿಸಿದ್ದು, ಸಭೆಯನ್ನು ಉದ್ದೇಶಿಸಿ ಬಿಜೆಪಿಯ ಜಿಲ್ಲಾ ಅಧ್ಯಕ್ಷ ರೇಣುಕುಮಾರ್, ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಕೃಷ್ಣೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಟೇಶ್ಕುಮಾರ್, ಅರಕಲಗೂಡು ಮಂಡಲ ಅಧ್ಯಕ್ಷ ಕೇಶವೇಗೌಡ, ಅರಕಲಗೂಡು ಮಂಡಲ ಮಾಜಿ ಅಧ್ಯಕ್ಷ ಹಾಗೂ ವಕೀಲ ಎಂ.ಕೆ.ನಟರಾಜ್, ಪ್ರಧಾನ ಕಾರ್ಯದರ್ಶಿ ಲೋಕೇಶ್, ಎಚ್.ಸಿ.ರವಿ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇಂದು ವಿಜ್ಞಾನ ವಸ್ತು ಪ್ರದರ್ಶನ
ಅರಸೀಕೆರೆ: ತಾಲೂಕಿನ ಬಾಣಾವರದಲ್ಲಿ ನ.12 ರಂದು ನಡೆಯಲಿರುವ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಬಸವರಾಜೇಂದ್ರ ಡೆಮಾನ್ಸ್ಟ್ರೇಷನ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಣಿತ ಹಾಗೂ ವಿಜ್ಞಾನ ಮಾದರಿಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಸತತ ನಾಲ್ಕು ವರ್ಷಗಳಿಂದಲೂ ತಾಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಗಳಿಸಿರುವುದಲ್ಲದೆ ದಕ್ಷಿಣ ರಾಜ್ಯಗಳ ವಲಯ ಮಟ್ಟದಲ್ಲಿಯೂ ಈ ಶಾಲೆಯ ವಿದ್ಯಾರ್ಥಿಗಳು ಗಣನೀಯ ಸಾಧನೆ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಗಣಿತ ಮತ್ತು ವಿಜ್ಞಾನ ಶಿಕ್ಷಕರಾದ ಕೆ.ಆರ್.ದಯಾನಂದ್, ಸಿ.ಆರ್.ಶಶಿಕುಮಾರ್ ಮಾರ್ಗದರ್ಶನ ನೀಡುತ್ತಿದ್ದಾರೆ.
14 ರಿಂದ ಮಕ್ಕಳ ಕಾವ್ಯೋತ್ಸವ
ಹಾಸನ: ಸಂಧ್ಯಾ ಸಾಹಿತ್ಯ ವೇದಿಕೆ ಹಾಗೂ ಸುಪ್ರಜ ಗುರುಕುಲದ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ನ.14 ರಿಂದ 16 ರವರೆಗೆ ಶನಿವಾರಸಂತೆಯ ಸುಪ್ರಜ ಗುರುಕುಲದಲ್ಲಿ ಮಕ್ಕಳ ಕಾವ್ಯೋತ್ಸವ ಏರ್ಪಡಿಸಲಾಗಿದೆ. 14 ಗುರುವಾರ ಮಧ್ಯಾಹ್ನ 2.30ರಿಂದ ರಾಜ್ಯಮಟ್ಟದ ಮಕ್ಕಳಿಗಾಗಿ ಕಥೆ ಹೇಳುವ ಸ್ಪರ್ಧೆ, ಸಂಜೆ 4.30ಕ್ಕೆ ಮಾಗಡಿ ಚಂದ್ರು ಅವರಿಂದ ಹಾಳೆಯಲ್ಲಿ ಚೆಲುವಿನ ಚಿತ್ತಾರ, ರವಿಶಂಕರ್,ಶಿವಲಿಂಗಪ್ಪ ಹಂದಿಹಾಳು ಅವರಿಂದ ಕಥಾಕಥನ ಮಾನ್ಸ್ಟರ್ ಕಥೆಗಳನ್ನು ಆಯೋಜಿಸಲಾಗಿದೆ.
ಇಂದು ಕರಕುಶಲ ವಸ್ತು ಪ್ರದರ್ಶನ
ಹಾಸನ: ಜಿಲ್ಲಾಡಳಿತ ಮತ್ತು ಜಿಪಂ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಉದ್ಯೋಗಿನಿ, ಕಿರುಸಾಲ ಯೋಜನೆಯ ಮಹಿಳಾ ಉದ್ಯಮಿಗಳು ಹಾಗೂ ಸ್ತ್ರೀಶಕ್ತಿ, ನಗರ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮಹಿಳಾ ಉದ್ದಿಮೆದಾರರಿಂದ ತಯಾರಿಸಲ್ಪಟ್ಟ ಆಕರ್ಷಕ ಕರಕುಶಲ ವಸ್ತುಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ನ. 12ರಿಂದ 15ರ ವರೆಗೆ ಹಾಸನಾಂಬ ಕಲಾಕ್ಷೇತ್ರ ಆವರಣದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಮಹಾದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು.
ಬೇಲೂರಿನಲ್ಲಿ ಆರ್ಥಿಕ ಗಣತಿದಾರರಿಗೆ ಕಿಟ್ ವಿತರಣೆ
ಬೇಲೂರು: ಪಟ್ಟಣದಲ್ಲಿ ಎರಡು ದಿನ ಆರನೆ ಆರ್ಥಿಕ ಗಣತಿ ತರಬೇತಿ ಕಾರ್ಯಾಗಾರ ನಡೆಯಿತು.ತರಬೇತಿಯಲ್ಲಿ 169 ಗಣತಿದಾರರು ಪಾಲ್ಗೊಂಡಿದ್ದರು. ಮಾಸ್ಟರ್ ಟ್ರೈನಿಂಗ್ ಪಡೆದ ಜಿಲ್ಲಾ ಸಾಕ್ಷರತಾ ಕಾರ್ಯಕ್ರಮ ಸಹಾಯಕರಾದ ಟಿ.ಡಿ.ತಮ್ಮಣ್ಣಗೌಡ, ಸಿಆರ್ಪಿ ಮಂಜೇಗೌಡ, ತಾಪಂ ಅಂಕಿ-ಅಂಶ ನಿರೀಕ್ಷಕ ಪ್ರಕಾಶ್ ತರಬೇತಿ ನೀಡಿದರು. ಸುದ್ದಿಗಾರರಿಗೆ ಮಾಹಿತಿ ನೀಡಿದ ತಹಸೀಲ್ದಾರ್ ರವಿಚಂದ್ರನಾಯಕ್, ತಾಲೂಕಿನಾದ್ಯಂತ 703 ಬ್ಲಾಕ್ಗಳಲ್ಲಿ ಗಣತಿ ನಡೆಯಲಿದ್ದು, ಗಣತಿದಾರರಿಗೆ ಮೇಲ್ವಿಚಾರಕರಾಗಿ 90 ಪ್ರೌಢಶಾಲಾ ಶಿಕ್ಷಕರನ್ನು ನಿಯೋಜಿಸಲಾಗಿದೆ. ಗ್ರಾಮಾಂತರ ಪ್ರದೇಶದ ಉಸ್ತುವಾರಿ ತಹಸೀಲ್ದಾರ್, ಪಟ್ಟಣ ಪ್ರದೇಶದ ನಿರ್ವಹಣೆ ಪುರಸಭಾ ಮುಖ್ಯಾಧಿಕಾರಿಗೆ ವಹಿಸಲಾಗಿದೆ ಎಂದರು.ನ.11 ರಿಂದ 30 ರ ವರೆಗೆ ಗಣತಿ ನಡೆಯಲಿದೆ. 2011 ರ ಜನಗಣತಿ ಆಧರಿಸಿ ನಡೆಯುವ ಆರ್ಥಿಕ ಗಣತಿಯಲ್ಲಿ ಹೆಚ್ಚಾಗಿ ಉದ್ಯಮಗಳ ಆಧರಿಸಿ ಮಾಹಿತಿ ಪಡೆಯಲಾಗುತ್ತಿದೆ. ದೇಶದಲ್ಲಿ ಯೋಜನೆ ರೂಪಿಸಲು ಈ ಗಣತಿ ಸಹಕಾರಿಯಾಗಲಿದೆ ಎಂದರು. ಗಣತಿದಾರರಿಗೆ ತಹಸೀಲ್ದಾರ್ ಕಚೇರಿ ಅಂಕಿ ಅಂಶ ನಿರೀಕ್ಷಕ ಗೋಪಾಲ್ ಲೇಖನಿ ಸಾಮಗ್ರಿಗಳ ಕಿಟ್ ವಿತರಿಸಿದರು. ಗಣತಿದಾರರು ಮನೆಗೆ ಬಂದಾಗ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು. ಮಾದಿಹಳ್ಳಿ ಉಪತಹಸೀಲ್ದಾರ್ ನಾಗರಾಜ್ ಇತರರು ಇದ್ದರು.
ಲೋಕಾಯುಕ್ತ ಎಸ್ಪಿ ಭೇಟಿ ಇಂದು
ಹಾಸನ: ಲೋಕಾಯುಕ್ತ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಮತ್ತು ತಂಡದವರು ನ.12ರಂದು ಅರಸೀಕರೆ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ನಂತರ ಚನ್ನರಾಯಪಟ್ಟಣ ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ 2ರಿಂದ ಸಂಜೆ 5.30 ರವರೆಗೆ ಭೇಟಿ ನೀಡಲಿದ್ದು, ಆ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳುನ್ನು ಸಲ್ಲಿಸಬಹುದಾಗಿದೆ.
ಇಂದು ರಾಜ್ಯ ಷಟಲ್ ಬ್ಯಾಡ್ಮಿಂಟನ್ ಪಂದ್ಯ
ಹಾಸನ: ಪದವಿ ಪೂರ್ವ ಶಿಕ್ಷಣ ಇಲಾಖೆ, ಹಾಸನ ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನ.12 ಮತ್ತು 13 ರಂದು ನಗರದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸುವರು. ಮಾಜಿ ಪ್ರಧಾನಿ ದೇವೇಗೌಡರು ಉಪಸ್ಥಿತರಿರುವರು. ಶಾಸಕ ಎಚ್.ಎಸ್.ಪ್ರಕಾಶ್ ಅಧ್ಯಕ್ಷತೆ ವಹಿಸುವರು. ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್ ಕ್ರೀಡಾಜ್ಯೋತಿ ಸ್ವೀಕಾರ ಮಾಡುವರು.
ಜಿಪಂ ಅಧ್ಯಕ್ಷೆ ಡಿ.ಜಿ.ಅಂಬಿಕಾ ರಾಮಣ್ಣ, ಶಾಸಕ ಎಚ್.ಡಿ.ರೇವಣ್ಣ, ಎಚ್.ಕೆ. ಕುಮಾರಸ್ವಾಮಿ, ಸಿ.ಎನ್.ಬಾಲಕೃಷ್ಣ, ಎ.ಮಂಜು, ವೈ.ಎನ್.ರುದ್ರೇಶಗೌಡ, ಕೆ.ಎಂ.ಶಿವಲಿಂಗೇಗೌಡ, ಗೋ.ಮಧುಸೂದನ್, ಮರಿತಿಬ್ಬೇಗೌಡ, ಪಟೇಲ್ ಶಿವರಾಂ, ಬಿ.ಬಿ.ಶಿವಪ್ಪ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿಚೌಡಯ್ಯ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್ ಇತರೆಗಣ್ಯರು ಭಾಗವಹಿಸುವರು.