'ವಿದ್ಯಾರ್ಥಿಗಳ ಹೆಸರು ಅಪರಾಧದ ಪಟ್ಟಿಗೆ ಸೇರಬಾರದು'
ಚನ್ನರಾಯಪಟ್ಟಣ: ವಿದ್ಯಾರ್ಥಿಗಳ ಹೆಸರು ಎಂದೂ ಅಪರಾಧದ ಪಟ್ಟಿಯಲ್ಲಿ ಸೇರಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಟಿ. ದೇವರಾಜ್ ಹೇಳಿದರು.
ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಶ್ರವಣಬೆಳಗೊಳದ ಬಾಹುಬಲಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ತಾ. ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರ್ಯಾಗಿಂಗ್ ಹಾಗೂ ಡ್ರಗ್ಸ್ನಿಂದ ಆಗುವ ದುಷ್ಪರಿಣಾಮಗಳು ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಬಿಳಿ ಹಾಳೆ ಇದ್ದಂತೆ. ಈ ಹಾಳೆಯಲ್ಲಿ ಒಂದು ಕಪ್ಪು ಚುಕ್ಕಿಯೂ ಬರಬಾರದು. ರ್ಯಾಗಿಂಗ್ ಇನ್ನಿತರ ಅಪರಾಧಗಳಿಂದ ಅವರ ಮೇಲೆ ದೂರು ದಾಖಲಾದರೆ ವಿದ್ಯಾರ್ಥಿ ಜೀವನವೇ ಹಾಳಾಗುತ್ತದೆ. ಹಾಗೊಂದು ವೇಳೆ ದೂರು ದಾಖಲಾದರೆ ಅವರು ಉನ್ನತ ವ್ಯಾಸಂಗ, ವಿದೇಶಿ ಪ್ರವಾಸ, ಯಾವುದೇ ಸರ್ಕಾರಿ ಹುದ್ದೆಗಳಿಗೆ ಹೋಗಲಾಗುವುದಿಲ್ಲ, ಭವಿಷ್ಯಕ್ಕೆ ತೊಂದರೆ ಯಾಗುತ್ತದೆ ಎಂದ ಅವರು, ವಿದ್ಯಾರ್ಥಿಗಳು ವಾಹನ ಚಾಲನಾ ಪರವಾನಗಿ ಪಡೆಯ ಬೇಕು ಹಾಗೂ ವಿಮೆ ಇಲ್ಲದೆ ವಾಹನ ಚಲಾಯಿಸದಂತೆ ಸಲಹೆ ನೀಡಿದರು.
ವಕೀಲೆ ಮುತ್ತುಲಕ್ಷ್ಮಿ ಮಾತನಾಡಿ, 1997 ರಲ್ಲಿ ರ್ಯಾಗಿಂಗ್ ತಡೆಯುವ ಸಲುವಾಗಿ ತಮಿಳುನಾಡು ಸರ್ಕಾರ ಮಸೂದೆಯನ್ನು ಜಾರಿಗೊಳಿಸಿತು. ರ್ಯಾಗಿಂಗ್ ಮಾಡಿದವರ ವಿರುದ್ಧ ದೂರು ನೀಡಿದ 24 ಗಂಟೆಗಳಲ್ಲಿ ಪ್ರಥಮ ದೂರು ದಾಖಲಿಸ ಲಾಗುತ್ತದೆ. ಅಪರಾಧ ಪ್ರಮಾಣವನ್ನು ಆಧರಿಸಿ ಶಿಕ್ಷೆ ನೀಡಲಾಗುತ್ತದೆ. ಕೆಲವೊಮ್ಮೆ ವಿದ್ಯೆಯಿಂದಲೇ ವಂಚಿತರಾಗುತ್ತಾರೆ.ಯಾರೂ ಇದರಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದರು. ಅಧಿಕ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ, ಬಾಹುಬಲಿ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಚಾರ್ಯ ಸುದೀಪ್ ಇತರರು ಇದ್ದರು.