ಸಿಂಗನಹಳ್ಳಿ; ರಾಗಿ ಬೆಳೆ ಕ್ಷೇತ್ರೋತ್ಸವ
ಜಾವಗಲ್: ಹೋಬಳಿಯ ಸಿಂಗನಹಳ್ಳಿಯಲ್ಲಿ ರೈತ ಕ್ಷೇತ್ರ ಪಾಠಶಾಲೆ ವತಿಯಿಂದ ಗುಚ್ಛ ಗ್ರಾಮ ಮಟ್ಟದ ರಾಗಿ ಬೆಳೆ ಕ್ಷೇತ್ರೋತ್ಸವ ನಡೆಯಿತು. ಕೃಷಿ ಅಧಿಕಾರಿ .ಎಸ್.ಕುಮಾರಸ್ವಾಮಿ ಮಾತನಾಡಿ, ಕೃಷಿಯಲ್ಲಿ ತಾಂತ್ರಿಕತೆ ಬಳಸಿ ಅಧಿಕ ಉತ್ಪಾದನೆ ಪಡೆಯುವ ಬಗ್ಗೆ ರೈತರು ಗಮನ ಹರಿಸಬೇಕೆಂದರು. ಲಘು ಪೋಷಕಾಂಶಗಳಾದ ಜಿಪ್ಸಂ, ಪಿಎಸ್‌ಬಿ, ಜಿಂಕ್‌ಸಲ್ಪೇಡ್, ಗಂಧಕ ಮತ್ತಿತರ ಪೋಷಕಾಂಶಗಳನ್ನು ಬಳಸಿ ಭೂ ಚೇತನಯೋಜನೆಯಡಿ ಅಧಿಕ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ ಎಂದರು. ರಾಗಿ ಬೆಳೆಯ ತಳಿ ಪ್ರಯೋಗ ತಾಕಿಗೆ ರೈತರೊಂದಿಗೆ ಭೇಟಿ ನೀಡಿ ಇಲಾಖೆ ವತಿಯಿಂದ ಅಳವಡಿಸಿರುವ ತಾಂತ್ರಿಕತೆಯ ಬಗ್ಗೆ ವಿವರ ಮಾಹಿತಿ ನೀಡಿದರು. ರೈತ ಕ್ಷೇತ್ರ ಪಾಠಶಾಲೆಯ ಉದ್ದೇಶ ಹಾಗೂ ಪ್ರಯೋಜನ ತಿಳಿಸಿ, ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಸದಸ್ಯ ಮಹಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಮಾಜಿ ಸದಸ್ಯೆ ಮಲ್ಲಮ್ಮ ಇಲಾಖೆಯಿಂದ ಸಿಗುವ ಮಾಹಿತಿ ಮತ್ತು ಸೌಲಭ್ಯಗಳನ್ನು ರೈತರು ಪಡೆದುಕೊಂಡು ನೂತನ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಅಧಿಕ ಆಹಾರೋತ್ಪಾದನೆ ಮಾಡಬೇಕೆಂದು ಸಲಹೆ ನೀಡಿದರು. ಗ್ರಾಪಂ ಸದಸ್ಯೆ ಸೋಮಮ್ಮ, ರೈತ ಅನುವುಗಾರರಾದ ಮಲ್ಲೇಶ್, ಸಂತೋಷ್, ಸಂದೀಪ್, ಉಮೇಶ್, ಬಸವರಾಜು, ಮಹದೇವಪ್ಪ ಇದ್ದರು.
ನಾಳೆ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆ
ಹಾಸನ: ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಣ್ಣ ಅಧ್ಯಕ್ಷತೆಯಲ್ಲಿ ನವೆಂಬರ್ 13ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ತಿಳಿಸಿದ್ದಾರೆ.