ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

6ನೇ ಅರ್ಥಿಕ ಗಣತಿ

Srinivasa Murthy VN
Updated On : 13 Nov 2013, 12:26 pm

ಹಾಸನ: ರಾಜ್ಯಾದ್ಯಂತ 6ನೇ ಆರ್ಥಿಕ ಗಣತಿಯನ್ನು ನವೆಂಬರ್ 2013ರ ಅವಧಿಯಲ್ಲಿ ಭಾರತ ಸರ್ಕಾರದ  ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯ ಮತ್ತು ಸರ್ಕಾರದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ನಡೆಸಲಾಗುವುದು. ಈ ಗಣತಿಯನ್ನು ಅಂಕಿಅಂಶ ಸಂಗ್ರಹಣೆ ಕಾಯ್ದೆ, 2008ರ ಅಡಿಯಲ್ಲಿ ಕೈಗೊಳ್ಳಲಾಗುತ್ತಿದ್ದು, ಗಣತಿಯಲ್ಲಿ ಎಲ್ಲ ಉದ್ಯಮ/ಸಂಸ್ಥೆಗಳಿಂದ ಮಾಹಿತಿ ಕಲೆ ಹಾಕಲಾಗುತ್ತದೆ.  ಆದ್ದರಿಂದ ಸಾರ್ವಜನಿಕರು  ನಿಮ್ಮ ಮನೆ/ಉದ್ಯಮ/ಸಂಸ್ಥೆಗೆ ಭೇಟಿ ನೀಡಲಿರುವ ಗಣತಿದಾರರಿಗೆ ಸಂಪೂರ್ಣ ಸಹಕಾರ ನೀಡಿ ನಿಖರ  ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಕೋರಿದ್ದಾರೆ.

ಇಂದಿನಿಂದ  ಕುಟುಂಬ ಸಮೀಕ್ಷೆ
ಹೊಳೆನರಸೀಪುರ:
2013-14ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಕುಟುಂಬ ಸಮೀಕ್ಷೆ ಕಾರ್ಯವು ನ.13ರಂದು ಆರಂಭಗೊಳ್ಳುತ್ತಿದ್ದು ನ.17ರವರೆಗೆ ನಡೆಯಲಿದೆ. ಈ ಸಮೀಕ್ಷೆಗೆ ತಾಲೂಕಿನ ಎಲ್ಲ ಆಯಾ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳು, ಎಸ್‌ಡಿಎಂಸಿ ಮತ್ತು ಪೋಷಕರು ಸಹಕಾರ ನೀಡಿ ಶಾಲೆ ಬಿಟ್ಟ ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಶಿವಮಾದಪ್ಪ ಕೋರಿದ್ದಾರೆ.

ಹುದ್ದೆಗೆ ಅರ್ಜಿ
ಹಾಸನ:
ಜಿಲ್ಲೆಯ ಅರಸೀಕೆರೆ ತಾಲೂಕು ಹಬ್ಬನಘಟ್ಟ ಮತ್ತು ಮಡಾಳು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ 5,500 ಗೌರವಧನದ ಆಧಾರದ ಮೇಲೆ ನೇಮಿಸಲು ಹಬ್ಬನಘಟ್ಟ ಗ್ರಾಪಂ ವ್ಯಾಪ್ತಿಗೆ ಬರುವ ಪ್ರವರ್ಗ-1 ಹಾಗೂ ಮಡಾಳು ಗ್ರಾಪಂ ವ್ಯಾಪ್ತಿಗೆ ಬರುವ ಸಾಮಾನ್ಯ ಸ್ಥಳೀಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಯೋವುತಿ ಸಾಮಾನ್ಯ ಅಭ್ಯರ್ಥಿಗಳಿಗೆ 18ರಿಂದ 35 ಹಾಗೂ ಪ್ರವರ್ಗ-1ಗೆ 18ರಿಂದ 40 ವರ್ಷ. ಎಸ್ಸೆಸ್ಸೆಲ್ಸಿ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಗ್ರಂಥಾಲಯ ತರಬೇತಿ ಹೊಂದಿದವರಿಗೆ, ಮುಂದುವರಿಕಾ ಕಲಿಕಾ ಕೇಂದ್ರಗಳಲ್ಲಿ ಪ್ರೇರಕ, ಉಪಪ್ರೇರಕರಾಗಿ ಕೆಲಸ ನಿರ್ವಹಿಸುವವರಿಗೆ ಆದ್ಯತೆ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ನ.22ರೊಳಗೆ ಸಂಬಂಧಿಸಿದ ಪಿಡಿಒ/ಕಾರ್ಯದರ್ಶಿಗಳಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಗ್ರಾಪಂ ಕಾರ್ಯಾಲಯ ಅಥವಾ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಹಾಸನ ಇವರನ್ನು ಸಂಪರ್ಕಿಸಬಹುದು.

ಅರ್ಜಿ ಆಹ್ವಾನ
ಹಾಸನ:
ರಾಜ್ಯ ಸರ್ಕಾರವು ಸುವರ್ಣ ವಸ್ತ್ರ ನೀತಿ ಯೋಜನೆ ಜಾರಿಗೊಳಿಸಿದ್ದು, ಇದರಲ್ಲಿ ಸಿದ್ಧ ಉಡುಪು ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ಹಾಲಿ ಚಾಲ್ತಿಯಲ್ಲಿರುವ ಸಂಸ್ಥೆಗಳ ಮೂಲಕ ಸೀವಿಂಗ್ ಮಶಿನ್(ಇಂಡಸ್ಟ್ರಿ) ಆಪರೇಟರ್, ವಿದ್ಯುತ್ ಮಗ್ಗ ನೇಯ್ಗೆ, ಕೈಮಗ್ಗ ನೇಯ್ಗೆ ತರಬೇತಿಗೆ ಕನಿಷ್ಠ 5ನೇ ತರಗತಿ ಪಾಸಾಗಿರುವ 18ರಿಂದ 35 ವಯೋವಾನದವರಿಗೆ ತರಬೇತಿ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.  ತರಬೇತಿ ಅವಧಿಯಲ್ಲಿ ಮಾಸಿಕ 2000 ಶಿಷ್ಯ ವೇತನ ನೀಡಲಾಗುವುದು. ತರಬೇತಿ ನಂತರ ನಿಯೋಜಿಸಿದ ಸ್ಥಳದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಅರ್ಜಿ ತಯಾರಿಸಿ ಅಗತ್ಯ ದಾಖಲೆಗಳೊಂದಿಗೆ ಒಂದೇ ಪ್ರತಿಯಲ್ಲಿ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಪಂ ಡಿಐಸಿ ಕಟ್ಟಡ, ಅರಸೀಕೆರೆ ರಸ್ತೆ, ಹಾಸನ ಇವರಿಗೆ ನ.19ರೊಳಗೆ ತಲುಪುವಂತೆ ಸಲ್ಲಿಸುವುದು. ದೂ. 08172-240627.

ಅಪ್ರೆಂಟೀಸ್ ತರಬೇತಿ
ಹಾಸನ:
ಎಚ್‌ಎಎಲ್ ಬೆಂಗಳೂರು ಇವರು ಮೂರು ವರ್ಷಗಳ ಎಲೆಕ್ಟ್ರಿಷಿಯನ್ ಅಪ್ರೆಂಟೀಸ್ ತರಬೇತಿಗಾಗಿ ಕಡು ಬಡತನದಲ್ಲಿರುವ ಎಸ್ಸೆಸ್ಸೆಲ್ಸಿಯಲ್ಲಿ ಶೇ. 60 ಅಂಕ ಗಳಿಸಿರುವ ಸಾಮಾನ್ಯ ಅಭ್ಯರ್ಥಿಗಳಿಗೆ, ಶೇ.50 ಅಂಕ ಪಡೆದ ಪರಿಶಿಷ್ಟ ಜಾತಿ/ಪಂಗಡ/ಅಂಗವಿಕಲ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಯೋವುತಿ 15ರಿಂದ 18 ವರ್ಷಗಳು. ತರಬೇತಿ ಅವಧಿಯಲ್ಲಿ ಸ್ಟೈಫಂಡ್ ಮತ್ತು ಇತರೆ ಭತ್ಯೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ನ.16 ಕಡೆ ದಿನ. ಅರ್ಜಿ ನಮೂನೆ ಹಾಗೂ ಇತರೆ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ, ದೂ. 08172-268374 ಸಂಪರ್ಕಿಸಿ.

ಚಿನ್ನಾಭರಣ ಕಳ್ಳತನ
ಆಲೂರು:
ಪಟ್ಟಣದ ಉರ್ದು ಶಾಲೆಯ ಮುಂಭಾಗದಲ್ಲಿರುವ ಮನೆಯಲ್ಲಿ ಹಾಡಹಗಲೇ ಕಳ್ಳತನವಾಗಿರುವ ಘಟನೆ ಮಂಗಳವಾರ ನಡೆದಿದೆ. ಪಟ್ಟಣದಲ್ಲಿ ವಾಸವಾಗಿರುವ ಚಂದ್ರ ಶೆಟ್ಟಿ ದಂಪತಿ ಮಧ್ಯಾಹ್ನ ಆಸ್ಪತ್ರೆಗೆ ಹೋಗಿದ್ದರು. ಆಸ್ಪತ್ರೆಯಿಂದ ವಾಪಸ್ ಬಂದಾಗ ಮನೆ ಹಿಂಬಾಗಿಲನ್ನು ಒಡೆದು ಕಳ್ಳರು ಒಳಗೆ ನುಗ್ಗಿದ್ದಾರೆ. ಬೀರು ಬಾಗಿಲನ್ನು ಒಡೆದು 50 ಸಾವಿರ ಹಣ, 3 ಚಿನ್ನದುಂಗರಗಳು, 4 ಜೊತೆ ಜುಮಕಿಯನ್ನು ದೋಚಿ ಪರಾರಿಯಾಗಿದ್ದಾರೆ. ಕೇವಲ 20 ನಿಮಿಷದಲ್ಲಿ ನಡೆದ ಈ ಹಗಲು ಕಳ್ಳತನದಿಂದಾಗಿ ಪಟ್ಟಣದ ಜನತೆ  ದಿಗ್ಭ್ರಾಂತರಾಗಿದ್ದು, ಕಳೆದ 2 ತಿಂಗಳಿನಲ್ಲಿ  ಪಟ್ಟಣದಲ್ಲಿ  ಸರಣಿ ಹಗಲು ಕಳ್ಳತನಗಳು ನಡೆದಿವೆ. ಹಗಲು ಹೊತ್ತಿನಲ್ಲೇ ಈ ರೀತಿಯ ಕಳ್ಳತನಗಳು ನಡೆಯುತ್ತಿದ್ದರೂ ಪೊಲೀಸರು ಏನು  ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ  ಪ್ರಶ್ನೆಯಾಗಿದೆ. ಆರೋಪಿಗಳ ಪತ್ತೆಗಾಗಿ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಆಗಮಿಸಿದ್ದರು. ಸ್ಥಳಕ್ಕೆ ಆಗಮಿಸಿದ ಸಕಲೇಶಪುರ ಡಿವೈಎಸ್ಪಿ ಕುಮಾರಸ್ವಾಮಿ ತಪಾಸಣೆನಡೆಸಿದರು.

ನಾಳೆ ಕಾಯಕಯೋಗಿ ಪ್ರಶಸ್ತಿ ಪ್ರದಾನ
ಹಾಸನ:
ಜಿಲ್ಲಾ ಸಂಸ್ಕೃತಿ ವೇದಿಕೆವತಿಯಿಂದ ನ.14ರಂದು ಕಾಯಕಯೋಗಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ತಿರುಪತಿಹಳ್ಳಿ ಶಿವಶಂಕರಪ್ಪ ತಿಳಿಸಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 26 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಜಾನಪದ ತಜ್ಞ ಡಾ. ಹಿ.ಶಿ.ರಾಮಚಂದ್ರೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಾನಪದ ಗಾಯಕಿ ಹಾಗೂ ನಾಡೋಜ ಪ್ರಶಸ್ತಿ ವಿಜೇತೆ ಸುಕ್ರಿ ಬೊಮ್ಮಗೌಡ ಪ್ರಶಸ್ತಿ ಪ್ರದಾನ ಮಾಡುವರು.

ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ಇಂದು
ಅರಸೀಕೆರೆ:
ತಾಲೂಕಿನ ಯರೇಹಳ್ಳಿ ಹಾಗೂ ಪಾಳ್ಯದ ಸಮೀಪ ಇರುವ ತಿಮ್ಮಪ್ಪನ ಬೆಟ್ಟದ ಮೂಲ ಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀ ರಂಗನಾಥ ಸ್ವಾಮಿ, ಆಂಜನೇಯ ಸ್ವಾಮಿ, ಭೈರವೇಶ್ವರ ಸ್ವಾಮಿ ಹಾಗೂ ಬೇವಿನ ಮರದ ಅರಳಿಮರದೈ ಮ್ಮ ದೇವಿ ಅವರ ನೂತನ ದೇವಾಲಯಗಳ ಉದ್ಘಾಟನೆ, ಕಲಶಾರೋಹಣ ಮತ್ತು ವಿಗ್ರಹಗಳ ಪ್ರತಿಷ್ಠಾಪನೆ ಕಾರ್ಯಕ್ರಮ ನ.13ರಿಂದ 15ರವರೆಗೆ ಜರುಗಲಿದೆ. ನ.14ರಂದು ಬೆಳಿಗ್ಗೆ ಕಳಸ ಸ್ಥಾಪನೆ, ಯಾಗಾಶಾಲಾ ಪ್ರವೇಶ, ಸಂಜೆ ಗ್ರಾಮ ದೇವರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಮ್ಮುಖದಲ್ಲಿ ವಿಗ್ರಹಗಳಿಗೆ ಪ್ರಾಣ ಪ್ರತಿಷ್ಠಾಪನಾ ಹೋಮಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗುವುದು. ನ.15ರಂದು ಮುಂಜಾನೆ ಬೆಲಗೂರು ಬಿಂಧು ಮಾಧವ ಶರ್ಮಾ ಅವರು ವಿಮಾನ ಗೋಪುರ ಕಲಶಾರೋರ್ಹ ನೆರವೇರಿಸುವರು. 11.30 ಗಂಟೆಗೆ ಚಿಕ್ಕನಾಯಯಕನಹಳ್ಳಿ ಶಾಸಕ ಸುರೇಶ್‌ಬಾಬು ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೆರಗೋಡಿ ರಂಗಾಪುರ ಮಠದ ಪರದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು.

ನಾಳೆಯಿಂದ ಭಾರತ ಸಹಕಾರ ಸಪ್ತಾಹ
ಹಾಸನ:
60ನೇ ಅಖಿಲ ಭಾರತ ಸಹಕಾರ ಸಪ್ತಾಹ ನ.14ರಿಂದ 7 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾರ್ಲೆ ಇಂದ್ರೇಶ್ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.14ರಂದು ಪಂಡಿತ್ ಜವಾಹರಲಾಲ್ ನೆಹರೂರವರ ಹುಟ್ಟುಹಬ್ಬವಾಗಿದ್ದು, ಅವರಿಗೆ ಕೃತಜ್ಞತೆ ಸಮರ್ಪಿಸಿ ಸಪ್ತಾಹದ ಅವಧಿಯಲ್ಲಿ ಕಳೆದ ವರ್ಷದ ಸಹಕಾರ ಚಳವಳಿಯ ಸಾಧನೆ ಮತ್ತು ವೈಫಲ್ಯಗಳನ್ನು ವಿಮರ್ಶಿಸಲಾಗುವುದು. ಮುಂದಿನ ವರ್ಷಕ್ಕೆ ಗುರಿಯನ್ನು ಇರಿಸಿಕೊಳ್ಳಲಾಗುತ್ತದೆ. ಈ ಬಾರಿಯ ಸಪ್ತಾಹದ ಧ್ಯೇಯ “¶¥ÚÅÛ¥Ú ಸಮಯದಲ್ಲಿ ಆರ್ಥಿಕ ಸಾಮಾಜಿಕ ಪುನರುತ್ಥಾನಕ್ಕೆ ಸಹಕಾರ ÑÚMÑæ¤VÚ×Úß’ ಎಂಬುದಾಗಿದ್ದು, ಆಚರಣೆಗೆ ವಿಶೇಷ ಮಹತ್ವ ನೀಡಿದೆ ಎಂದರು. ಸಪ್ತಾಹದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉಪಸ್ಥಿತರಿರುತ್ತಾರೆ. ಶಾಸಕ ಎಚ್.ಡಿ.ರೇವಣ್ಣ ಸಪ್ತಾಹ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಸಪ್ತ ವರ್ಣದ ಸಹಕಾರ ಧ್ವಜಾರೋಹಣ ನೆರವೇರಿಸಲಿದ್ದಾರೆ. 7 ವಿಧಾನಸಭಾ ಕ್ಷೇತ್ರಗಳಲ್ಲಿ ಸಪ್ತಾಹ ನಡೆಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement