ಕನ್ನಡ ಕಟ್ಟಾಳುಗಳ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣ
ಕ.ಪ್ರ.ವಾರ್ತೆ ಹಾಸನ ನ.12
ಅಸಂಖ್ಯಾತ ಕನ್ನಡ ಕಟ್ಟಾಳುಗಳ ಹೋರಾಟದ ಫಲವಾಗಿ ಕರ್ನಾಟಕದ ಏಕೀಕರಣ ಸಾಧ್ಯವಾಯಿತು. ಆದರೆ ಅನೇಕರು ಕಂಡ ಅಖಂಡ ಕರ್ನಾಟಕದ ಕನಸು ಇಂದಿಗೂ ನನಸಾಗಲೇ ಇಲ್ಲ ಎಂದು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ವಿಭಜಿತ ಕಾಲೇಜಿನ ಕನ್ನಡ ಉಪನ್ಯಾಸಕ ಶೇಖರಶೆಟ್ಟಿ ವಿಷಾದಿಸಿದರು.
ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.ಭಾಷಾವಾರು ಪ್ರಾಂತ್ಯಗಳ ರಚನೆ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ದೃಷ್ಟಿಯಿಂದ ಅಪೂರ್ವವಾದುದು ಎಂಬುದೇನೋ ಸತ್ಯ. ಆದರೆ ಏಕೀಕರಣವಾಗಿ ಆರು ದಶಕಗಳು ಸಂದರೂ ನಾಡು, ನುಡಿ, ನೆಲ, ಜಲಗಳ ಸಮಸ್ಯೆ ಇಂದಿಗೂ ಕಾಡುತ್ತಿರುವುದೂ ಅಷ್ಟೇ ಸತ್ಯ . ಕವಿರಾಜಮಾರ್ಗಕಾರ ಹೇಳುವ ಗೋದಾವರಿ ನದಿ ಇಂದು ನಮ್ಮದಲ್ಲ. ನಮ್ಮದೇ ನದಿ ಕಾವೇರಿಗಾಗಿ ನಿರಂತರ ಹೋರಾಟ ಮಾಡಬೇಕಾಗಿರುವ ದುರಾದೃಷ್ಟ ನಮ್ಮದು ಎಂದು ವಿಷಾದಿಸಿದರು.
ಹೊಸೂರು, ಕಾಸರಗೋಡು, ಬೆಳಗಾವಿಗಳ ಸಮಸ್ಯೆ ಇಂದಿಗೂ ಕಾಡುತ್ತಿದೆ. ನಮ್ಮ ರಾಜಧಾನಿಯಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಇವೆಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಎಲ್ಲ ಭೇದಗಳನ್ನು ಮರೆತು ನಾವು ಒಂದಾಗಿ ಹೋರಾಟಕ್ಕೆ ಮುಂದಾಗಬೇಕು.
ನಮ್ಮ ಕನ್ನಡ ಭಾಷಾಪ್ರೇಮ ದುರಾಭಿಮಾನವಲ್ಲ. ಕನ್ನಡಿಗರು ಸಹನಶೀಲರು. ಬೇರೆ ಭಾಷೆಯನ್ನು ಕಲಿಯುವುದಕ್ಕಾಗಲಿ, ಬೇರೆ ಸಂಸ್ಕತಿಯನ್ನು ಗೌರವಿಸುವುದಕ್ಕಾಗಲಿ ನಮ್ಮ ವಿರೋಧವಿಲ್ಲ. ಆದರೆ ಪರಭಾಷೆಯ ಕಲಿಕೆ ನಮ್ಮ ಭಾಷೆಯನ್ನು ತುಳಿಯುವ ಮಟ್ಟಕ್ಕೆ ಹೋಗಬಾರದು. ನಮ್ಮತನವನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಬಾರದು. ನಮ್ಮ ನೆಲದ ಬೇರುಗಳನ್ನು ಕತ್ತರಿಸಿಕೊಳ್ಳುವ ಮಟ್ಟಕ್ಕೆ ಇಳಿಯಬಾರದು ಎಂದು ಹೇಳಿದರು.
ಕನ್ನಡ ಭಾಷೆ ಸಮೃದ್ಧವಾದ ಇತಿಹಾಸ ಹಾಗೂ ಪರಂಪರೆಯನ್ನುಳ್ಳದ್ದು. ಕಲಿಯಲು ಸುಲಭವಾದುದು, ಅನುಭವಿಸಲು ಆನಂದದಾಯಕವಾದದ್ದು. ಜಾಗತೀಕರಣದ ಹೆಸರಿನಲ್ಲಿ ಹುಟ್ಟಿಕೊಂಡಿರುವ ಇಂಗ್ಲೀಷಿನ ವ್ಯಾಮೋಹದಿಂದ ಇಂದು ನಮ್ಮ ಭಾಷೆಗೆ ದೊಡ್ಡ ಆತಂಕ ಎದುರಾಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಕನ್ನಡವನ್ನು ಬಳಸುವ,ಉಳಿಸುವ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂದು ಕನ್ನಡದ ಈ ತೇರನ್ನು ಎಳೆಯುವವರ ಅಗತ್ಯವಿದೆ.
ಈ ವಿಷಯದಲ್ಲಿ ಕನ್ನಡದ ಸ್ವಾಮೀಜಿಯಾಗಿರುವ ಅಲ್ಲಮಪ್ರಭು ಸ್ವಾಮೀಜಿ, ಕನ್ನಡದ ಪೂಜಾರಿ ಆಗಿರುವ ಹಿರೇಮಗಳೂರು ಕಣ್ಣನ್ ನಮಗೆ ಮಾದರಿಯಾಗಬೇಕು. ಇದನ್ನು ಮನಗಂಡು ಇಂದಿನ ವಿದ್ಯಾರ್ಥಿ ಸಮೂಹ ಕನ್ನಡದ ಕೈಂಕರ್ಯಕ್ಕೆ ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಶ್ರೀನಿವಾಸ ಮಾತನಾಡಿ, ರಾಜ್ಯೋತ್ಸವ ಎಂಬುದು ಪ್ರತಿಯೊಬ್ಬ ಕನ್ನಡಿಗನಿಗೂ ರೋಮಾಂಚನದ ಆಚರಣೆ. ಅಲೌಕಿಕವಾದ ಭಾವನಾತ್ಮಕ ಅನುಭೂತಿ. ಆದರೆ ಅದು ಕೇವಲ ಆಡಂಬರದ, ಘೋಷಣೆಗಳಾಗದೆ ನಮ್ಮ ಒಳಗನ್ನು ಎಚ್ಚರಿಸುವ ಡಿಂಡಿಮವಾಗಬೇಕು.
ಪ್ರತಿ ಮನೆ ಮನಗಳಲ್ಲಿ ರಾಜ್ಯೋತ್ಸವದ ಹಣತೆ ಬೆಳಗಬೇಕು. ಭಾಷೆಯನ್ನು ಪ್ರೀತಿಸುವುದೆಂದರೆ ಸ್ಥಳೀಯ ಸಂಸ್ಕೃತಿಯನ್ನು ಅರಿಯುವುದು, ಪರಂಪರೆಯನ್ನು ಗೌರವಿಸುವುದು, ಸ್ಮಾರಕಗಳನ್ನು ರಕ್ಷಿಸುವುದು. ಇವುಗಳ ಮಹತ್ವವನ್ನು ಇತರರಿಗೆ ಹರಡುವ ಕೆಲಸವಾಗಬೇಕು.
ದುರಂತವೆಂದರೆ ಇಂದಿನ ಯುವಜನಾಂಗ ಆಧುನಿಕ ಜೀವನಶೈಲಿಯ ಭರಾಟೆಯಲ್ಲಿ ಸಂಸ್ಕತಿ ಪರಂಪರೆಗಳನ್ನು ಅಸಡ್ಡೆಮಾಡುತ್ತಿದೆ. ಅಮೂಲ್ಯ ಸ್ಮಾರಕಗಳನ್ನು ವಿಕೃತಗೊಳಿಸುವಲ್ಲಿ ಆನಂದಪಡುತ್ತಿದೆ. ವಿದ್ಯಾರ್ಥಿ ಸಮೂಹ ಇದರ ಬಗೆಗೆ ಅರಿವು ಮೂಡಿಸುವ ಕೆಲಸಮಾಡಬೇಕು. ಅದೇ ನಿಜವಾದ ರಾಜ್ಯೋತ್ಸವ ಆಚರಣೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ. ಮಾದೇಗೌಡ ಮಾತನಾಡಿ ಕನ್ನಡ ಭಾಷೆ ವಿಶ್ವದಲ್ಲಿಯೇ ಸುಂದರವಾದ ಭಾಷೆ. ವಿದೇಶಿಯರೂ ಸಹ ಇಂದು ಕನ್ನಡವನ್ನು ಕಲಿಯುವ ಆಸಕ್ತಿ ತೋರುತ್ತಿದ್ದಾರೆ. ಆದರೆ ಕನ್ನಡಿಗರಲ್ಲೇ ನಮ್ಮ ಭಾಷೆಯ ಬಗೆಗೆ ಅಸಡ್ಡೆ ಇದೆ. ಭಾಷೆಯಿಲ್ಲದೆ ಜನಾಂಗವಿಲ್ಲ. ಹಾಗೆಯೇ ಕನ್ನಡವಿಲ್ಲದೆ ಕನ್ನಡಿಗರಿಲ್ಲ. ಇದನ್ನು ಅರಿತು ಕನ್ನಡ ಬಳಕೆಯ ಬಗೆಗಿನ ಕೀಳರಿಮೆಯನ್ನು ನಾವು ತೊರೆಯಬೇಕಿದೆ.
ಇಂಗ್ಲಿಷ್ ಕಲಿತರೆ ಮಾತ್ರ ನಾವು ಉಳಿಯಬಲ್ಲೆವು ಎಂಬ ಭ್ರಮೆಯಿಂದ ನಾವು ಹೊರಬರಬೇಕಿದೆ. ಇದನ್ನು ಸಾಧಿಸಲು ನಾವೆಲ್ಲ ಒಗ್ಗೂಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಎಂ.ಪಿ.ಗೋಪಾಲ್, ಗ್ರಂಥಪಾಲಕ ಮಂಜುನಾಥ್, ಕನ್ನಡ ಉಪನ್ಯಾಸಕ ಕಾಂತರಾಜ್, ರೇಷ್ಮ ಮಾತನಾಡಿದರು. ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ರೇಖಾ ಸ್ವಾಗತಿಸಿದರು. ರೋಜಾ ವಂದಿಸಿದರು. ಗೌತಮಿ ಮತ್ತು ನವೀನ ಕಾರ್ಯಕ್ರಮ ನಿರೂಪಿಸಿದರು. ನಾಡು ನುಡಿ ಕುರಿತ ಗೀತೆಗಳನ್ನು ಹಾಡಲಾಯಿತು.