ಕರಡಿ ದಾಳಿ: ರೈತನಿಗೆ ಗಾಯ, ಗ್ರಾಮಸ್ಥರ ಧರಣಿ
ಅರಸೀಕೆರೆ: ತೋಟಕ್ಕೆ ಹೋಗುತ್ತಿದ್ದ ರೈತನ ಮೇಲೆ ಕರಡಿಯೊಂದು ಹಠಾತ್ ದಾಳಿ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಗ್ರಾಮದ ಕೆಂಚಪ್ಪ (72) ಗಾಯಗೊಂಡ ರೈತ. ಅವರು ಮನೆಯಿಂದ ತೊಟದ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಪೊದೆಯಲ್ಲಿ ಅಡಗಿದ್ದ ಕರಡಿಯು ಏಕಾಏಕಿ ಮೇಲೆರಗಿ ಉಗುರುಗಳಿಂದ ಎಡತೋಳು, ತೊಡೆ, ಸೊಂಟದ ಭಾಗವನ್ನು ಪರಚಿ ಗಾಯಗೊಳಿಸಿವೆ. ದಾಳಿಯಿಂದ ಗಾಬರಿಗೊಂಡ ಕೂಗಿಕೊಂಡಾಗ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಆಗಮಿಸಿ ಓಡಿಸಲು ಬೆದರಿಸಿದಾಗ ಕರಡಿ ಅಲ್ಲಿಂದ ಕಾಲ್ಕಿತ್ತಿದೆ.
ಗಾಯಾಳುವನ್ನು ತಕ್ಷಣವೇ ಪಟ್ಟಣದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸುದ್ದಿ ತಿಳಿದ ಅರಣ್ಯಾಧಿಕಾರಿಗಳು ಚಿಕ್ಕಮ್ಮನಹಳ್ಳಿ ಗ್ರಾಮಕ್ಕೆ ತಕ್ಷಣವೇ ಆಗಮಿಸಿ ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲು ಗ್ರಾಮಸ್ಥರೊಂದಿಗೆ ಸಹಕರಿಸಿದರು. ಅಲ್ಲದೆ ಪದೇ ಪದೇ ಕರಡಿ ದಾಳಿಗೊಳಗಾಗುತ್ತಿರುವ ರೈತರಿಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡುವಂತೆ ವರದಿ ಕಳುಹಿಸುವುದಾಗಿ ಕುಟುಂಬ ಸದಸ್ಯರಿಗೆ ಭರವಸೆ ನೀಡಿದರಲ್ಲದೆ ಗಾಯಾಳುವಿನೊಂದಿಗೆ ಆಸ್ಪತ್ರೆಗೆ ಆಗಮಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಚಿಕ್ಕಮ್ಮನಹಳ್ಳಿ ಗ್ರಾಮಸ್ಥರ ಧರಣಿ: ತಾಲೂಕಿನಾದ್ಯಂತ ಪದೇ ಪದೇ ಕರಡಿ ದಾಳಿ ಪ್ರಕರಣಗಳು ಮರುಕಳಿಸುತ್ತಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ನಿದ್ರೆಗೆ ಜಾರಿದೆ.
ಕಳೆದ 15 ದಿನಗಳ ಹಿಂದಷ್ಟೆ ತಾಲ್ಲೂಕಿನ ಗೊಲ್ಲರಹಳ್ಳಿ ವಡ್ಡರಹಟ್ಟಿ ಗ್ರಾಮದ ವ್ಯಕ್ತಿಯೊಬ್ಬನನ್ನು ಕರಡಿಯೊಂದು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಾಸುವ ಮುನ್ನವೇ ಕಳೆದ ಮಂಗಳವಾರ ಇದೇ ಗ್ರಾಮದ ಶಂಕರಲಿಂಗೆಗೌಡ ಹಾಗೂ ಸಿದ್ದಪ್ಪ ಎಂಬುವವರನ್ನು ಕಚ್ಚಿ ಗಾಯಗೊಳಿಸಿದ್ದವು. ಇಂತಹದೇ ದುರ್ಘಟನೆ ಮತ್ತೆ ಮರುಕಳಿಸಿರುವುದು ರೈತರನ್ನು ಭಯಭೀತರನ್ನಾಗಿಸಿದೆ.
ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ರೈತರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿದ್ದರೂ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸುತ್ತಿಲ್ಲ ಹಾಗೂ ಅರಣ್ಯ ಇಲಾಖೆ ಕರಡಿಗಳನ್ನು ಸೆರೆಯಿಡಿಯಲು ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರಾದ ಚಿರಂಜೀವಿ, ಈ ಹಿಂದೆ ಕರಡಿದಾಳಿಗೊಳಗಾದ ಶಂಕರಲಿಂಗಪ್ಪ, ಸಿದ್ದಪ್ಪ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಸೂಕ್ತ ನಿರ್ಧಾರ ಪ್ರಕಟಿಸುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲವೆಂದು ಪಟ್ಟುಹಿಡಿದಿದ್ದರು.
ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ಜೆ.ಜಿ.ರ ವಿ ಮಾತನಾಡಿ ಕರಡಿಗಳನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಲು ಈಗಾಗಲೇ ಸಿಬ್ಬಂದಿ ಬಲೆ ಸಹಿತ ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ ಗಾಯಾಳುವಿಗೆ ಸೂಕ್ತ ಪರಿಹಾರ ವಿತರಣೆಗೆ ವರದಿ ಕಳುಹಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.