ಗುಂಡೇಟಿಗೆ ಶ್ರೀಗಂಧ ಮರಗಳ್ಳನ ಸಾವು
ಕ.ಪ್ರ.ವಾರ್ತೆ ಹಾಸನ ನ.12
ಹಾಸನದ ಹಳೇಬೀಡು ರಸ್ತೆಯಲ್ಲಿರುವ ಶ್ರೀಗಂಧದ ರಕ್ಷಿತ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಶ್ರೀಗಂಧ ಕಳ್ಳನೊಬ್ಬ ಮೃತಪಟ್ಟಿದ್ದಾನೆ.
ಗುಂಡಿನ ಚಕಮಕಿ ವೇಳೆ ಕಳ್ಳರು ನಡೆಸಿದ ಕಲ್ಲು ತೂರಾಟದಿಂದ ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೃತನ ಗುರುತು ಪತ್ತೆಯಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯದ ಮೊದಲ ಶ್ರೀಗಂಧದ ರಕ್ಷಿತ ಅರಣ್ಯದಲ್ಲಿ ಭಾರಿ ಗಾತ್ರದ ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡುತ್ತಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಅರಣ್ಯದಲ್ಲಿ ಕಳ್ಳರನ್ನು ಹಿಡಿಯಲು ಪಣ ತೊಟ್ಟಿದ್ದರು. ಮಂಗಳವಾರ ಮುಂಜಾನೆ 1 ಗಂಟೆಯಲ್ಲಿ ಶ್ರೀಗಂಧ ರಕ್ಷಿತ ಅರಣ್ಯ ಪ್ರದೇಶವಾದ ಶ್ರೀರಾಮದೇವರಹಳ್ಳದಲ್ಲಿ ಸುಮಾರು 10ರಿಂದ 12 ಮಂದಿ ಶ್ರೀಗಂಧ ಮರ ಕಳ್ಳರು ಟಾರ್ಚ್ ಹಾಕಿಕೊಂಡು ಅಡ್ಡಾಡುತ್ತಿದ್ದರು. ಮಾಹಿತಿ ಮೇರೆಗೆ ಕಳ್ಳರ ಗುಂಪನ್ನು ಸುಮಾರು 7ರಿಂದ 8 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿ ಸುತ್ತುವರೆದಿದ್ದಾರೆ.
ಆ ಸಂದರ್ಭದಲ್ಲಿ ಮರಗಳ್ಳರು ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಏಕಾಏಕಿ ಕಲ್ಲುಗಳನ್ನು ತೂರಿದ್ದಾರೆ. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಿಬ್ಬಂದಿ ಮರಗಳ್ಳರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅರಣ್ಯಾಧಿಕಾರಿ ರಾಜಶೇಖರಗೌಡ ಅವರು ಹೊಡೆದ ಗುಂಡು ಮರಗಳ್ಳನೊಬ್ಬನಿಗೆ ತಾಗಿ ಆತ ಮೃತಪಟ್ಟಿದ್ದಾನೆ. ಈ ಸಂಬಂಧ ಕಳ್ಳನ ಮೃತದೇಹ ಬೆಳಗ್ಗೆ ಪತ್ತೆಯಾಗಿದೆ. ಕಳ್ಳರು ಅರಣ್ಯ ಸಿಬ್ಬಂದಿ ಮೇಲೆ ಕಲ್ಲು ತೂರಿದ ಪರಿಣಾಮ ಸಿಬ್ಬಂದಿ ಜಯಣ್ಣ ಹಾಗೂ ಮತ್ತೊಬ್ಬ ಅರಣ್ಯ ವಾಚಕನಿಗೆ ಗಾಯವಾಗಿದೆ.
ಹಾಸನ- ಹಳೇಬೀಡು ಮಧ್ಯೆ 4132 ಎಕರೆ ಪ್ರದೇಶದಲ್ಲಿ ಸುಮಾರು ಒಂದೂವರೆ ಲಕ್ಷ ಶ್ರೀಗಂಧದ ಮರಗಳಿವೆ. 2008-09ನೇ ಸಾಲಿನಲ್ಲಿ ನೆಟ್ಟ ಅಪರೂಪದ ಗಿಡರಾಶಿ ಇಂದು ಮರಗಳಾಗಿ ಬೆಳೆಯುತ್ತಿವೆ. ಆದರೆ ಬೆಳೆಯುವ ಮುನ್ನವೇ ಧನಬಾಕ ಕಳ್ಳರು ದೊಡ್ಡ ದೊಡ್ಡ ಮರಗಳನ್ನೇ ಕಡಿದು ಕಳ್ಳಸಾಗಣೆ ಮಾಡುತ್ತಿದ್ದರು. ದಢೂತಿ ಗಾತ್ರದ ಮರಗಳ ಬುಡಕ್ಕೆ ಕೊಡಲಿ ಇಲ್ಲವೇ ಗರಗಸ ಇಟ್ಟು ಧರೆಗುರುಳಿಸುತ್ತಿದ್ದರು. ಹರಿತವಾದ ಆಯುಧಗಳನ್ನು ತಂದು ಅಪರೂಪದ ಶ್ರೀಗಂಧದ ಮರಗಳ ಹನನ ಮಾಡಿ ರಾಜಾರೋಷವಾಗಿ ಬೇರೆಡೆ ಸಾಗಿಸುತ್ತಿದ್ದರು. ಇಷ್ಟು ವಿಸ್ತಾರವಾದ ಶ್ರೀಗಂಧದ ಅರಣ್ಯ ಇರುವುದು ರಾಜ್ಯದಲ್ಲೇ ಮೊದಲಾಗಿದೆ.
ಹಾಸನದ ಹಳೇಬೀಡು ರಸ್ತೆಯಲ್ಲಿರುವ ಶ್ರೀಗಂಧ ರಕ್ಷಿತಾರಣ್ಯದಲ್ಲಿ ಮರಗಳನ್ನು ಅಕ್ರಮವಾಗಿ ಕಡಿಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಇದರಿಂದ ಆ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ನಿನ್ನೆ ಬೆಳಗಿನ ಜಾವ ಮರಗಳ್ಳತನದಲ್ಲಿ ತೊಡಗಿದ್ದ ಕಳ್ಳರು ತಮ್ಮನ್ನು ಗಮನಿಸಿದ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾರೆ. ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸಿಬ್ಬಂದಿ ಕಳ್ಳರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಕಳ್ಳನೊಬ್ಬ ಮೃತಪಟ್ಟಿದ್ದಾನೆ. ಮೃತ ಕಳ್ಳನ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ.
-ಲಕ್ಷ್ಮಣ್, ಉಪ ಅರಣ್ಯಸಂರಕ್ಷಣಾಧಿಕಾರಿ