ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜೀತ ಮುಕ್ತರಿಗೆ 72 ಎಕರೆ ಭೂ ಹಂಚಿಕೆ

Srinivasa Murthy VN
Updated On : 13 Nov 2013, 12:22 pm

ಕ.ಪ್ರ.ವಾರ್ತೆ ಹಾಸನ ನ.12
ಅರಕಲಗೂಡು ತಾಲೂಕಿನ ಗಂಗೂರು ಗ್ರಾಮದ ಜೀತಮುಕ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಅನ್ಬುಕುಮಾರ್ ಅವರು 24 ಫಲಾನುಭವಿಗಳಿಗೆ ತಲಾ 3 ಎಕರೆ ಜಮೀನಿನ ಹಂಚಿಕೆಯನ್ನು ಲಾಟರಿ ಮೂಲಕ ಆಯ್ಕೆ ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ವೇಳೆ ಈಗಾಗಲೇ ಗುರುತಿಸಲಾಗಿರುವ 24 ಫಲಾನುಭವಿಗಳು ಚೀಟಿಗಳನ್ನು ಎತ್ತುವ ಮೂಲಕ ತಮ್ಮ ತಮ್ಮ ಅದೃಷ್ಟದ ಭೂಮಿ ಯಾವುದೆಂದು ಖಚಿತಪಡಿಸಿಕೊಂಡರು. ಜಿಲ್ಲೆಯ ಗಂಗೂರು ಜೀತವಿಮುಕ್ತರ ಪುನರ್ವಸತಿಗೆ ಸಕಲೇಶಪುರ ತಾಲೂಕಿನ ನಾನಾಕದೆಡೆ ಗುರುತಿಸಿರುವ 72 ಎಕರೆ ಜಮೀನಿಗೆ ಚೀಟಿ ಎತ್ತುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
19 ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಗಂಗೂರಿನಲ್ಲಿ 24 ಕುಟುಂಬಗಳನ್ನು ಜೀತದಿಂದ ಮುಕ್ತಿಗೊಳಿಸಿದ್ದರು. ಆದರೆ ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವ ಪ್ರಯತ್ನ ನಿರಂತರವಾಗಿ ನಡೆದರೂ ಭೂಮಿಯ ಗುರುತಿಸುವಿಕೆ ಪ್ರಕ್ರಿಯೆಯಲ್ಲಿ ಉಂಟಾದ ತೊಡಕುಗಳಿಂದ ಇಂದು ಜೀತ ವಿಮುಕ್ತರಿಗೆ ಜಮೀನಿನ ಒಡೆಯರಾಗುವ ಭಾಗ್ಯ ಬಂದೊದಗಿದೆ.
3 ಎಕರೆ ಫ್ಲಾಟುಗಳಾಗಿ ವಿಂಗಡಣೆ: ಸಕಲೇಶಪುರ ತಾಲೂಕಿನ ಕೆರೋಡಿಯಲ್ಲಿ 15 ಎಕರೆ, ಕೆಸಗುಲಿಯಲ್ಲಿ 21 ಎಕರೆ, ಹೊಸಗದ್ದೆಯಲ್ಲಿ 24 ಎಕರೆ, ಗೊಳಗುಂಡೆ ಗ್ರಾಮದಲ್ಲಿ 12 ಎಕರೆ ಜಮೀನನ್ನು ಜೀತ ವಿಮುಕ್ತರ ಪುನರ್ವಸತಿಗಾಗಿ ಗುರುತಿಸಿ ಸರ್ವೇ ಕಾರ್ಯ ನಡೆಸಿ ತಲಾ 3 ಎಕರೆಯ ಫ್ಲಾಟುಗಳಾಗಿ ವಿಂಗಡಿಸಲಾಗಿದೆ. ಇಂದು ಚೀಟಿ ಎತ್ತುವ ಮೂಲಕ ಯಾವ ಊರಿನ ಯಾವ ಭಾಗದ ಜಮೀನು ಯಾರದ್ದು ಎಂದು ಗುರುತಿಸಲಾಯಿತು.
ಕೆರೋಡಿಯಲ್ಲಿ ಐವರು, ಕೆಸಗುಲಿಯಲ್ಲಿ 7, ಹೊಸಗದ್ದೆಯಲ್ಲಿ 8, ಗೊಳಗುಂಡೆಯಲ್ಲಿ 4 ಫಲಾನುಭವಿಗಳಿಗೆ ಜಮೀನು ದೊರೆಯುತ್ತಿದ್ದು ಇಲ್ಲಿ ಹೊಸ ಬದುಕನ್ನು ಕಂಡು ಕೊಳ್ಳಬೇಕಿದೆ.
ಜಮೀನಿನ ಆಯ್ಕೆ ಪ್ರಕ್ರಿಯೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ವಿ. ಅನ್ಬುಮಾರ್ ಅವರು 19 ವರ್ಷಗಳ ಸುದೀರ್ಘ ಅವಧಿ ನಂತರ  ಜೀತ ಮುಕ್ತರಾದ ಕುಟುಂಬಗಳಿಗೆ ಜಮೀನಿನ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ. 1994ರಲ್ಲಿ ಅಂದಿನ ಜಿಲ್ಲಾಧಿಕಾರಿಯವರು ಗುರುತಿಸಿ ಮಾಡಿರುವ ಪಟ್ಟಿಯ ಆಧಾರದಲ್ಲಿ ಫಲಾನುಭವಿಗಳಿಗೆ ಈ ಸೌಲತ್ತು ಒದಗಿಸಲಾಗುತ್ತಿದೆ. ಯಾವುದೇ ಸಂದರ್ಭದಲ್ಲೂ ಇದನ್ನು ಮಾರಾಟ ಮಾಡಲು ಸಾಧ್ಯವಾಗದಂತೆ ನಿಷೇಧ ಹೇರಿ ಜಮೀನಿನ ಹಕ್ಕನ್ನು ಹಸ್ತಾಂತರಿಸಲಾಗುವುದು ಎಂದರು.
ಫಲಾನುಭವಿಗಳು ಸರ್ಕಾರ ನೀಡಿರುವ ಈ ಜಮೀನನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು, ಮಾದರಿ ಜೀವನ ನಡೆಸಲು ಶ್ರಮಿಸಬೇಕು ನೆರೆದಿದ್ದ ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಅನ್ಬುಕುಮಾರ್ ಕಿವಿಮಾತು ಹೇಳಿದರು.
ಸಕಲೇಶಪುರ ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಗುರುತಿಸಿರುವ ತಲಾ 3 ಎಕರೆ 24 ಭೂಭಾಗಗಳಲ್ಲಿ ಓಡಾಟಕ್ಕಾಗಿ ರಸ್ತೆಗಳಿಗೂ ಜಾಗ ಗುರುತಿಸಿ ಮೀಸಲಿರಿಸಲಾಗಿದೆ. ಈ ಜಮೀನುಗಳಲ್ಲಿ ಕೊಳವೆಬಾವಿಗಳನ್ನು ಕೊರೆಸಿ ಮುಂದಿನ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಶೀಘ್ರವೇ ಮಂಜೂರಾತಿ ದೊರೆಯುವ ನಿರೀಕ್ಷೆ ಇದೆ. ದನ, ಕರುಗಳನ್ನು ಈ ಹಿಂದೆ ಒಮ್ಮೆ ನೀಡಲಾಗಿರುವುದರಿಂದ ಮತ್ತೊಮ್ಮೆ ನೀಡಲು ಸಾಧ್ಯತೆಗಳಿದ್ದರೆ ಪರಿಶೀಲಿಸಿ ಒದಗಿಸುವ ನಿಟ್ಟಿನಲ್ಲೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಮನೆ ನಿರ್ಮಿಸಿಕೊಡಲು ಗ್ರಾಪಂಗೆ ಪತ್ರ
ಹಕ್ಕು ಪತ್ರ  ದೊರೆತ ನಂತರ ಜೀತ ವಿಮುಕ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿ ಆಯಾಯ ಗ್ರಾಮ ಪಂಚಾಯ್ತಿಗಳಿಗೆ ಪತ್ರ ಬರೆಯಲಾಗುವುದು. ಈಗಾಗಲೇ ಈ ಸಂಬಂಧ ಜಿ.ಪಂ. ಮುಖ್ಯ ಕಾರ್ಯನಿರ್ವ್ವಹಣಾಧಿಕಾರಿಯವರೊಂದಿಗೆ ಚರ್ಚಿಸಿದ್ದು ಅವರು ಜೊತೆಗೆ ಉದ್ಯೋಗ ಖಾತ್ರಿ ಯೋಜನೆ ಮೂಲಕವೂ ಇತರ ಅನುಕೂಲಗಳನ್ನು ಕಲ್ಪಿಸುವ ಭರವಸೆ ನೀಡಿದ್ಧಾರೆ ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಉಪವಿಭಾಗಾಧಿಕಾರಿ ಶ್ರೀವಿದ್ಯಾ, ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಮಚಂದ್ರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್, ಅವರ ಸಮ್ಮುಖದಲ್ಲಿ ನಡೆದ ಚೀಟಿ ಎತ್ತುವ ಮೂಲಕ ಜಮೀನಿನ ಆಯ್ಕೆ ಪ್ರಕ್ರಿಯೆಯಲ್ಲಿ ಫಲಾನುಭವಿಗಳ ಮುಖದಲ್ಲಿ ಸುಮಾರು ಎರಡು ದಶಕಗಳ ನಿರೀಕ್ಷೆ ಈಡೇರಿದ ಸಂತಸ ನೆಲೆ ಮೂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement