ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Srinivasa Murthy VN
Updated On : 13 Nov 2013, 12:22 pm

ಹಾಸನ: ಮಾಸಿಕ ವೇತನ ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಆಶಾ ಕಾರ್ಯಕರ್ತೆಯರು ಮಂಗಳವಾರ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತ ಮಹಿಳೆಯರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಸಾಲಗಾಮೆ ರಸ್ತೆಯ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದರು.
ಪ್ರತಿಭಟನಾನಿರತರು ಮಾತನಾಡಿ, ರಾಜ್ಯದಲ್ಲಿ ಸುಮಾರು 36 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಯಾವುದೇ ನಿಗದಿತ ವೇತನ ಹಾಗೂ ಗೌರವಧನ ಇಲ್ಲದೆ ಕೇವಲ ಪ್ರೋತ್ಸಾಹಧನದ ಅಡಿಯಲ್ಲಿ ದುಡಿಯುತ್ತಿದ್ದಾರೆ. ಆರೋಗ್ಯ ಸೇವೆ, ಸುರಕ್ಷಾ ಹೆರಿಗೆ, ಗರ್ಭನಿರೋಧಕ ವಸ್ತುಗಳ ಸುರಕ್ಷತಾ ಬಳಕೆ, ಶೌಚಗೃಹ ನಿರ್ಮಾಣ ಮತ್ತು ಸ್ವಚ್ಛತೆಯ ಬಗ್ಗೆ ಪರಿಣಾಮಕಾರಿಯಾಗಿ ತಿಳಿವಳಿಕೆ ನೀಡುವ ಹಾಗೂ ಅನುಷ್ಠಾನಗೊಳಿಸುವ ಉದ್ದೇಶದಿಂದ ದುಡಿಯುತ್ತಿರುವ ಇವರಿಗೆ ಕನಿಷ್ಠ ಸೌಲಭ್ಯವೂ ಇಲ್ಲ. ಕೇವಲ ಪ್ರೋತ್ಸಾಹಧನದ ಆಧಾರದಲ್ಲಿ ದುಡಿಯುತ್ತಿದ್ದೇವೆ. ಒಬ್ಬ ಮಹಿಳೆಯನ್ನು ಹೆರಿಗೆಗೆ ಕರೆದುಕೊಂಡು ಹೋದರೆ ಕೇವಲ 200 ಸಿಗುತ್ತದೆ. ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಪ್ರೋತ್ಸಾಹ ಹಣ ಸಿಗದೆ ಬಹಳ ಕಷ್ಟದ ಸ್ಥಿತಿ ಎದುರಿಸಬೇಕಾಗಿದೆ. ಹಲವಾರು ಜಿಲ್ಲೆಗಳಲ್ಲಿ ಮಾಡಿದ ಕೆಲಸದ ಹಣ ಕೂಡಾ ನಿಗದಿತ ಸಮಯಕ್ಕೆ ಬರುತ್ತಿಲ್ಲ ಎಂದು ಅಲವತ್ತುಕೊಂಡರು.
ಬೇಡಿಕೆಗಳು: ಮಾಸಿಕ ವೇತನ ಕನಿಷ್ಠ 3 ಸಾವಿರ ನಿಗದಿ ಮಾಡಬೇಕು. ಕನಿಷ್ಠ ಕೂಲಿ, ಕೆಲಸದ ಭದ್ರತೆ ಮತ್ತು ಸಾಮಾಜಿಕ ಭದ್ರತೆ ಒದಗಿಬೇಕು. ಎನ್‌ಆರ್‌ಎಚ್‌ಎಂ ಯೋಜನೆಯನ್ನು ಕಾಯಂ ಮಾಡಬೇಕು. ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಅನ್ವಯಿಸುವ ಜನಶ್ರೀ ಭೀಮಾ ಯೋಜನೆಯನ್ನು ಆಶಾ ಕಾರ್ಯಕರ್ತೆಯರಿಗೂ ವಿಸ್ತರಿಬೇಕು. ತಿಂಗಳ ಮೊದಲ ವಾರದಲ್ಲಿ ಸಂಬಳ ಕೊಡಬೇಕು. ಸಂಬಳವನ್ನು ಬ್ಯಾಂಕಿನ ಮುಖಾಂತರ ಕೊಡಬೇಕು. ಉಚಿತ ಮೊಬೈಲ್ ಹಾಗೂ ಕರೆನ್ಸಿ ನೀಡಬೇಕು. ಹಲವಾರು ಇಲಾಖೆಯ ಇತರೆ ಕೆಲಸಗಳಿಗೆ ಹುದ್ದೆಗಳನ್ನು ತುಂಬಿಕೊಳ್ಳುವಾಗ ಆಶಾ ಕಾರ್ಯಕರ್ತೆಯರಿಗೂ ಆದ್ಯತೆ ನೀಡಬೇಕು. ಹೆರಿಗೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ಹಾಗೂ ವಸತಿ ಸೌಲಭ್ಯಕ್ಕಾಗಿ ಪ್ರತ್ಯೇಕ ಕೊಠಡಿಗಳು ಇರಬೇಕು. ಪ್ರೋತ್ಸಾಹಧನ ತೆಗೆದುಕೊಳ್ಳಲು ಇರುವ ಹಲವಾರು ಪ್ರಾಯೋಗಿಕ ಸಮಸ್ಯೆಗಳನ್ನು ಕಡಿಮೆ ಮಾಡಬೇಕು. ಅದಕ್ಕೆ ಸಂಬಂಧಿಸಿದ ಖರ್ಚನ್ನು ಸರ್ಕಾರವೇ ಭರಿಸಬೇಕು. ಮೆಡಿಕಲ್ ಟಿಕೆಟ್ ಕೊಡಬೇಕು. ಸಾವಿರಾರು ಆಶಾ ಕಾರ್ಯಕರ್ತೆಯರು ಕೆಲಸ ಬಿಡುವುದನ್ನು ತಡೆಯುವ ದಿಕ್ಕಿನಲ್ಲಿ ಇಲಾಖೆಯವರು ಅವರ ಬಳಿ ಗೌರವದಿಂದ ವರ್ತಿಸಬೇಕು. ಆಶಾ ಕಾರ್ಯಕರ್ತೆಯರ ಮೇಲಾಗುತ್ತಿರುವ ಶೋಷಣೆ ನಿಲ್ಲಬೇಕು. ಸ್ಥಳೀಯವಾಗಿ ಕೆಲಸದ ಪ್ರದೇಶಗಳಲ್ಲಿ ದಾಳಿ- ದಬ್ಬಾಳಿಕೆ ನಡೆದಾಗ ಸೂಕ್ತ ರಕ್ಷಣೆ ಸಿಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನರ್ಸ್‌ಗಳು ನಿವೃತ್ತಿಯಾಗುತ್ತಿರುವುದರಿಂದ ಆ ಸ್ಥಾನಗಳಿಗೆ ಇವರಿಗೆ ತರಬೇತಿ ಕೊಟ್ಟು ನೇಮಕ ಮಾಡಬೇಕು. ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಸವಿತಾ, ಇಂದ್ರಮ್ಮ, ಲಕ್ಷ್ಮಮ್ಮ, ಸರೋಜಾ, ಕವಿತಾ, ಮಂಜುಳಾ, ಆರತಿ, ಸವಿತಾ, ಸುಮಾ, ಸಿಐಟಿಯು ನ ಅರವಿಂದ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement