ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಹಿಳೆಯರು ಮುಖ್ಯವಾಹಿನಿಗೆ ಬನ್ನಿ

Srinivasa Murthy VN
Updated On : 13 Nov 2013, 12:25 pm

ಕ.ಪ್ರ.ವಾರ್ತೆ ಹಾಸನ ನ.12
ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.50ರಷ್ಟು ಸ್ಥಾನಗಳ ಅವಕಾಶ ಕಲ್ಪಿಸಲಾಗಿದೆ. ಇದರಿಂದ ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರಿಗೆ ಉತ್ತಮ ಅವಕಾಶಗಳು ದೊರೆಯತ್ತಿವೆ. ಧೃತಿಗೆಡದೆ ಕೆಲಸ ಮಾಡುತ್ತಾ ಮಹಿಳೆಯರು ಮುನ್ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕರೆ ನೀಡಿದರು.
ನಗರದ ಹಾಸನಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ಜಿಲ್ಲಾಡಳಿತ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಉದ್ಯೋಗಿನಿ, ಕಿರುಸಾಲ ಯೋಜನೆಯ ಮಹಿಳಾ ಉದ್ಯಮಿಗಳು ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮಹಿಳಾ ಉದ್ದಿಮೆದಾರರಿಂದ ತಯಾರಿಸಲ್ಪಟ್ಟ ಆಕರ್ಷಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಜಾಗೃತರಾಗಬೇಕು. ತಪ್ಪು ಕಂಡಾಗ ಒಗಟ್ಟಾಗಿ ಹೋರಾಟ ನಡೆಸಿ ಸಮಾಜದ ಅಂಕುಡೊಂಕು ತಿದ್ದಬೇಕು ಎಂದರು.
ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, ಮಹಿಳೆಯರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಮಹಿಳೆಯರು ಕೂಡಿಟ್ಟ ಹಣ ಉತ್ತಮ ಕೆಲಸಗಳಿಗೆ ಪ್ರಯೋಜನಕ್ಕೆ ಬರುತ್ತದೆ. ಹೆಣ್ಣು ಮಕ್ಕಳಿಗೆ ಹೆಚ್ಚು ಅವಕಾಶ ನೀಡಿದಾಗ ಉತ್ತಮವಾಗಿ ಬೆಳೆಯುತ್ತಾರೆ. ಈ ನಿಟ್ಟಿನಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಭೆ ಕರೆದು ನಾನಾ ಇಲಾಖೆಗಳಡಿಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸ್ತ್ರೀ ಸಂಘಗಳು 84.49 ಕೋಟಿ ಹಣ ಉಳಿತಾಯ ಮಾಡಿರುವುದು ಹೆಮ್ಮೆ ಪಡುವಂತ ವಿಷಯವಾಗಿದ್ದು, ಮಹಿಳೆಯರ ಉತ್ತಮ ಸಾಧನೆಗೆ ಅಭಿನಂದನೆ ಹೇಳಿದ ಅವರು, ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಪ್ರದರ್ಶಿಸಲು ಅವಕಾಶ ಕಲ್ಪಿಸಬೇಕು. ಬ್ಯಾಂಕುಗಳಿಂದ ಸಾಲ ಸೌಲಭ್ಯ ನೇರವಾಗಿ ಸಂಘಗಳಿಗೆ ದೊರೆಯಬೇಕು. ಹೆಚ್ಚಿನ ಅನುಕೂಲ ಒದಗಿಸಲು ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದರು.
ಜಿಪಂ ಅಧ್ಯಕ್ಷೆ ಡಿ.ಜಿ.ಅಂಬಿಕಾ ರಾಮಣ್ಣ ಮಾತನಾಡಿ, ಗುಡಿ ಕೈಗಾರಿಕೆಗಳು ಉಳಿಯಲು ಮಹಿಳೆಯರೇ ಕಾರಣ. ಹಿಂಜರಿಕೆ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬಂದು ಆರ್ಥಿಕ ಅಭಿವೃದ್ದಿಗೆ ಮುಂದಾಗುವಂತೆ ಹೇಳಿದರು. ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಉತ್ಪಾದಿಸುವ ಪದಾರ್ಥಗಳಿಗೆ ಉತ್ತಮ ಬೆಲೆ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆ ಒತ್ತು ನೀಡಬೇಕು. ಇದರಿಂದ ಉದ್ಯಮ ಬೆಳೆಯಲು ಸಹಕಾರಿಯಾಗಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಮಾತನಾಡಿ, ಮಹಿಳೆಯರು ಒಗಟ್ಟಾಗಿ ಉದ್ಯಮ ನಡೆಸುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಚ್.ಸಿ.ಚಿದಾನಂದ್ ಮಾತನಾಡಿ, ಜಿಲ್ಲೆಯಲ್ಲಿ 6747 ಸ್ತ್ರೀ ಶಕ್ತಿ ಸಂಘಗಳಿದ್ದು 1,10,025 ಸದಸ್ಯರಿದ್ದಾರೆ. ಎಲ್ಲ ಸಂಘಗಳು ಬ್ಯಾಂಕ್‌ಗಳಿಂದ ಸಾಲ ಪಡೆದು ಶಿಸ್ತುಬದ್ಧವಾಗಿ ಮರುಪಾವತಿ ಮಾಡಿವೆ. ಈ ಹಿಂದೆ ನೀಡುತ್ತಿದ್ದ ಸುತ್ತು ನಿಧಿಯನ್ನು 5 ಸಾವಿರದಿಂದ 25 ಸಾವಿರಕ್ಕೆ ಏರಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.
ಜಿಲ್ಲೆಯಲ್ಲಿ ಸ್ತ್ರೀ ಶಕ್ತಿ ಸಂಘಗಳು ಉತ್ಪಾದಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಚಾರಿ ವಾಹನದ ವ್ಯವಸ್ಥೆ ಮಾಡಿದ್ದು, ಸಂತೆ ನಡೆಯುವ ಸ್ಥಳಗಳಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಉತ್ತಮ ಮಾರಾಟ ಕೂಡ ನಡೆಯುತ್ತಿದೆ ಎಂದರು. ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಮಚಂದ್ರ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement