ಮಾನವ ಸರಪಳಿ ನಿರ್ಮಿಸಿ ಕೆಜೆಪಿ ಪ್ರತಿಭಟನೆ
ಅರಕಲಗೂಡು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಾದಿ ಭಾಗ್ಯ ಯೋಜನೆಯನ್ನು ಎಲ್ಲ ಜನಾಂಗದ ಬಡವರಿಗೂ ವಿಸ್ತರಿಸಬೇಕು ಮತ್ತು ಎಪಿಎಲ್ ಕಾರ್ಡುದಾರರಿಗೂ ಪಡಿತರ ನೀಡುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿ ಕೆಜೆಪಿ ಯ ಅರಕಲಗೂಡು ಘಟಕ ಅರಕಲಗೂಡು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿದ ಕೆಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ನಂತರ ಇಲ್ಲಿನ ನಂಜೇಗೌಡ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಇಲ್ಲಿನ ತಾಲೂಕು ಕಚೇರಿ ಎದುರು ಜಮಾಯಿಸಿ ಧರಣಿ ನಡೆಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕೆಜೆಪಿ ಮುಖಂಡ ಎನ್. ರವಿಕುಮಾರ್ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು. ಶಾದಿ ಭಾಗ್ಯದಂತಹ ಯೋಜನೆಯನ್ನು ಜಾರಿಗೆ ತಂದಿರುವ ಸರ್ಕಾರದ ಉದ್ದೇಶ ಪಕ್ಷಪಾತ ನೀತಿಯಿಂದ ಕೂಡಿದ್ದು ಮುಸ್ಲಿಂ ಜನಾಂಗದಲ್ಲಿ ಪ್ರತಿ ವರ್ಷ 70 ಸಾವಿರ ಮದುವೆಗಳು ನಡೆಯುತ್ತವೆ.ಆದರೆ ಕೆಲವೇ ಮಂದಿ ಇದರ ಸವಲತ್ತು ನೀಡಲು ಸರ್ಕಾರ ಉದ್ದೇಶಿಸಿದ್ದು,ಇದು ಅಗ್ಗದ ಪ್ರಚಾರದ ತಂತ್ರವಾಗಿದೆ ಎಂದು ಟೀಕಿಸಿದ ಅವರು ಸರ್ಕಾರ ಈ ನಿಟ್ಟಿನಲ್ಲಿ ಎಲ್ಲ ಜನಾಂಗದ ಬಡವರಿಗೂ ಈ ಸೌಲಭ್ಯ ವಿಸ್ತರಿಸಬೇಕು ಎಂದು ನುಡಿದರು.
ಕೆಜೆಪಿ ಮುಖಂಡರಾದ ಎಲ್. ಜಗದೀಶ್, ಮಾಗಲು ಬಸವರಾಜು, ಷಡಕ್ಷರಿ, ಮಾಗೋಡು ಧರ್ಮಪ್ಪ, ಹಾರೋಹಳ್ಳಿ ಶಿವಣ್ಣ, ಚಂದ್ರಶೇಖರ್ ಇತರರು ಪಾಲ್ಗೊಂಡಿದ್ದರು.