ಶುಲ್ಕ ರಿಯಾಯಿತಿ ವಾಪಸ್ಗೆ ಮುಂದುವರಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರತಿಭಟನೆ
ಹಾಸನ: ಇಲ್ಲಿನ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಲ್ಕದ ರಿಯಾಯಿತಿ ಹಣವನ್ನು ವಾಪಸ್ ನೀಡುವಂತೆ ಆಗ್ರಹಿಸಿ ಮಂಗಳವಾರ ಸಹ ಪ್ರತಿಭಟನೆ ಮುಂದುವರೆಸಿದರು.
ವಿದ್ಯಾರ್ಥಿಗಳ ಶುಲ್ಕದ ಹಣವನ್ನು ಹಿಂದಿರುಗಿಸದೇ ಕಾಲೇಜು ಆಡಳಿತ ಮಂಡಳಿ ವಿನಾಕಾರಣ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಮಲೆನಾಡು ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಮತ್ತೆ ಪ್ರತಿಭಟಿಸಿದರು. ಮಲೆನಾಡು ಕಾಲೇಜಿಗೆ ವಿದ್ಯಾರ್ಥಿಗಳು ದಾಖಲಾಗುವ ವೇಳೆ ಪಾವತಿಸಿದ್ದ ಶುಲ್ಕದಲ್ಲಿ ಮುಕ್ಕಾಲು ಭಾಗವನ್ನು ರಿಯಾಯಿತಿಯಾಗಿ ಸರ್ಕಾರ ಕಾಲೇಜಿಗೆ ಪಾವತಿಸಿದ ನಂತರ ವಿದ್ಯಾರ್ಥಿಗಳಿಗೆ ರೀಫಂಡ್ ಮಾಡಬೇಕು ಎಂಬ ನಿಯಮವಿದೆ. ಸರ್ಕಾರದಿಂದ ವಿದ್ಯಾರ್ಥಿ ವೇತನ ತರಿಸಿಕೊಂಡು ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡುವ ಜವಾಬ್ದಾರಿ ಕಾಲೇಜು ಆಡಳಿತ ಮಂಡಳಿಗಿದ್ದು, ಅದನ್ನು ಸರಿಯಾಗಿ ನಿರ್ವಹಿಸಿದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಇತರೆ ಎಲ್ಲಾ ಖಾಸಗಿ ತಾಂತ್ರಿಕ ಕಾಲೇಜುಗಳಲ್ಲೂ ಶುಲ್ಕದ ಹಣವನ್ನು ವಿದ್ಯಾರ್ಥಿಗಳಿಗೆ ಹಿಂದಿರುಗಿಸಲಾಗಿದ್ದು, ಮಲೆನಾಡು ಕಾಲೇಜಿನಲ್ಲಿ ಮಾತ್ರ ಎರಡೂವರೆ ವರ್ಷದಿಂದ ಹಣ ರೀಫಂಡ್ ಮಾಡಿಲ್ಲ ಎಂದು ವಿದ್ಯಾರ್ಥಿಗಳು, ಕಾಲೇಜಿನ ಎಲ್ಲಾ ಸೆಮಿಸ್ಟರ್ನ ಒಟ್ಟು 1217 ವಿದ್ಯಾರ್ಥಿಗಳ 8 ಕೋಟಿ ರು.ಗೂ ಅಧಿಕ ಹಣವನ್ನು ಹಿಂದಿರುಗಿಸಬೇಕಿದ್ದು, ಹಣ ನೀಡದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿ.ಆರ್. ದೀಕ್ಷಿತ್, ಅನ್ವೀಕ್, ಜಿ. ಉಲ್ಲಾಸ್, ಸಚೀನ್, ಅನು, ಗಣೇಶ್ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದರು.