'ಕನ್ನಡ ಭಾಷೆ, ಸಾಹಿತ್ಯಕ್ಕೆ ಪ್ರಾಚೀನ ಇತಿಹಾಸ'
ಹಾಸನ: ಕನ್ನಡ ನಾಡು ನುಡಿ, ಸಾಹಿತ್ಯ, ಭಾಷೆಗಳಿಗೆ ಎರಡು ಸಾವಿರ ವರ್ಷಗಳಷ್ಟು ಪ್ರಾಚೀನ ಇತಿಹಾಸವಿದೆ ಎಂದು ಎ.ವಿ.ಕೆ. ಕಾಲೇಜಿನ ಪ್ರಾಧ್ಯಾಪಕ, ಸಾಹಿತಿ ಡಾ.ಯತೀಶ್ವರ್ ಹೇಳಿದರು.
ನಗರದ ರಂಗೋಲಿಹಳ್ಳದಲ್ಲಿರುವ ಸುರೇಶ್ಗುರೂಜಿ ಅವರ ಧ್ಯಾನ ಮತ್ತು ವ್ಯಕ್ತಿತ್ವ ವಿಕಾಸ ಕೇಂದ್ರದಲ್ಲಿ ನಡೆದ ಮನೆ-ಮನೆ ಕವಿಗೋಷ್ಠಿಯ 200ನೇ ಮಾಸಿಕ ಕಾರ್ಯಕ್ರಮದಲ್ಲಿ ಕನ್ನಡ ಕಾವ್ಯದಲ್ಲಿ ನಾಡು-ನುಡಿ ಎಂಬ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.
ಉಪನ್ಯಾಸದ ವಿಷಯವೇ ಅಭಿವ್ಯಕ್ತಿಗೆ ವಿಪುಲವಾಗಿದೆ. ವರ್ತಮಾನದಲ್ಲಿ ನಾಡು ನುಡಿಯ ಬಗ್ಗೆ ತಾಳುವ ನಿರ್ಧಾರವೇ ಮುಖ್ಯವಾಗಿದೆ. ಶಾಸನಗಳ ಪ್ರಕಾರ ನಮಗೆ ಲಭ್ಯವಿರುವುದು ಕವಿರಾಜಮಾರ್ಗ ಕೃತಿಯ ಕತೃ ಶ್ರೀ ವಿಜಯ. ನೃಪತುಂಗನ ಆಸ್ಥಾನದಲ್ಲಿದ್ದ ಈತ ಕನ್ನಡದ ಪ್ರಮುಖ ಲಕ್ಷಣಕಾರನಷ್ಟೇ ಅಲ್ಲದೆ ಕನ್ನಡದ ಅಲಂಕಾರಿಕ ಸಾಹಿತ್ಯದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾನೆ ಎಂದು ಹೇಳಿದರು.
ಕಂದ ಪದ್ಯಗಳ ಛಂದಸ್ಸಿನಲ್ಲಿ ಈ ಕವಿಯ ಬರವಣಿಗೆ ಅತ್ಯಂತ ಉತ್ಕೃಷ್ಟ ಎನಿಸುತ್ತದೆ. ಹಿಂದೆ ಕರ್ನಾಟಕವು ಭೌಗೋಳಿಕವಾಗಿ ಕಾವೇರಿಯಿಂದ ಆಂಧ್ರದ ಗೋದಾವರಿ ತೀರದವರೆಗೂ ವ್ಯಾಪಿಸಿತ್ತು. ಅಲ್ಲಿ ವಾಸಿಸುತ್ತಿದ್ದ ಜನರು ವಿಷಯ, ವಿಶೇಷ, ಜನಪದ ಸಾಹಿತ್ಯಗಳಿಂದ ತುಂಬಿರುತ್ತಿದ್ದರು. ಇಲ್ಲಿದ್ದವರನ್ನು ಚಲುವರು, ಸ್ವಾಭಿಮಾನಿಗಳು, ಪ್ರೀತಿ ದಯೆಗಳುಳ್ಳವರು ಮತ್ತು ಅಷ್ಟೇ ಉಗ್ರ ಸ್ವಭಾವದವರೂ ಆಗಿರುತ್ತಿದ್ದರು ಎಂದು ಕವಿ ವರ್ಣಿಸಿದ್ದಾನೆ ಎಂದು ತಿಳಿಸಿದರು. ಕವಿರಾಜಮಾರ್ಗ ನಮ್ಮ ನಾಡಿನ ಗುಣ, ಜನ, ಸಂಸ್ಕೃತಿಗಳನ್ನು ಅತ್ಯಂತ ರಮಣೀಯವಾಗಿ ಓದುಗರಿಗೆ ಕಟ್ಟಿಕೊಡುತ್ತದೆ. ಇದಕ್ಕಿಂತ ಮುಂಚಿತವಾಗಿಯೇ ಸಾಹಿತ್ಯ ಕೃತಿಗಳು ರಚನೆಯಾಗಿರಬಹುದು ಎಂದು ಅಭಿಪ್ರಾಯಪಟ್ಟರು. ಆದಿಕವಿ ಪಂಪನ ಭಾಷಾಭಿಮಾನ ಎಷ್ಟಿತ್ತೆಂದರೆ ನಂದನದಂತಹ ಕನ್ನಡ ನಾಡಿನಲ್ಲಿ ಕೋಗಿಲೆಯಾಗಿಯೋ ಅಥವಾ ಮರಿದುಂಬಿಯಾಗಿಯೋ ಹುಟ್ಟಬೇಕು. ದಕ್ಷಿಣ ದಿಕ್ಕಿನ ಗಾಳಿ ನೋಡಿದೊಡನೆ ಮಧುರವಾದ ಸಂಗೀತವನ್ನು ಕಿವಿಗಿಕ್ಕಿ ಮೆಲ್ಲಗೆಯ ಸುವಾಸನೆ, ಕೆಂಬಣ್ಣನ ಹೊಳಪಿನ ಪ್ರೀತಿ ಇದ್ದೊಡೆ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶವಂ ಎಂದು ಉದ್ಗರಿಸುತ್ತಾನೆ ಎಂದು ಹೇಳಿದರು.
ಕವಿ ಆಂಡಯ್ಯ ತನ್ನ ಕಾವ್ಯದಲ್ಲಿ ಹಲವು ನಾಲಿಗೆಗಳನ್ನು ಆದಿಶೇಷನಿಂದಲೂ ವರ್ಣಿಸಲಾಗದ, ಮತ್ತಿನಿಂದ ಕೂಡಿದ ಮನುಷ್ಯರಿಗಿಲ್ಲದ, ಮೆಲ್ಲಗೆ ಬೀಸುವ ತಂಗಾಳಿ, ತಿಳಿನೀರಿನಿಂದ ಕೂಡಿದ ಕೆರೆ, ಕಟ್ಟೆ, ಕೊಳ,ಸರೋವರಗಳಿಂದ ಕೂಡಿದ, ಇದಲ್ಲದೆ ಮಲ್ಲಿಗೆ, ಸಂಪಿಗೆ, ದಾಳಿಂಬೆ, ತೆಂಗು, ಮಾವು ಅಡಿಕೆಗಳೇ ಅಲ್ಲದೆ ಇನ್ನೂ ಅನೇಕ ಮರ-ಗಿಡಗಳಿಂದ ತುಂಬಿದ ಕರ್ನಾಟಕವು ಕಂಗೊಳಿಸುತ್ತದೆ ಎಂದು ತಿಳಿಸಿದರು.
ಸಾಲಿರಾಮಚಂದ್ರರಾಯರು (19ನೇ ಶತವಾನ) ಕನ್ನಡ ನೆಲದ ಹುಲ್ಲು ತುಳಸಿಗೆ ಸಮಾನ, ಕನ್ನಡದ ನದಿಗಳು ದೇವತೆಗಳಿಗೆ, ಕನ್ನಡದ ಕಲ್ಲುಗಳು ಸಾಲಿಗ್ರಾಮ ಶಿಲೆಗೆ, ಕನ್ನಡ ನುಡಿಯು ಗಾಯತ್ರಿ ಮಂತ್ರಕ್ಕೆ ಸಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ವಿ.ಸೀತಾರಾಮಯ್ಯ, ಕುವೆಂಪು ಮುಂತಾದ ಕವಿಗಳು ನಮ್ಮ ನಾಡನ್ನು ವರ್ಣಿಸುವ ಪರಿ ಅವಲೋಕನಾತೀತ ಎಂದರು. ನಂತರ ನಡೆದ ಕವಿಗೋಷ್ಠಿ ಮತ್ತು ಸಂವಾದದಲ್ಲಿ ಎಸ್.ಎಲ್. ಚನ್ನೇಗೌಡ, ಲಕ್ಷ್ಮಣ ಬಳೂಟಗಿ, ಬೇಲೂರು ಸೀತಾರಾಮ್, ನವಾಬಬೇಲೂರು, ಡಾ.ಜಯಚಂದ್ರ ಗಪ್ತ, ಚಂದ್ರಕಾಂತ ಪಡೇಸೂರ್, ಕೊಟ್ರೇಶ ಎಸ್. ಉಪ್ಪಾರ್, ಗೊರೂರು ಅನಂತರಾಜು, ಜ.ಹೊ. ನಾರಾಯಣಸ್ವಾಮಿ, ಶೀಟಿ, ಶಾಂತಾ ಅತ್ನಿ, ಪ್ರೊ. ಶಹಬುದ್ದೀನ್ ಇತರರು ಇದ್ದರು.
ಸುರೇಶ್ಗುರೂಜಿ ಪ್ರಾರ್ಥಿಸಿದರು. ಡಾ.ಜಯಚಂದ್ರಗುಪ್ತ ಸ್ವಾಗತಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮೇಟಿಕೆರೆ ಹಿರಿಯಣ್ಣ ಅವರನ್ನು ಸಭೆ ಅಭಿನಂದಿಸಿತು.
ಕೊಟ್ರೇಶ್ ಎಸ್. ಉಪ್ಪಾರ್ ಅವರನ್ನು ನೂತನ ಸಂಚಾಲಕರನ್ನಾಗಿ ಆಯ್ಕೆ ಮಾಡಿ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಂಚಾಲಕ ಶೀಟಿ ವಂದಿಸಿದರು.