ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾವೇರಿ ನೀರಾವರಿ ನಿಗಮದಿಂದ 18.5 ಕೋಟಿ ಮೀಸಲು

Srinivasa Murthy VN
Updated On : 15 Nov 2013, 1:03 am

ಚನ್ನರಾಯಪಟ್ಟಣ:  ಹಿರೀಸಾವೆ ಜುಟ್ಟನಹಳ್ಳಿ ಭಾಗದಲ್ಲಿನ 100 ಗ್ರಾಮಗಳಿಗೆ ಕುಡಿಯುವ ನೀರಿನ ಸಲುವಾಗಿ ಏತ ನೀರಾವರಿ ಮುಖೇನ ಆ ಭಾಗದ ಕೆರೆಗಳನ್ನು ತುಂಬಿಸಲು ಕಾವೇರಿ ನೀರಾವರಿ ನಿಗಮದಿಂದ 18.5 ಕೋಟಿ  ಮೀಸಲಿಟ್ಟಿದ್ದು, ಸರ್ಕಾರದ ತಾಂತ್ರಿಕ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.
ತಾಲೂಕಿನ ನವಿಲೆ ಏತ ನೀರಾವರಿ ಯೋಜನೆಯಿಂದ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುತ್ತಿದ್ದು, ಅಮರಗಿರಿ ಚಿಕ್ಕೋನಹಳ್ಳಿ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ತೆಪ್ಪೋತ್ಸವ ಹಾಗೂ ಬಾಗಿನ ಅರ್ಪಣೆ ಕಾರ್ಯ ಕ್ರಮದಲ್ಲಿ ಶಾಸಕರು ಮಾತನಾಡಿದರು.
 ಜಿಪಂ ಅಧ್ಯಕ್ಷೆ ಅಂಬಿಕಾರಾಮಕೃಷ್ಣ ಹಾಗೂ ಜಿಪಂ ಸದಸ್ಯೆ ಕುಸುಮಾ ಬಾಲಕೃಷ್ಣ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸುವ ಮುಖೇನ  ಶಾಸಕ ಸಿ.ಎನ್ ಬಾಲಕೃಷ್ಣ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.  ಶಾಸಕ ಬಾಲಕೃಷ್ಣ ಮಾತನಾಡಿ ತಾವು ಶಾಸಕರಾದ ನಂತರ ಕೆರೆಗಳಿಗೆ ನೀರು ತುಂಬಿಸುವುದನ್ನೇ ತಮ್ಮ ಗುರಿಯಾಗಿಸಿಕೊಂಡು ಬಾಗೂರು ನವಿಲೆ ಏತ ನೀರಾವರಿ ವ್ಯಾಪ್ತಿಗೆ ಬರುವ ಎಲ್ಲಾ ಕೆರೆಗಳಲ್ಲಿ ನೀರು ಶೇಖರಣೆ ಮಾಡಲು ಆದ್ಯತೆ ನೀಡಿದ್ದೇನೆ ಎಂದು ಹೇಳಿದರು.
ಸಂತೆ ಶಿವರ ಕೆರೆಗೆ ನೀರು ತುಂಬಿಸುವ ಸಲುವಾಗಿ ಕಾಮನಾಯಕನಹಳ್ಳಿ ಬಳಿಯಿಂದ ಸಂತೆಶಿವರ ಕೆರೆಯವರೆಗೆ 14 ಲಕ್ಷ ವೆಚ್ಚದಲ್ಲಿ  ನಾಲೆಯಲ್ಲಿದ್ದ ಹೂಳು ತೆಗೆಸಿದ ಫಲವಾಗಿ ನಾಲ್ಕೈದು ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಯಿತು ಎಂದು ನುಡಿದರು.  ತೋಟಿ ಕೆರೆಗೆ ಚನ್ನರಾಯಪಟ್ಟಣ ಕೆರೆಯಿಂದ ನೇರ ಪೈಪ್‌ಲೈನ್ ಹಾಗೂ ನವಿಲೆ ಏತ ನೀರಾವರಿಯಿಂದ ಅಣತಿ ಕೆರೆಗೆ ನೇರ ಪೈಪ್‌ಲೈನ್ ಅಳವಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅಧಿವೇಶನದಲ್ಲಿ ಚರ್ಚೆ: ಕಳೆದ ಐದು ವರ್ಷಗಳಿಂದ ಸತತ ಬರಗಾಲದ ಹಿನ್ನೆಲೆಯಲ್ಲಿ ತಾಲೂಕಿನ ಪ್ರಮುಖ ಬೆಳೆಯಾಗಿರುವ ತೆಂಗು ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದ್ದು, ತಾಲೂಕಿನಲ್ಲಿ ತೆಂಗು ಬೆಳೆ ನಷ್ಟ ಕಂಡಿರುವ  ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವಂತೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರನ್ನು ಕೋರಲಾಗಿದೆ ಎಂದು ಹೇಳಿದರು.
ಜಿಪಂ ಸದಸ್ಯ ಶಿವಶಂಕರ್‌ಕುಂಠೆ, ಎಪಿಎಂಸಿ ನಿರ್ದೇಶಕ ಶಿವಸ್ವಾಮಿ,ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜೇಗೌಡ,  ಸಂತೆ ಶಿವರ  ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್,ಮಾಜಿ ಅಧ್ಯಕ್ಷ ಕೆಂಪೇಗೌಡ,ತಾಪಂ ಮಾಜಿ ಅಧ್ಯಕ್ಷ ರಾಮಕೃಷ್ಣ,  ನೀರು ಬಳಕೆದಾರರ ಸಂಘದ ಕಾರ್ಯದರ್ಶಿ ವೀರೇಶ್, ಗ್ರಾಪಂ ಸದಸ್ಯ ವಿಜಯ್‌ಕುಮಾರ್, ಅಮರಗಿರಿ ಶ್ರೀ ರಂಗನಾಥ ಟ್ರಸ್ಟ್‌ನ ಪಾರ್ಥಸಾರತಿ  ಇದ್ದರು.
ತೆಪ್ಪೋತ್ಸವದಲ್ಲಿ ಶ್ರೀ ರಂಗನಾಥ ಸ್ವಾಮಿಯನ್ನು ಅಲಂಕರಿಸಿದ ತೆಪ್ಪದಲ್ಲಿ ಸ್ವಾಮಿಯನ್ನು ಕುಳ್ಳಿರಿಸಿ ಕೆರೆಯಲ್ಲಿ ಒಂದು ಸುತ್ತು ಪ್ರದಕ್ಷಿಣೆ ಹಾಕಲಾಯಿತು. 6 ವರ್ಷಗಳ ಹಿಂದೆ ಕೆರೆ ತುಂಬಿದ್ದ ಸಂದರ್ಭದಲ್ಲಿ ತೆಪ್ಪೋತ್ಸವ ನಡೆದಿತ್ತು. ಆ ನಂತರ ಮತ್ತೆ ತೆಪ್ಪೋತ್ಸವಕ್ಕೆ ಈ ವರ್ಷ ಕಾಲ ಕೂಡಿ ಬಂದಿದ್ದಕ್ಕೆ ಜನತೆ ಸಂತಸ ವ್ಯಕ್ತಪಡಿಸಿ ಕೆರೆಗೆ ನೀರು ತುಂಬಿಸಲು ಶ್ರಮಿಸಿದ ನಾಯಕರನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement