ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೇಂದ್ರ ರೈತರ ಸಾಲ ಮನ್ನಾ ಮಾಡಲಿ

Srinivasa Murthy VN
Updated On : 15 Nov 2013, 1:06 am

ಕ.ಪ್ರ.ವಾರ್ತೆ ಹಾಸನ ನ. 14
ಸಹಕಾರಿ ಸಂಘಗಳಲ್ಲಿ ಪ್ರಸ್ತುತ ಸರಿಯಾಗಿ ರೈತರಿಗೆ ಸಾಲ ಸೌಲಭ್ಯ ಯೋಜನೆಗಳು ಲಭ್ಯವಾಗುತ್ತಿಲ್ಲ. ರೈತರಿಗೆ ಹೊಸ ಸಾಲ ಯೋಜನೆಯನ್ನು ನೀಡದ ಕಾರಣ ರೈತರಿಗೆ ಸಂಕಷ್ಟ ಉಂಟಾಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿಷಾದ ವ್ಯಕ್ತಪಡಿಸಿದರು.
ರಾಜ್ಯ ಸಹಕಾರ ಮಹಾಮಂಡಳಿ, ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್,  ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಹಾಸನ ನಗರ ಮತ್ತು ತಾಲೂಕಿನ ಎಲ್ಲಾ ಸಹಕಾರ ಸಂಸ್ಥೆಗಳು ಹಾಗೂ ಸಹಕಾರ ಆಡಳಿತ ಮತ್ತು ಲೆಕ್ಕ ಪರಿಶೋಧನಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಸಹಕಾರ ಆಡಳಿತ, ನಾಯಕತ್ವ ಮತ್ತು ಸುಧಾರಣಾ ದಿನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಾದ್ಯಂತ ಈ ಸಹಕಾರಿ ಸಂಘಗಳಲ್ಲಿ ಸುಮಾರು 50 ಸಾವಿರ ಕೋಟಿ ರು.ನಷ್ಟು ರೈತರ ಸಾಲವಿರಬಹುದು. ಆದ್ದರಿಂದ ಕೇಂದ್ರದ ಯುಪಿಎ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಕೇಂದ್ರದಲ್ಲಿ ನಡೆದಿರುವಂತಹ ಭ್ರಷ್ಟಾಚಾರದ ಹಣಕ್ಕಿಂತ ರೈತರ ಸಾಲ ಹೆಚ್ಚಿಲ್ಲ ಎಂದು ಹೇಳಿದರು.
ಪ್ರಾಮಾಣಿಕರಿಗೆ ಪ್ರಶಸ್ತಿ ಇಲ್ಲ:  ಸಹಕಾರಿ ಸಂಘಗಳಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡದೆ, ಸರ್ಕಾರ ಅಪ್ರಾಮಾಣಿಕರಿಗೆ ಪ್ರಶಸ್ತಿ ನೀಡಲು ಮುಂದಾಗಿದೆ. ಸಹಕಾರಿ ಸಂಘಗಳಿಗಾಗಿ ದುಡಿದಂತಹ ಸಾಕಷ್ಟು ಮಂದಿಯನ್ನು ಗುರುತಿಸಿ ಸನ್ಮಾನಿಸುವಂತಹ ಕಾರ್ಯ ಆಗುತ್ತಿಲ್ಲ. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ವೈದ್ಯ ಮುನಿವೆಂಕಟೇಗೌಡ ಹಾಗೂ ಗುರುರಾಜ ಹೆಬ್ಬಾರ್ ಅವರಂತವರಿಗೆ ನೀಡದೆ, ಅಪ್ರಮಾಣಿಕರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.
ಹಿಂದೆ ಸಹಕಾರ ಬ್ಯಾಂಕ್‌ಗಳು ದಿವಾಳಿಯಾಗಿದ್ದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸುಮಾರು 3500 ಕೋಟಿ ರು. ಸಾಲ ಮನ್ನಾ ಮಾಡುವ ಮೂಲಕ ಬ್ಯಾಂಕ್‌ಗಳ ನೆರವಿಗೆ ಮುಂದಾಗಿತ್ತು. ಆದರೆ ಪ್ರಸ್ತುತ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಇದೇ ರೀತಿ ಸರ್ಕಾರ ರೈತರನ್ನು ಕಡೆಗಣಿಸಿದಲ್ಲಿ ಮುಂದೊಂದು ದಿನ ರೈತರು ಸಂಕಷ್ಟವನ್ನು ಎದುರಿಸಬೇಕಾದ ಸಂದರ್ಭ ಬಂದೊದಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ 1 ರು.ಗೆ ಅಕ್ಕಿ, ಶಾದಿ ಭಾಗ್ಯ ಮುಂತಾದ ಹಲವು ಯೋಜನೆ ಜಾರಿಗೆ ತರುತ್ತಿದ್ದು, ಈ ಯೋಜನೆಗಳು ಕೇಲವರಿಗೆ ಮಾತ್ರ ಸೀಮಿತವಾದರೆ ಅದರಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಈ ಯೋಜನೆಗಳನ್ನು ಎಲ್ಲಾ ಸಮುದಾಯದ ಜನರಿಗೂ ವಿಸ್ತರಣೆಯಾಗಬೇಕು. ಕೇವಲ ಓಟಿಗಾಗಿ ಕಾಂಗ್ರೆಸ್ ಸರ್ಕಾರ ಈ ರೀತಿಯ ಯೋಜನೆ ರೂಪಿಸುತ್ತಿರುವುದು ಸರಿಯಲ್ಲ ಎಂದ ಅವರು, ದೇಶದಲ್ಲಿ ಯುಪಿಎ ಸರ್ಕಾರದ ಆಳ್ವಿಕೆಯ ಫಲವಾಗಿ ದೇಶದಲ್ಲಿ ಶೇ.65ರಷ್ಟು ಮಂದಿ ಬಡವರಾಗಿಯೇ ಉಳಿಯುವಂತಾಗಿದೆ ಎಂದು ಕಿಡಿಕಾರಿದರು.
3ನೇ ಶಕ್ತಿ ಅಧಿಕಾರಕ್ಕೆ ಬರಲಿದೆ:  ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ದುರಾಡಳಿತದಿಂದ ಬೇಸತ್ತಿರುವ ಜನತೆ 2014ರ ಲೋಕಸಭಾ ಚುನಾವಣೆಯಲ್ಲಿ ಮೂರನೇ ಶಕ್ತಿಯನ್ನು ಬೆಂಬಲಿಸಲಿದ್ದಾರೆ ಎಂದು ಭವಿಷ್ಯ ನುಡಿದ ಅವರು, ಯಾವುದೇ ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಮುಂದಿನ ವರ್ಷ ದೇಶದಲ್ಲಿ ಅಧಿಕಾರದಲ್ಲಿ ಇರುವುದಿಲ್ಲ ಎಂದರು.
ರಾಜಕೀಯ ನಿವೃತ್ತಿ:  ಹಾಸನ-ದುದ್ದ-ತಿಪಟೂರು ರಸ್ತೆಗೆ ಕಾಮಗಾರಿಗೆ ಸಂಬಂಧಿಸಿದಂತೆ ನಾನು ಲೋಕೋಪಯೋಗಿ ಮಂತ್ರಿಯಾಗಿದ್ದಾಗ ಹಣವನ್ನು ಬಿಡುಗಡೆ ಮಾಡಿದ್ದೆ. ಇಷ್ಟಾದರೂ ರಸ್ತೆ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಮಹದೇವಪ್ಪ ರಸ್ತೆ ಕಾಮಗಾರಿಗೆ ಕಾಳಜಿ ತೋರುತ್ತಿಲ್ಲ. ಒಂದು ವೇಳೆ ನನ್ನ ಅಧಿಕಾರಾವಧಿಯಲ್ಲಿ ಈ ರಸ್ತೆಗಾಗಿ ಹಣ ಬಿಡುಗಡೆ ಮಾಡಿಲ್ಲ ಎಂಬುದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಸವಾಲು ಹಾಕಿದರು.
ಲೋಕೋಪಯೋಗಿ ಇಲಾಖೆಯೊಂದರಲ್ಲೇ ಸುಮಾರು 2200 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಇದರಿಂದ ರಸ್ತೆ ಹಾಗೂ ಇತರೆ ಕಾಮಗಾರಿಗಳು ನಡೆಯದೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ಟಿಎಡಿಎಗಾಗಿ ಪ್ರವಾಸ:  ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 122 ವೈದ್ಯರು ಹಾಗೂ 1750 ಅರೋಗ್ಯಾಧಿಕಾರಿಗಳ ಹುದ್ದೆಗಳು ಖಾಲಿ ಉಳಿದಿದ್ದು, ಜೊತೆಗೆ ಔಷಧಿಗಳ ಕೊರತೆ ಉಂಟಾಗಿದೆ.  ಹಾವು ಕಡಿತಕ್ಕೆ ಯಾವುದೇ ಔಷಧಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಇಲ್ಲದೆ ರೈತರು ಹಾಗೂ ಇತರರು ಸಾವನ್ನಪ್ಪುತ್ತಿದ್ದಾರೆ. ಇಷ್ಟಾದರೂ  ಆರೋಗ್ಯ ಸಚಿವರು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಸಚಿವರು ಈಗಾಗಲೇ ಜಿಲ್ಲೆಗೆ ಮೂರ್ನಾಲ್ಕು ಬಾರಿ ಬಂದು ಹೋಗಿದ್ದರು ಸಹ ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಮುಂದಿನ ಅಸೆಂಬ್ಲಿಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ಪ್ರಧಾನಿ ಊರಾದ ಪಡುವಲಹಿಪ್ಪೆಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಹಾಗೂ ಔಷಧಿಯ ಕೊರತೆ ಉಂಟಾಗಿದೆ. ಈ ಬಗ್ಗೆ ಸಚಿವರು ಯಾವುದೆ ಕ್ರಮಕೈಗೊಂಡಿಲ್ಲ ಎಂದ ಅವರು, ಸಚಿವರು ಜಿಲ್ಲಾ ಪ್ರವಾಸ ಕೈಗೊಂಡರೆ ಅದರಿಂದ ಉಪಯೋಗ ಆಗಬೇಕು. ಅದನ್ನು ಬಿಟ್ಟು ಕೇವಲ ಟಿಎ-ಡಿಎ ಪಡೆಯುವುದಕ್ಕಾಗಿ ಪ್ರವಾಸ ಕೈಗೊಂಡರೆ ಯಾವುದೇ ಪ್ರಯೋಜನವಾಗದು ಎಂದು ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಪಟೇಲ್ ಶಿವರಾಂ ಮಾತನಾಡಿ,  ಸಹಕಾರ ಸಂಘಗಳು ಜನ ಸಾಮಾನ್ಯರಿಗೆ, ಸ್ತ್ರೀಶಕ್ತಿ ಸಂಘಗಳಿಗೆ ಸ್ವಯಂ ವ್ಯಕ್ತಿತ್ವನ್ನು ರೂಪಿಸಿಕೊಳ್ಳಲು ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಈ ಬ್ಯಾಂಕ್ ಸಹಕಾರ ನೀಡಿದೆ. ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದರು ಎಂದ ಅವರು, ಡಿಸಿಸಿ ಬ್ಯಾಂಕ್ ಕಟ್ಟಡದ ನಿರ್ಮಾಣದ ಬಗ್ಗೆ ಸಾಕಷ್ಟು ಅಪಪ್ರಚಾರಗಳು ನಡೆದಿವೆ. ಆದರೆ ನನ್ನ ಅಧಿಕಾರಕ್ಕಿಂತ ಮುನ್ನವೇ ಈ ಕಟ್ಟಡ ನಿರ್ಮಾಣಕ್ಕೆ ತೀರ್ಮಾನವಾಗಿತ್ತು. ನಾನು ಅಧಿಕಾರಕ್ಕೆ ಬಂದಾಗ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರಿಂದ ಗುಣಮಟ್ಟದ ಕಾಮಗಾರಿಗೆ ನಾನು ಮುಂದಾದೆ ಅಷ್ಟೇ. ಜೊತೆಗೆ ಈ ಕಟ್ಟಡಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗಡೌರ ಹೆಸರಿಟ್ಟಿರುವುದಕ್ಕೂ  ಅಪಸ್ವರಗಳು ಹುಟ್ಟುಕೊಂಡಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಡಾ.ಗುರುರಾಜ ಹೆಬ್ಬಾರ್ ಹಾಗೂ ಗಾಯತ್ರಿ ಪತ್ತಿನ ಸಹಕಾರ ಸಂಘ, ಮಣಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ, ದ್ಯಾಪಲಾಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಮೊಸಳೆ ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನಿಟ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಸಹಕಾರ ಒಕ್ಕೂಟದ ಕಾರ್ಲೆ ಇಂದ್ರೇಶ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಯೋಗೀಶಪ್ಪ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎನ್.ಸಿ.ನಾರಾಯಣ ಗೌಡ, ಸಹಕಾರ ಸಂಘಗಳ ಉಪ ನಿಬಂಧಕ ಇಲ್ಯಾಸ್ ಉಲ್ಲಾ ಷರೀಫ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement