ದುಡಿದು ಬದುಕಬೇಕೇ ವಿನಃ ಮೋಸದಿಂದಲ್ಲ
ಕನ್ನಡಪ್ರಭ ವಾರ್ತೆ ಹಾಸನ ನ. 14
ದುಡಿದು ಬದುಕಬೇಕೇ ವಿನಾ ಮೋಸ ಮಾಡಿ ಬದುಕುವುದಲ್ಲ. ದುಡಿಮೆ ಮತ್ತು ಸೃಜನಶೀಲತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಜಾನಪದ ವಿದ್ವಾಂಸ ಹಾಗೂ ಹಿರಿಯ ಸಾಹಿತಿ ಡಾ.ಹಿ.ಶಿ.ರಾಮಚಂದ್ರೇಗೌಡ ಹೇಳಿದರು.
ಜಿಲ್ಲಾ ಸಾಂಸ್ಕೃತಿಕ ವೇದಿಕೆಯಿಂದ ಗುರುವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಕಾಯಕಯೋಗಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ, ಅವನ ಮನಸ್ಸು ಎಂತಹದು ಅನ್ನೋದು ಮುಖ್ಯ. ಸುಳ್ಳು ಹಾಗೂ ಮೋಸವನ್ನು ಎದುರಿಸಬೇಕಾದರೇ ಕೇವಲ ಪ್ರತಿಭಟನೆ, ಗಲಾಟೆಯೊಂದೇ ಅಲ್ಲ. ಅದರ ವಿರುದ್ಧ ಮೌನವು ಮೂಲವಾಗಬೇಕು ಎಂದು ಅಭಿಪ್ರಾಯ ಪಟ್ಟರು.
ದೇಶದಲ್ಲಿ ಆರ್ಥಿಕವಾಗಿ ಸಬಲರಾಗಿರುವವರಿಗೆ ತಂತ್ರಜ್ಞಾನದ ಪಟ್ಟ ಸಿಗುತ್ತಿದೆ. ಆದರೆ ಕಾಯಕವೇ ಕೈಲಾಸ ಎಂದುಕೊಂಡಿರುವ ಕಾಯಕ ಯೋಗಿಗಳೇ ನಿಜವಾದ ತಂತ್ರಜ್ಞಾನಿಗಳು.
ನಿಜವಾದ ಕಾಯಕಯೋಗಿಗಳಿಗೆ ಹಿಂದೆ ತಂತ್ರಜ್ಞಾನದ ಬಗ್ಗೆ ಅರಿವಿರಲಿಲ್ಲ. ಹಿಂದೆ ಭಗವಂತನ ಹೆಸರಿನಲ್ಲಿ ಮೋಸ ನಡೆಯುತ್ತಿತ್ತು. ಆಗ ಬಸವಣ್ಣ, ಕನಕದಾಸರಂತಹವರು ಅದರ ವಿರುದ್ಧ ಶ್ರಮಿಸಿದರು. ಅದೇ ರೀತಿ ಕುವೆಂಪು ಸಹ ರೈತ ಉಳುವ ಯೋಗಿ ಅಂತ ಬಣ್ಣಸಿದ್ದಾರೆ. ಅದು ಅಕ್ಷರಶ: ನಿಜ ಎಂದು ಹೇಳಿದರು.
ನವೋದಯ ಕಾಲದಲ್ಲಿ ಅಭಿವೃದ್ಧಿ ಅನ್ನೋದು ಕೆಳಮಟ್ಟದಿಂದ ಪ್ರಾರಂಭವಾಗುತ್ತಿತ್ತು, ಪ್ರಸ್ತುತ ಅಭಿವೃದ್ಧಿ ಮೇಲ್ಭಾಗದಿಂದ (ಬಂಡವಾಳ ಹೂಡಿಕೆದಾರ) ಪ್ರಾರಂಭವಾಗುತ್ತಿದೆ. ಇದು ನಿಜವಾದ ಸಾರ್ವಜನಿಕರ ಅಭಿವೃದ್ಧಿಯಲ್ಲ. ಇಂತಹ ಸಂದರ್ಭದಲ್ಲಿ ನಿಜವಾದ ಕಾಯಕ ಯೋಗಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇನ್ನೂ ಅನೇಕರನ್ನು ಗುರುತಿಸಿ ಸನ್ಮಾನಿಸುವಂತಹ ಕಾರ್ಯ ಆಗಬೇಕು ಎಂದರು.
ಜಾನಪದ ಗಾಯಕಿ ಹಾಗೂ ನಾಡೋಜ ಪ್ರಶಸ್ತಿ ವಿಜೇತೆ ಸುಕ್ರಿ ಬೊಮ್ಮೇಗೌಡ ಮಾತನಾಡಿ, ಕುಲ ಕಸುಬುಗಳನ್ನು ಮಾಡುವುದು ಸುಲಭದ ಕೆಲಸವಲ್ಲ. ಯಾವುದೇ ಕೆಲಸವಾದರೂ ಅದು ತನ್ನದೇ ಆದ ಮಹತ್ವ ಹೊಂದಿರುತ್ತದೆ ಎಂದ ಅವರು, ಕುಲಕಸುಬು ಹಾಗೂ ಜಾನಪದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದು ಹೇಳಿದರು.
ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಜನಪರ ಹಾಗೂ ಹಿಂದುಳಿದ ವರ್ಗಗಳ ಜನರನ್ನು ಗೌರವಿಸಿದರೆ ಒಂದು ಸಮುದಾಯವನ್ನೇ ಗೌರವಿಸದಂತಾಗುತ್ತದೆ ಎಂದ ಅವರು, ಹಿಂದಿನ ಸಂಸ್ಕೃತಿಗಳು ಮುಂದಿನ ಪೀಳಿಗೆಗೆ ಉಳಿಯುವುದಿಲ್ಲ ಎಂಬ ಭಯ ಎಲ್ಲರಲ್ಲಿದೆ. ಆದರೆ ವಂಶಪಾರಂಪರ್ಯವಾಗಿ ಬೆಳೆದು ಬಂದಂತಹ ಕಾಯಕ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ನಿಜವಾದ ಕಾಯಕಯೋಗಿಗಳನ್ನು ಗುರಿತಿಸಿ ಈ ವೇದಿಕೆಯಲ್ಲಿ ಸನ್ಮಾನಿಸುತ್ತಿರುವುದು ರಾಜ್ಯದಲ್ಲಿ ಇದೇ ಮೊದಲಾಗಿದ್ದು, ಇದು ರಾಜ್ಯಾದ್ಯಂತ ಅನುಕರಣೆಯಾಗಬೇಕು ಎಂದು ಅವರು, ಮಕ್ಕಳ ದಿನಾಚರಣೆಯ ಅಂಗವಾಗಿ ಶುಭಾಶಯ ಕೋರಿದರು.
ಇದಕ್ಕೂ ಮುನ್ನ ನಗರದ ನಾನಾ ಬೀದಿಗಳಲ್ಲಿ ಕಲಾತಂಡದೊಂದಿಗೆ ಮೆರವಣಿಗೆ ನಡೆಸಿ ನಂತರ ಹಾಸನಾಂಬ ಕಲಾಕ್ಷೇತ್ರಕ್ಕೆ ಬರಲಾಯಿತು. ಸಾಹಿತಿ ಸುಬ್ಬು ಹೊಲೆಯಾರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್.ಪಿ.ವೆಂಕಟೇಶ್‌ಮೂರ್ತಿ, ಜಿಲ್ಲಾ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ತಿರುಪತಿಹಳ್ಳಿ ಶಿವಶಂಕರಪ್ಪ ಇದ್ದರು.
ಕಾಯಕಯೋಗಿ ಪ್ರಶಸ್ತಿ ಭಾಜನರು
ಪೌರ ಕಾರ್ಮಿಕ ಮಂಜುನಾಥ್, ಚಮ್ಮಾರ ಸಣ್ಣಯಲ್ಲಯ್ಯ, ಕಲ್ಲುಕುಟಿಗ ಚಿನ್ನಸ್ವಾಮಿ, ನೇಕಾರ ನಂಜಪ್ಪ, ಬುಟ್ಟಿ ಹೆಣೆಯುವವ ವೆಂಕಟರಾಮಶೆಟ್ಟಿ, ಹಲ್ಲೆ ಕಟ್ಟುವವ ನಹೀಮ್, ತಮಟೆ ವಾದಕ ವೆಂಕಟೇಶ್, ಪುರುಷ ಕೇಶ ವಿನ್ಯಾಸಕ ಕೆ.ನಾಗರಾಜ್, ಕುಂಬಾರ ಮಲ್ಲಪ್ಪಶೆಟ್ಟಿ, ಮೀನುಗಾರ ಎಂ.ದ್ಯಾವಪ್ಪ, ಮರಗೆಲಸಗಾರ ಟಿ.ಸಿ.ತಿಮ್ಮಾಚಾರಿ, ಬಾಣಸಿಗ ಎ.ಎಂ.ನಾಗರಾಜ್, ಹಮಾಲಿ ನಿಂಗಪ್ಪ, ಅಂಗವಿಕಲ ಕಾರ್ಮಿಕ ಜವರಯ್ಯ, ಗಾರೆಕೆಲಸಗಾರ ದೊರೆಸ್ವಾಮಿ, ಸಮಗ್ರ ಕೃಷಿಕ ಶಿವರಾಜ್ ಬರಗೂರು, ದ್ವಿಚಕ್ರ ವಾಹನ ರಿಪೇರಿಗಾರ ಮಹಮದ್ ಆಲಿ ಮತ್ತು ಅಬ್ದುಲ್‌ಉರುಫ್, ದೋಬಿ ನಾಗರಾಜ್, ಪಶುಪಾಲಕ ಸಣ್ಣಸ್ವಾಮಿ, ಆಯಾ ಗೌರಮ್ಮ, ಊಟದ ಎಲೆ ಹಚ್ಚುವ ಜಯಮ್ಮ, ಕೃಷಿ ಕಾರ್ಮಿಕ ಅವ್ವಮ್ಮ, ಮನೆಕೆಲಸದ ಸಣ್ಣಮ್ಮ, ಮಹಿಳಾ ಉಡುಪು ವಿನ್ಯಾಸಗಾರ್ತಿ ರತ್ನಾವತಿ ಪೌರಕಾರ್ಮಿಕ ಲಕ್ಷ್ಮಿ ಅವರಿಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.