ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರ ಭದ್ರತೆ ನೀಡಬೇಕು: ಟಿ.ಎ. ಶ್ರೀನಿಧಿ

Srinivasa Murthy VN
Updated On : 15 Nov 2013, 1:07 am

ಕ.ಪ್ರ.ವಾರ್ತೆ ಬೇಲೂರು ನ.14
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಪುರಸಭೆ ಸದಸ್ಯ ಟಿ.ಎ. ಶ್ರೀನಿಧಿ ಹೇಳಿದರು. ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಬೇಲೂರು ಕೋಟೆ ಬೀದಿ ವ್ಯಾಪಾರಿಗಳ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ 6  ತಿಂಗಳ ಹಿಂದೆ ಕೇಂದ್ರ ಸರ್ಕಾರ ಬೀದಿ ವ್ಯಾಪಾರದಲ್ಲಿ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರು ಹಾಗೂ ವ್ಯಾಪಾಸ್ಥರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ತಿಳಿಸಿ 7  ತಿಂಗಳು ಕಳೆದರೂ ರಾಜ್ಯ ಸರ್ಕಾರ ಈ ಯೋಜನೆ ತರುವಲ್ಲಿ ಹಿಂದೆ ಬಿದ್ದಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಪಟ್ಟಣದ  ಕೋಟೆ ಬೀದಿ ವ್ಯಾಪಾರಿಗಳು ನಮ್ಮ ಸಂಸ್ಕೃತಿ ಸಾರುವ ರಾಯಭಾರಿಗಳು ಎಂದು ಉಲ್ಲೇಖಿಸಿದ ಅವರು,  ಬೀದಿ ವ್ಯಾಪಾರಸ್ಥರು ದೇಶ-ವಿದೇಶ ಪ್ರವಾಸಿಗರಲ್ಲಿ ಸಜ್ಜನಿಕೆ ಹಾಗೂ ಸೌಜನ್ಯದ ಗುಣ ಮತ್ತು ಸ್ವಚ್ಛತೆಯಿಂದ ನಮ್ಮ ಬೇಲೂರಿಗೆ ಗೌರವ ತರಬೇಕು ಎಂದರು. ಬೇಲೂರು ಕೋಟೆ ಬೀದಿ ವ್ಯಾಪಾಸ್ಥರು ಸುಮಾರು 60 ಮಂದಿಯಿದ್ದು, ಅವರ ಕುಟುಂಬ ಸದಸ್ಯರು ದಿನ-ನಿತ್ಯ ಬರುವ ಆದಾಯದಲ್ಲಿ ಅವಲಂಬನೆ ಮಾಡಿಕೊಂಡಿದ್ದಾರೆ. ಬಡವರು ಶೋಷಿತರು ಹಾಗೂ ತುಳಿತಕ್ಕೆ ಒಳಗಾದವರು ಆರ್ಥಿಕ ಸಬಲತೆಯಿಂದ ಮಾತ್ರ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪುರಸಭೆ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು ಮಾತನಾಡಿ, ಸಂಘಟನೆಯಿಂದ ಮಾತ್ರ ತಮಗೆ ಸರ್ಕಾರದಿಂದ ಸಲ್ಲಬೇಕಾದ ಸೌಲಭ್ಯಗಳು ಪಡೆಯಲು ಸಾಧ್ಯ ಎಂದರು. ಚನ್ನಕೇಶವಸ್ವಾಮಿ ದೇವಾಲಯದ ವ್ಯವಸ್ಥಾಪನ ಉಪ ಸಮಿತಿ ಅಧ್ಯಕ್ಷ ಸಂತೋಷ್ ಮಾತನಾಡಿದರು. ಎಎಸ್‌ಐ ಚಂದ್ರಪ್ಪ, ಆರೋಗ್ಯ ಅಧಿಕಾರಿ ವೆಂಕಟೇಶ್, ಮಾರ್ಗದರ್ಶಿ ಬೇ.ನಾ.ತಾರಾನಾಥ್, ಬೀದಿ ವ್ಯಾಪಾಸ್ಥರ ಸಂಘದ ಅಧ್ಯಕ್ಷ ಬಾಬು, ಲಲಿತಕುಮಾರ್, ವಸಂತ್, ಸುಲೋಚನಮ್ಮ, ವೆಂಕಟೇಶ್ ಇತರರು ಇದ್ದರು.

ಆಟೋ ನಿಲ್ದಾಣದಲ್ಲೇ ಕಲಿಕಾ ಪರವಾನಗಿ ನೀಡುವ ಕಾರ್ಯಕ್ರಮ
ಕ.ಪ್ರ.ವಾರ್ತೆ ಸಕಲೇಶಪುರ ನ.14

ಅಗತ್ಯವಾಗಿ ಚಾಲನಾ ಪರವಾನಗಿ ಹೊಂದುವಂತೆ ಆಟೋಚಾಲಕರಿಗೆ ಉಪ ಸಾರಿಗೆ ಅಧಿಕಾರಿ  ಮೂಗಲವಳ್ಳಿ ಕೇಶವ ಧರಣಿ ಹೇಳಿದರು. ನ. 19 ರಂದು ಆಟೋಚಾಲಕರಿಗೆ ಸ್ಥಳದಲ್ಲೇ ಚಾಲನಾ  ಪರವಾನಗಿ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಪಟ್ಟಣದ ಆಟೋ ನಿಲ್ದಾಣಕ್ಕೆ ಭೇಟಿ ನೀಡಿ ಕಾರ್ಯಕ್ರಮದ ಬಗ್ಗೆ ಆಟೋಚಾಲಕರಿಗೆ ಅರಿವು ಮೂಡಿಸಿ ಮಾತನಾಡಿದರು. ತಾಲೂಕಿನಲ್ಲಿ 2239 ಆಟೋಗಳಿದ್ದು ಇದರಲ್ಲಿ ಕೇವಲ 69 ಆಟೋಚಾಲಕರು ಮಾತ್ರ ಪರವಾನಗಿ ಹೊಂದಿದ್ದಾರೆ. ಆದರೆ ಪರವಾನಗಿ ಇಲ್ಲದ ಆಟೋ ಚಾಲಕರಿಗೆ ಅವಘಡವಾದರೆ ಸಂಕಷ್ಟ ಎದುರಿಸ ಬೇಕಾಗುತ್ತದೆ. ಆದ್ದರಿಂದ ಚಾಲಕರು ಚಾಲನಾ ಪರವಾನಗಿ ಹೊಂದುವುದು ಅಗತ್ಯವಿದೆ. ಆದ್ದರಿಂದ ಸ್ಥಳೀಯ ಸಾರಿಗೆ ಕಚೇರಿ ಆಟೋ ನಿಲ್ದಾಣದಲ್ಲೇ ಕಲಿಕಾ ಪರವಾನಗಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಚಾಲಕರು ತಮ್ಮ ಭಾವ ಚಿತ್ರ, ವಿಳಾಸ ದೃಢೀಕರಣ, ಪಡಿತರ ಚೀಟಿ ಹಾಗೂ ಶಾಲಾ ಪ್ರಮಾಣ ಪತ್ರ ಹಾಜರುಪಡಿಸುವಂತೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement