ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ
ಕ.ಪ್ರ.ವಾರ್ತೆ ಹಾಸನ ನ. 14
ವಿದ್ಯಾರ್ಥಿಗಳು ಬದುಕಿಗೆ ಪೂರಕವಾದ ಶಿಕ್ಷಣ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ನಿವೃತ್ತ ಪ್ರಾಂಶುಪಾಲ ಬಿ.ಎನ್.ರಾಮಸ್ವಾಮಿ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ನಡೆದ ಪುಸ್ತಕ ಪ್ರದರ್ಶನದಲ್ಲಿ ಮಾತನಾಡಿದ ಅವರು, ಯುವಕರು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತಿದ್ದು, ಇದರಿಂದ ಪುಸ್ತಕ ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪುಸ್ತಕಗಳನ್ನು ಓದಿ ವಿಷಯ ತಿಳಿದುಕೊಳ್ಳುವ ಬದಲಾಗಿ ಅಂತರ್ಜಾಲಗಳ ಮೂಲಕ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಮನುಷ್ಯ ತನ್ನ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಗ್ರಂಥಾಲಯದ ಮೊರೆ ಹೋಗ ಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಚ್.ಎನ್.ರೂಪರಾಜ ಚಂದನ್ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಓದುವ ಗೀಳನ್ನು ಮೈಗೂಡಿಸಿಕೊಳ್ಳಬೇಕು. ಮಹಾನ್‌ನಾಯಕರುಗಳ ವಿಚಾರಧಾರೆಗಳನ್ನು ಪುಸ್ತಕಗಳನ್ನು ಓದಿ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇಂದಿನ ಯುವಕರಿಗೆ ಇದೆ ಎಂದರು.
ಇಂಗ್ಲಿಷ್ ವಿಭಾಗದ ವತಿಯಿಂದ ಪಠ್ಯಾಧಾರಿತ ಆರ್.ಕೆ.ನಾರಾಯಣ ಅವರ ಕಾದಂಬರಿ ಪುಸ್ತಕ ಪ್ರದರ್ಶನ ಹಮ್ಮಿಕೊಳ್ಳಲಾಯಿತು. ಗ್ರಂಥಪಾಲಕಿ ಬಿ.ಆರ್.ಮಾನಸ, ಪ್ರಾಧ್ಯಾಪಕರಾದ ಕುಸುಮ, ಸಾವಿತ್ರಿ, ಡಾ.ಕವಿತಾ, ಕಮಲ, ಮೂರ್ತಿ, ಸುರೇಶ್ ಇತರರು ಇದ್ದರು.