ವಿವೇಕಾನಂದ ರಥಯಾತ್ರೆಗೆ ಅರಕಲಗೂಡಿನಲ್ಲಿ ಭವ್ಯ ಸ್ವಾಗತ
ಅರಕಲಗೂಡು: ವಿವೇಕಾನಂದರ 150ನೇ ವರ್ಷದ ಅಂಗವಾಗಿ ರಾಮಕೃಷ್ಣ ಮಿಷನ್ ಕರೆತಂದ ರಥಯಾತ್ರೆಗೆ ಅರಕಲಗೂಡಿನಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಹೊರವಲಯದಲ್ಲಿ ಶಾಸಕ ಎ.ಮಂಜು, ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮಿ, ತಾಲೂಕು ಆಡಳಿತದ ಪರವಾಗಿ ತಹಸೀಲ್ದಾರ್ ಜಗದೀಶ್,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಂ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ, ಕ್ಷೇತ್ರ ಸಮನ್ವಯಾಧಿಕಾರಿ ರಮೇಶ್,ಶಿಶು ಅಭಿವೃದ್ಧಿ ಅಧಿಕಾರಿ ಮಲ್ಲೇಗೌಡ, ಪಪಂ ಮುಖ್ಯಾಧಿಕಾರಿ ಸುರೇಶ್‌ಬಾಬು, ವಿವಿಧ ಶಾಲಾ ಕಾಲೇಜುಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಘ ಸಂಸ್ಥೆಗಳ ಕಾರ್ಯಕರ್ತರು ಸ್ವಾಗತಿಸಿದರು. ಪಪಂ ಎಂಜಿನಿಯರ್ ಕವಿತಾ ರಥಕ್ಕೆ ಆರತಿ ಬೆಳಗಿ ಸ್ವಾಗತಿಸಿದರು. ನಂತರ ಪಟ್ಟಣದ ಬೈಪಾಸ್‌ರಸ್ತೆ ಮೂಲಕ ಪೇಟೆ ಮುಖ್ಯ ರಸ್ತೆಯಲ್ಲಿ ಚಲಿಸಿ ಅ.ನ.ಕೃ ವೃತ್ತದ ಮೂಲಕ ಗಣಪತಿ ಕೊತ್ತಲಿನಲ್ಲಿ ಆಯೋಜಿಸಿದ್ದ ಸತ್ಸಂಗ ವೇದಿಕೆಯತ್ತ ಮೆರವಣಿಗೆ ತೆರಳಿತು.ರಸ್ತೆಯುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸತ್ಸಂಗ ವೇದಿಕೆಯನ್ನು ರಾಮಕೃಷ್ಣ ಮಠದ ಯೋಗೇಶಾನಂದ ಮಹಾರಾಜ್ ಉದ್ಘಾಟಿಸಿದರು. ಶಾಸಕ ಎ.ಮಂಜು ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣ ಮಠದ ವಿವಿಧ ಸ್ವಾಮೀಜಿ, ಮಲ್ಲಿಕಾಜುನ ಸ್ವಾಮಿಗಳು ಮಾತನಾಡಿದರು.
ಇಂದು ಶ್ರೀರಾಮಮಂದಿರ ಪ್ರಾರಂಭೋತ್ಸವ
ಹೊಳೆನರಸೀಪುರ: ತಾಲೂಕಿನ ತಟ್ಟೇಕರೆ ವಸತಿ ಗ್ರಾಮದಲ್ಲಿ ಶ್ರೀಲಕ್ಷ್ಮಿದೇವಿ ಪ್ರತಿಷ್ಠಾಪನೆ ಮತ್ತು ಶ್ರೀರಾಮಮಂದಿರದ ಪ್ರಾರಂಭೋತ್ಸವ ನ.15 ರಂದು ನಡೆಯಲಿದೆ. ಬೆಳಗ್ಗೆ 5.30ಕ್ಕೆ ಅಷ್ಟಬಂಧ ಪ್ರತಿಷ್ಠೆ, ಪ್ರಾಣಪ್ರತಿಷ್ಠೆ ,ಪೂಜಾಂಗ ಹೋಮ, ಮಹಾಲಕ್ಷ್ಮಿ ಹೋಮ, ಶಿಖರ ಪ್ರತಿಷ್ಟಾಂಗ ಹೋಮ, ಪೂರ್ಣಹುತಿ ,ಕುಂಬಾಭೀಷೆಕ ಮಹಾಪೂಜೆಗಳು ನಡೆಯಲಿದೆ. ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಶಾಸಕ ರೇವಣ್ಣ, ಭವಾನಿರೇವಣ್ಣ, ಜಿಪಂ ಸದಸ್ಯ ಎಚ್.ಎನ್.ದೇವೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ.
ಮನೆ ಮನೆ ಜಾಗರಣಾ ಅಭಿಯಾನ
ಜಾವಗಲ್: ದೇಶದ ಗಡಿ ರಕ್ಷಣೆಯ ದೃಷ್ಟಿಯಿಂದ ಮೋದಿಯಂತಹ ಸಮರ್ಥ ರಾಜಕಾರಣಿ ಅವಶ್ಯಕ ಎಂದು ಬೇಲೂರು ಮಂಡಲ ಅಧ್ಯಕ್ಷ ಆನಂದ್ ಹೇಳಿದರು. ಪಟ್ಟಣದ ಬಸ್ ನಿಲ್ದಾಣ ಮುಂಭಾಗ ಬಿಜೆಪಿ ಘಟಕ ಆಯೋಜಿಸಿದ್ದ ಮನೆ ಮನೆ ಜಾಗರಣಾ ಅಭಿಯಾನದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿ ನಾಯಕತ್ವದ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ತಿಳಿಸಿದರು. ನ. 17ರಂದು ಬೆಂಗಳೂರು ಅರಮನೆ ಆವರಣದಲ್ಲಿ ನಡೆಯಲಿರುವ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ರೀತಿಯಲ್ಲಿ ಭಾಗವಹಿಸುವಂತೆ ಕೋರಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ಎಂ.ಚಂದ್ರಶೇಖರ್ ಜಿಲ್ಲಾ ಕಾರ್ಯದರ್ಶಿ ಎ.ಎಸ್. ಬಸವರಾಜು, ಜಾವಗಲ್ ಹೋಬಳಿ ಬಿಜೆಪಿ ಅಧ್ಯಕ್ಷ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಉಂಡಿಗನಾಳು ರಮೇಶ್, ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ಹಂದ್ರಾಳು ಸಿದ್ದಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಮಸಾಲೆ ರಮೇಶ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಟೈಲರ್ ಪಾಪಣ್ಣ ಇದ್ದರು.
ಸಚಿವರ ಪ್ರವಾಸ
ಹಾಸನ: ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ನ.16 ರಂದು ಬೆಳಗ್ಗೆ 9.30 ಕ್ಕೆ ಅರಸೀಕೆರೆಗೆ ಆಗಮಿಸುವರು. ಅಂದು ಬೆಳಗ್ಗೆ ಟಿ.ರಂಗಾಪುರದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಚಿವರು ಮಧ್ಯಾಹ್ನ 2 ಗಂಟೆಗೆ ಚಿತ್ರದುರ್ಗಕ್ಕೆ ತೆರಳುವರು.
ಸಿಎಂ ಮಾಧ್ಯಮ ಸಲಹೆಗಾರರ ಭೇಟಿ
ಹಾಸನ: ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ಪ್ರವಾಸ ಕಾರ್ಯಕ್ರಮದನ್ವಯ ನ.16 ರಂದು ಹಾಸನಕ್ಕೆ ಆಗಮಿಸುವರು. ಹಾಸನದಲ್ಲಿ ನ.16, 17 ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಹೊಳೆನರಸೀಪುರ: ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧಿಯವರ ಜೊತೆಗಾರರಾಗಿದ್ದ ಮೌಲಾನ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮ ದಿನವನ್ನು ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಕಾರಣದಿಂದಾಗಿ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಶಿವಮಾದಪ್ಪ ತಿಳಿಸಿದರು.
ಪಟ್ಟಣದ ಕೋಟೆಯಲ್ಲಿನ ಎಚ್‌ಪಿಎಸ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಬರೆಯುತ್ತಿದ್ದ ಲೇಖನಗಳಿಂದ ಮೌಲಾನ ಆಜಾದರು ಪ್ರಸಿದ್ಧಿ ಪಡೆದಿದ್ದರಲ್ಲದೆ, ಖಿಲಾಫತ್ ಚಳವಳಿಯ ನೇತೃತ್ವವನ್ನೂ ವಹಿಸಿದ್ದರು ಎಂದರು.ಬಿಆರ್‌ಸಿ ಕುಮಾರ್, ಮು.ಶಿ ಎಚ್.ಎಂ ಪ್ರಭಾವತಿ, ಕೆ.ಎಚ್.ಚಂದ್ರಶೇಖರ್ ಇದ್ದರು.
30 ರಂದು ರಾಷ್ಟ್ರೀಯ ಪ್ರತಿಭಾ ಸ್ಪರ್ಧೆ
ಹಾಸನ: ಕರ್ನಾಟಕ ಪ್ರತಿಭಾ ಆಕಾಡೆಮಿ ಚಂಪಕ ಪತ್ರಿಕೆಯ ಪ್ರಾಯೋಜಕತ್ವದೊಂದಿಗೆ ನ. 30 ರಂದು ರಾಜ್ಯಾದ್ಯಂತ 250, ಶಾಲಾ ಕಾಲೇಜಿನಲ್ಲಿ ಮೊದಲನೇ ಹಂತದ ರಾಷ್ಟ್ರೀಯ ಪ್ರತಿಭಾ ಸ್ಪರ್ಧೆ(ಸಾಮಾನ್ಯ ಜ್ಞಾನ) ಏರ್ಪಡಿಸಲಾಗಿದೆ. ರಾಷ್ಟ್ರೀಯ ಪ್ರತಿಭಾ ಸ್ಪರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ಪ್ರೋತ್ಸಾಹ ಹಾಗೂ ಪ್ರೇರಣೆ ನೀಡಿ ಅವರ ಯಶಸ್ವಿಗೆ ಕಾರಣರಾಗಿರುವ ಆದರ್ಶ ಶಿಕ್ಷಕರಿಗೆ ದಿ ಬೆಸ್ಟ್ ಟೀಚರ್ ರಾಷ್ಟ್ರೀಯ ಪ್ರಶಸ್ತಿ ಹಾಗೂ 10,000 ರು. ಬಹುಮಾನ ನೀಡಿ ಗೌರವಿಸಲಾಗುತ್ತದೆ. 1 ರಿಂದ 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪ್ರತಿಭಾ ಅಕಾಡೆಮಿ ನಂ.38, 57ನೇ ಬಿ ಕ್ರಾಸ್, 4ನೇ ಬ್ಲಾಕ್ , ರಾಜಾಜಿನಗರ, ಬೆಂಗಳೂರು-ದೂ 7760066423 ಸಂಪರ್ಕಿಸಿ.
ಆರ್‌ಟಿಐ ಸಮರ್ಪಕ ಜಾರಿಗೆ ಆಗ್ರಹ
ಹಾಸನ: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಐ)ಯನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಜಾರಿಗೊಳಿಸುವಂತೆ ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿ ಸಂಘಟನೆ (ಎಸ್‌ಐಒಐ) ಆಗ್ರಹಿಸಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ತೌಸಿಫ್ ಅಹಮದ್ ಮಾತನಾಡಿ, ರಾಜ್ಯದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿ ಮೂರು ವರ್ಷ ಕಳೆದರೂ ಸಮಸ್ಯೆಗಳು ಹಾಗೇ ಉಳಿದಿವೆ. ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಉಚಿತ ಸೀಟು ಎಂಬುದನ್ನು ಮಾತ್ರ ಪ್ರಚಾರ ಪಡಿಸಲಾಗಿದೆ. ಕಾಯ್ದೆಯ ಇತರ ಅಯಾಮಗಳನ್ನು ಹೆಚ್ಚಾಗಿ ಪ್ರಚಾರ ಮಾಡಲಿಲ್ಲ. ಸಾರ್ವಜನಿಕರಲ್ಲಿ ಆರ್‌ಟಿಇ ಎಂದರೆ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟು ಎಂಬ ಭಾವನೆ ಇದೆ. ದೂರುಗಳು ಕೂಡ ಹೆಚ್ಚಾಗಿ ಉಚಿತ ಸೀಟುಗಳಿಗೆ ಸಂಬಂಧಪಟ್ಟದಾಗಿದೆ. ಸೀಟು ನಿರಾಕರಣೆ, ಅಲ್ಪಸಂಖ್ಯಾತರ ಶಾಲೆ ಎಂದು ಸುಳ್ಳು ಮಾಹಿತಿ ನೀಡುವುದು, ಮಕ್ಕಳಿಗೆ ಮತ್ತು ಪೋಷಕರಿಗೆ ಪ್ರವೇಶ ಪರೀಕ್ಷೆ ನಡೆಸುವುದು ಹೀಗೆ ಹಲವು ದೂರುಗಳು ವರದಿಯಾಗಿವೆ. ಸೇವೆಯ ಹೆಸರಿನಲ್ಲಿ ಸರ್ಕಾರದಿಂದ ಉಚಿತ ಅಥವಾ ರಿಯಾಯಿತಿಯಲ್ಲಿ ಹಲವಾರು ಸೌಲಭ್ಯ ಪಡೆದು ಶಾಲೆ ತೆರೆಯುವ ಖಾಸಗಿ ಸಂಸ್ಥೆಗಳು, ಸಮಾಜದ ಬಡ ವರ್ಗದ ಮಕ್ಕಳಿಗೆ ಉಚಿತ ಸೀಟು ನಿರಾಕರಿಸುತ್ತವೆ. ರಾಜ್ಯ ಸರ್ಕಾರ ಪ್ರತಿ ವಿದ್ಯಾರ್ಥಿಗೆ 11,600 ನೀಡುತ್ತಿದೆ. ಆದರೆ ಸರ್ಕಾರದಿಂದ ಶುಲ್ಕವು ವಿಳಂಬವಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ ಎಂದರು.ಅಲ್ಪಸಂಖ್ಯಾತರಿಗೆ ಯಾವುದೇ ರಿಯಾಯಿತಿ ನೀಡದೆ ಅಥವಾ ಅವರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸದೆ ಕೇವಲ ಶಿಕ್ಷಣದ ವ್ಯಾಪಾರೀಕರಣ ನಡೆಸುವ ಹಲವಾರು ಶಾಲೆಗಳು ಉಚಿತ ಸೀಟುಗಳ ವಿಚಾರಕ್ಕೆ ಬಂದಾಗ ಅಲ್ಪಸಂಖ್ಯಾತರ ಶಾಲೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದೆ. ಸರ್ಕಾರ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಶೇ.75ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದೆ. ಆದರೆ ಅಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇಲ್ಲದ ಶಾಲೆಗಳು ಉಚಿತ ಸೀಟು ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದರು.ಆದ್ದರಿಂದ ಕೂಡಲೇ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಕರುಗಳ ಉಚಿತ ತಪಾಸಣಾ ಶಿಬಿರ
ಹಾಸನ: ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಕರುಗಳ ಉಚಿತ ತಪಾಸಣಾ ಶಿಬಿರವನ್ನು ಹಾಸನ ತಾಲೂಕಿನ ಎಚ್.ಮೈನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಕರುಗಳಲ್ಲಿ ಜಂತುಹುಳುಗಳ ಬಾಧೆ ಹಾಗು ವಿವಿಧ ರೋಗಗಳ ತಪಾಸಣೆಯನ್ನು ಮಾಡಿ ಔಷಧೋಪಚಾರ ಮಾಡಲಾಯಿತು. ಇದರೊಂದಿಗೆ ಕರುಗಳ ವೈಜ್ಞಾನಿಕ ಪಾಲನೆ, ಲಸಿಕೆಗಳ ಮಹತ್ವ ಮುಂತಾದ ಮಾಹಿತಿಯನ್ನುಳ್ಳ ಕರುಗಳ ತಪಾಸಣಾ ಚೀಟಿಯನ್ನು ವಿತರಿಸಿ ಸೂಕ್ತ ಸಲಹೆ ನೀಡಲಾಯಿತು. ಶಿಬಿರದ ಅಂತ್ಯಕ್ಕೆ ಸುಮಾರು 100 ಕರುಗಳ ತಪಾಸಣೆ ಮಾಡಲಾಯಿತು.ಡಾ. ಸುರೇಶ್, ಡಾ. ಮಂಜುನಾಥ, ಡಾ. ಬಾಳಪ್ಪಣಾವರ್, ಡಾ. ಚೇತನ್‌ಕುಮಾರ್, ಡಾ. ಕವಿತ, ಡಾ. ಸುಚಿತ್ರ, ಡಾ. ಶುಶಾಂತ್ ಮತ್ತು ಡಾ.ಪ್ರದೀಪ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಪಶುವೈದ್ಯಕೀಯ ವಿಭಾಗದ 42 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.