ಅಭಿವೃದ್ಧಿ ಕಾರ್ಯ ಚುರುಕುಗೊಳಿಸಿ
ಕ.ಪ್ರ.ವಾರ್ತೆ ಹಾಸನ ನ. 16
ಜಿಲ್ಲಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಿ ಪ್ರಸಕ್ತ ವರ್ಷ ಇಲಾಖೆವಾರು ನಿಗದಿಪಡಿಸಿರುವ ವಾರ್ಷಿಕ ಗುರಿ ಪೂರ್ಣಗೊಳಿಸಿ ಹಣ ವ್ಯರ್ಥವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 8 ತಿಂಗಳು ಮುಗಿದಿದ್ದು, ಮಾರ್ಚ್ನಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಚುರುಕುಗೊಳಿಸಿ ಮುಂದಿನ ಮೂರು ತಿಂಗಳಲ್ಲಿ ಸಂಪೂರ್ಣ ವಾರ್ಷಿಕ ಗುರಿ ಪೂರ್ಣಗೊಳಿಸಬೇಕಾದ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ. ಹಾಗಾಗಿ ಚುರುಕಾಗಿ ಮತ್ತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಎಂದು ಸೂಚಿಸಿದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್: ಪೂರ್ವಾನುಮತಿ ಪಡೆಯದೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಸೂಚಿಸಿದ ಅವರು, ಸಾರ್ವಜನಿಕ ಸೇವೆಯನ್ನು ಬದ್ಧತೆಯಿಂದ ನಿರ್ವಹಿಸಬೇಕೆಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಪೇಂದ್ರ ಪ್ರತಾಪ ಸಿಂಗ್, ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸದೆ ಬಾಕಿ ಉಳಿದಿರುವ ಹಾಗೂ ಈ ವರ್ಷದ ಹೊಸ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅನೇಕ ಪ್ರಮುಖ ವಿಚಾರಗಳು ಚರ್ಚೆಗೆ ಬಂದವು. ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ ಮತ್ತು ಲಕ್ಷ್ಮಣಗೌಡ ಪಾಲ್ಗೊಂಡಿದ್ದರು.
ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ಮೆರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಮೀನುಗಾರಿಕೆ ಇಲಾಖೆ ಬೇಡಿಕೆ ಆಧರಿಸಿ ಬಿತ್ತನೆ ಮೀನುಮರಿಗಳ ಉತ್ಪಾದನೆಯನ್ನು ಹೆಚ್ಚಿಸಿ ರೈತರಿಗೆ ವಿತರಿಸಬೇಕು.ಅರಣ್ಯ ಇಲಾಖೆ ಕೇವಲ ಸಿಲ್ವರ್ ಸಸಿಗಳನ್ನು ಬೆಳೆದು ವಿತರಿಸುವುದರ ಜೊತೆಗೆ ಹೆಬ್ಬೇವು, ಹಲಸು ಇತರೆ ಸಸಿಗಳನ್ನು ನೆಟ್ಟು ಬೆಳೆಸಬೇಕು. ಅರಸೀಕೆರೆ ತಾಲೂಕಿನ ಸಸ್ಯಕ್ಷೇತ್ರದಲ್ಲಿ ಬಾಕಿ ಇರುವ ಸಸಿಗಳನ್ನು ಇತರ ತಾಲೂಕುಗಳಿಗೆ ವಿತರಿಸಬೇಕು ಎಂದು ನಂಜುಂಡ ಸ್ವಾಮಿ ಮತ್ತು ಲಕ್ಷ್ಮಣಗೌಡ ಒತ್ತಾಯಿಸಿದರು.
ಮಕ್ಕಳ ಮನೆ ಕಾರ್ಯಕ್ರಮ: ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಗೊಡು ಯಶಸ್ವಿಯಾದ ಮಕ್ಕಳ ಮನೆ ಕಾರ್ಯಕ್ರಮದ ಮುಂದುವರೆಕೆಗೆ ಸರ್ಕಾರ ನೆರವು ಒದಗಿಸಬೇಕು. ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಬೇಕು ಎಂದು ನಂಜುಂಡಸ್ವಾಮಿ ಸಭೆಯಲ್ಲಿ ವಿಷಯ ಮಂಡಿಸಿದರು.
ಸರ್ಕಾರಿ ಶಾಲೆ ಶಿಕ್ಷಕರಿಗೆ ಹೆಚ್ಚನ ಹೊರೆ ಬೀಳುತ್ತಿದೆ, ಗಣತಿ, ಬಿಸಿಯೂಟ ತಯಾರಿ ಮೇಲ್ವಿಚಾರಣೆ, ಶಾಲಾ ಕಟ್ಟಡ ಕಾಮಗಾರಿಗಳ ಮೇಲ್ವಿಚಾರಣೆ, ಶಾಲೆಯಿಂದ ಟಿಸಿ ಪಡೆದು ತೆರಳಿದ ಮಕ್ಕಳ ಕಲಿಕಾ ಮುಂದುವರಿಕೆ ಪರಿಶೀಲನೆ ಹೀಗೆ ಇತರೆ ಕೆಲಸಗಳಾಗುತ್ತಿವೆ. ಬೋಧನೆಗೆ ಸಮಯ ಸಿಕ್ಕುತ್ತಿಲ್ಲ. ಇದರಿಂದ ಮಕ್ಕಳು ಪರಿತಪಿಸಬೇಕಿದೆ.ಈ ಬಗ್ಗೆ ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿ ಶಿಕ್ಷಕರಿಗೆ ಕೇವಲ ಪಾಠಮಾಡುವ ಜವಾಬ್ದಾರಿ ನೀಡಬೇಕು ಎಂದು ಲಕ್ಷ್ಮಣಗೌಡ ಆಗ್ರಹಿಸಿದರು.
ಇದೇ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚಿದಾನಂದ್ ಅವರು ಶಾಲೆ ಮತ್ತು ಅಂಗನವಾಡಿಗಳಲ್ಲಿನ ಬೋಧನಾ ವ್ಯವಸ್ಥೆ, ಮಕ್ಕಳ ಮನೆ ಕಾರ್ಯಕ್ರಮದ ವಿಸ್ತರಣೆಗೆ ಎದುರಾಗುತ್ತಿರುವ ತೊಡಕುಗಳನ್ನು ವಿವರಿಸಿದರು.
ಇದೇ ರೀತಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಜ್ಯೂನಿಯರ್ ಎಂಜಿನಿಯರ್ಗಳ ಮೆಲೂ ಬಹಳ ಒತ್ತಡವಿದೆ.ಗ್ರಾಮ ಪಂಚಾಯ್ತಿ ತಾಪಂ, ಖಾತ್ರಿ ಯೋಜನೆಗಳ ಅಂದಾಜುಪಟ್ಟಿ ತಯಾರಿಕೆ ಬಲ್ಲು ಬರೆಯುವಿಕೆ ಹಲವು ಗ್ರಾಮ ಪಂಚಾಯಿತಿಗಳ ಉಸ್ತುವಾರಿ ಹೊಣೆಗಾರಿಕೆ ಇದೆ. ಇವರ ಕೆಲಸದ ಹೊರೆಯನ್ನು ಕಡಿಮೆ ಮಾಡಬೇಕು ಎಂದು ನಂಜುಂಡಸ್ವಾಮಿ ಮತ್ತು ಲಕ್ಷ್ಮಣಗೌಡ ಅಧ್ಯಕ್ಷರ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಒಟ್ಟು 132 ರಾಸು ಬಲಿ: ಕಾಲುಬಾಯಿ ರೋಗ ಪರಿಸ್ಥಿತಿ ಬಗ್ಗೆ ಸಭೆಗೆ ಮಾಹಿತಿ ನೀಡಿದ ಪಶುಪಾಲನಾ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಜಿಲ್ಲೆಯಲ್ಲಿ ಒಟ್ಟು 132 ರಾಸುಗಳು ಈ ರೋಗಕ್ಕೆ ಬಲಿಯಾಗಿವೆ. ಇದರಲ್ಲಿ ಚನ್ನರಾಯಪಟ್ಟಣ ತಾಲೂಕಿನಲ್ಲಿ 58, ಹಾಸನ 23, ಹೊಳೆನರಸೀಪುರ 9, ಆಲೂರು 1, ಅರಕಲಗೂಡು ತಾಲೂಕಿನಲ್ಲಿ 19, ಅರಸೀಕೆರೆಯಲ್ಲಿ 10, ಬೇಲೂರು 9 ಸಕಲೇಶಪುರ ತಾಲೂಕಿನಲ್ಲಿ 3 ದನಕರುಗಳು ಸಾವಿಗೀಡಾಗಿವೆ. ಈ ಸಂಬಂಧ ಸರ್ಕಾರದಿಂದ ಪರಿಹಾರ ವಿತರಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 344 ಗ್ರಾಮಗಳಲ್ಲಿ ಕಾಲು ಬಾಯಿ ರೋಗ ಕಂಡುಬಂದಿದ್ದು 1615 ರಾಸುಗಳು ಸೊಂಕಿಗೆ ತುತ್ತಾಗಿದ್ದವು. ಇದರಲ್ಲಿ ಈಗಾಗಲೆ 592 ರಾಸುಗಳು ರೊಗದಿಂದ ಮುಕ್ತವಾಗಿವೆ. ಒಟ್ಟಾರೆ 6,93,000 ರಾಸುಗಳಿಗೆ ಅಂದರೆ ಶೇ 90 ರಷ್ಟು ದನಕರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣದ ಲಸಿಕೆ ಹಾಕಲಾಗಿದೆ ಉಳಿದ ಶೇ10 ರಷ್ಟು ಮಾಲಿಕರ ನಿರಾಸಕ್ತಿ, ಲಸಿಕೆ ಹಾಕಿಸಲು ಇರುವ ವಿರೋಧದಿಂದ ಬಾಕಿ ಉಳಿದಿವೆ ಎಂದು ಶ್ರಿನಿವಾಸ್ ಮಾಹಿತಿ ನೀಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಯೋಜನೆಗಳ ಗುರಿ, ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.ಜಿಪಂ ಉಪ ಕಾರ್ಯದರ್ಶಿ ಎಚ್.ಸಿ.ಪುಟ್ಟಸ್ವಾಮಿ, ಕೆ.ಕರಿಯಪ್ಪ ಹಾಗೂ ಮುಖ್ಯ ಯೋಜನಾಧಿಖಾರಿ ಪರಪ್ಪಸ್ವಾಮಿ ವಿವಿಧ ಯೋಜನೆಗಳ ವಿವರ ಒದಗಿಸಿದರು.