ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಹಿಂದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಸಕಲ ಸೌಲಭ್ಯ: ಆಂಜನೇಯ

Srinivasa Murthy VN
Updated On : 17 Nov 2013, 12:10 pm

ಅರಸೀಕೆರೆ: ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತ (ಅಹಿಂದ) ವರ್ಗದ ಬಡಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗ್ಗಗಳ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ತಿಳಿಸಿದರು.
ತಾಲೂಕಿನ ಟಿ ರಂಗಾಪುರದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು, ಜಿಲ್ಲಾಡಳಿತ ಹಾಸನ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಹೊಸ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಸಚಿವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳೊಂದಿಗೆ ಪೈಪೋಟಿ ಮಾಡಲು ಸಾಧ್ಯವಿಲ್ಲ. ಆದರೆ ನಮ್ಮ ಈ ಶಾಲೆಯಲ್ಲಿ ಓದಿದ ಮಕ್ಕಳು ಯಾರೊಂದಿಗೆ ಬೇಕಾದರೂ ಪೈಪೋಟಿ ನೀಡಬಲ್ಲರು. ಅಲ್ಲದೇ ಫಲಿತಾಂಶದಲ್ಲೂ ನೂರಕ್ಕೆ ನೂರರಷ್ಟು ಫಲಿತಾಂಶ ನೀಡಿ ಮೇಲುಗೈ ಸಾಧಿಸಿವೆ. ಅಸ್ಪೃಶ್ಯತೆ, ಅಸಮಾನತೆಯಿಂದ ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗೆ ಇಲ್ಲಿ ಗುಣಮಟ್ಟದ ಶಿಕ್ಷಣ ನಡೆಯುತ್ತಿದ್ದು ಇಲ್ಲಿ ಪ್ರವೇಶ ಪಡೆದ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಅವಕಾಶವಿದೆ ಎಂದ ಅವರು, ಇಂತಹ ವಸತಿ ಶಾಲೆಗಳನ್ನು ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಸುಂದರ ವಾತಾವರಣದಲ್ಲಿ ವಿದ್ಯಾರ್ಥಿಗಳಿಗೆ ಮನಸ್ಸಿಗೆ ಸಂತೋಷವನ್ನುಂಟು ಮಾಡುವಂತಹ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬುದು ತಮ್ಮ ಮನದಾಸೆಯಾಗಿದ್ದು ಆದ್ದರಿಂದಲೇ ಈ ಸ್ಥಳವನ್ನು ಆಯ್ಕೆ ಮಾಡಿ ಇಲ್ಲಿ ಮೊರಾರ್ಜಿ ವಸತಿ ಶಾಲೆ ನಿರ್ಮಾಣ ಮಾಡಲಾಯಿತು ಎಂದು ತಿಳಿಸಿದರು.
ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಜಗದೀಶ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ ಕುಂಟೆ, ಜಿಪಂ ಸದಸ್ಯ ಕೃಷ್ಣನಾಯಕ್, ಹುಚ್ಚೇಗೌಡ, ಬೆಳಗುಂಬ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ಪುರಸಭಾಧ್ಯಕ್ಷ ಮೋಹನ್‌ಕುಮಾರ್, ತಾಪಂ ಸದಸ್ಯ ಶಿವಕುಮಾರ್, ಲಕ್ಷ್ಮಣ ಇದ್ದರು.

ಯಾವ ಭಾಷೆಯಲ್ಲಾದರೂ ವ್ಯವಹರಿಸಿ,  ಕನ್ನಡದಲ್ಲಿ ಬದುಕಿ: ಡಾ. ಮಲ್ಲೇಶಗೌಡ
ಹಾಸನ: ಜಗತ್ತಿನ ಯಾವ ಭಾಷೆಯಲ್ಲಾದರೂ ವ್ಯವಹರಿಸಿ, ವಿದ್ಯಾಭ್ಯಾಸ ಮಾಡಿ, ದುಡಿಯಿರಿ, ಆದರೆ ಕನ್ನಡ ಭಾಷೆಯಲ್ಲಿ ಬದುಕಿರಿ, ಕನ್ನಡ ಸಂಸ್ಕೃಯನ್ನು ಉಸಿರಾಗಿಸಿಕೊಂಡು ಜೀವಿಸಿರಿ ಎಂದು ನಗರದ ಎವಿಕೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಮಲ್ಲೇಶಗೌಡ ಕರೆ ನೀಡಿದರು. ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮವಲ್ಲ, ನಮ್ಮ ಬದುಕು, ವ್ಯಕ್ತಿತ್ವ, ಸಂಸ್ಕೃತಿಯನ್ನು ಹಾಗೂ ಜೀವನ ಮತ್ತು ಬದುಕಿನ ಮೌಲ್ಯಗಳನ್ನು ತೆರೆದಿಡುತ್ತದೆ ಎಂದು ಹೇಳಿದರು. ಕನ್ನಡ ಕೇವಲ ಮಾತೃಭಾಷೆಯಲ್ಲ. ಇದು ನಮ್ಮೆಲ್ಲರ ಬದುಕು, ಜೀವನ ಶೈಲಿ, ಆಚಾರ-ವಿಚಾರ, ಸಂಸ್ಕಾರವಾಗಿದೆ. ಕನ್ನಡ ಕವಿಗಳ ಬಗ್ಗೆ ಮಾತನಾಡುತ್ತಾ ಜಗತ್ತಿನ ಶ್ರೇಷ್ಠ ನಾಟಕಕಾರ ಶೇಕ್ಸ್‌ಪಿಯರ್, ಡಾಂಟೆ ಹಾಗೂ ಕಾದಂಬರಿಕಾರರಾದ ಲಿಯೋ ಟಾಲ್‌ಸ್ಟಾಯ್, ಕವಿಗಳಾದ ವರ್ಡ್ಸ್‌ವರ್ತ್, ಹೋಮರ್ ಮುಂತಾದವರನ್ನು ಒಬ್ಬ ಕುವೆಂಪು ಅವರಲ್ಲಿ ಕಾಣಬಹುದು. ಹಾಗೆಯೇ ಕನ್ನಡ ಉತ್ಕೃಷ್ಟ ಭಾಷೆಯಾಗಿದ್ದು ಜಗತ್ತಿನ ಬೇರೆ ಭಾಷೆಗಳಿಗಿಂತ ಹೆಚ್ಚಿನ ವರ್ಣಗಳನ್ನು ಹೊಂದಿದೆ. ಕನ್ನಡ ಮಾಧುರ್ಯ ದೃಷ್ಟಿಯಿಂದ ಜಗತ್ತಿನಲ್ಲಿ 10ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕರಿಸಿದ್ದ ಮಾತನಾಡಿದರು. ಅಧಿಕಾರಿಗಳು, ಕನ್ನಡ ಸಂಘದ ಸಂಯೋಜಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಣವ್ ನಿರೂಪಿಸಿದರು, ಮಾನಸ ಸ್ವಾಗತಿಸಿ, ಬೀರೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement