ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಡಾನೆ ದಾಳಿ: ವ್ಯಕ್ತಿ ಸಾವು

Srinivasa Murthy VN
Updated On : 17 Nov 2013, 12:10 pm

ಕ.ಪ್ರ.ವಾರ್ತೆ ಹಾಸನ ನ. 16
ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಆತನ ಕುಟುಂಬದವರು ಕರ್ನಾಟಕ ರಕ್ಷಣ ವೇದಿಕೆ ನೇತೃತ್ವದಲ್ಲಿ ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು. ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ರಾಜೇಂದ್ರಪುರದ ರುದ್ರಯ್ಯ (55) ಕಾಡಾನೆ ದಾಳಿಯಿಂದ ಮೃತಪಟ್ಟ ದುರ್ದೈವಿ.
ರುದ್ರಯ ಬೆಳಗ್ಗೆ 6 ರಲ್ಲಿ ತಮ್ಮ ಕಾಫಿ ತೋಟಕ್ಕೆ ಹೋಗಿದ್ದು, ಆ ಸಂದರ್ಭದಲ್ಲಿ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿ ರುದ್ರಯ್ಯನನ್ನು ಸೊಂಡಿಲಿನಿಂದ ಹಿಡಿದು ಎಸೆದು, ನಂತರ ಕಾಲಿನಿಂದ ಹೊಸಕಿ ಹಾಕಿ ತೀವ್ರವಾಗಿ ಗಾಯಗೊಳಿಸಿದೆ. ಕೂಡಲೇ ರುದ್ರಯ್ಯನನ್ನು ಬಾಳ್ಳುಪೇಟೆಯ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದರೆ ಅಲ್ಲಿ ವೈದ್ಯರು ಇಲ್ಲದಿದ್ದ ಕಾರಣ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಾಗ ರುದ್ರಯ್ಯ ಸಾವನ್ನಪ್ಪಿದ್ದಾರೆ.
ರುದ್ರಯ್ಯನನ್ನು ಸಾಯಿಸಿದ ಕಾಡಾನೆಯನ್ನು ಕಂಡು ಇತರೆ ಗ್ರಾಮಸ್ಥರು ಭಯಭೀತರಾಗಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿ, ಕೂಡಲೇ ರುದ್ರಯ್ಯನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರುದ್ರಯ್ಯ ಕುಟುಂಬದಿಂದ ಪ್ರತಿಭಟನೆ: ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ರುದ್ರಯ್ಯ ಕುಟುಂಬದವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ, ಸಕಲೇಶಪುರ, ಆಲೂರು ಹಾಗೂ ಇತರೆ ಭಾಗಗಳಲ್ಲಿ ಜ್ವಲಂತ ಸಮಸ್ಯೆಯಾಗಿರುವ ಮನುಷ್ಯ ಮತ್ತು ಕಾಡಾನೆ ನಡುವೆ ನಡೆಯುತ್ತಿರುವ ಸಂಘರ್ಷವನ್ನು ತಡೆಗಟ್ಟಬೇಕು. ಈ ಭಾಗದಲ್ಲಿ ಇರುವ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಸಕಲೇಶಪುರ, ಆಲೂರು ಸೇರಿದಂತೆ ಈ ಭಾಗದಲ್ಲಿ ಸಾಕಷ್ಟು ಕಾಡಾನೆಗಳು ಜನರಿಗೆ ತೊಂದರೆ ನೀಡುವ ಮೂಲಕ ಸಾಕಷ್ಟು ಜನರ ಪ್ರಾಣವನ್ನು ತೆಗೆದಿದೆ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಜಿಲ್ಲೆಯಲ್ಲಿ ಪುಂಡಾಟ ನಡೆಸುತ್ತಿರುವ ಎಲ್ಲಾ ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಜನವರಿಯಲ್ಲಿ ಚಾಲನೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಮಲೆನಾಡು ಭಾಗದಲ್ಲಿ ಬೆಳೆನಷ್ಟ ಮತ್ತು ಪ್ರಾಣ ಹಾನಿಯಲ್ಲಿ ತೊಡಗಿರುವ 25ರಿಂದ 35 ಕಾಡಾನೆಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸುವುದಾಗಿ ಕೇವಲ ಬಾಯಿ ಮಾತಿನಲ್ಲಿ ಹೇಳಲಾಗುತ್ತಿದೆ.
ಮಲೆನಾಡು ಭಾಗದಲ್ಲಿರುವ ಕಾಡಾನೆಗಳು ಬೆಳೆನಾಶ ಮತ್ತು ಜೀವಹಾನಿಯಲ್ಲಿ ತೊಡಗಿವೆ. ಆನೆ ದಾಳಿಯಿಂದಾಗಿ ಪ್ರಾಣ ಹಾನಿ ಮತ್ತು ಆಪಾರ ಪ್ರಮಾಣದ ಭತ್ತ, ಕಾಫಿ, ಬಾಳೆ, ತೆಂಗು, ಅಡಿಕೆ ಬಾಳಾಗಿವೆ ಎಂದು ಆರೋಪಿಸಿದರು.
ಹಲವು ಬಾರಿ ಪ್ರತಿಭಟನೆ ಮತ್ತು ಒತ್ತಾಯದ ನಂತರ ಅರಣ್ಯ ಸಚಿವರು ಜಿಲ್ಲೆಗೆ ಆಗಮಿಸಿ ಜನವರಿ ಅಂತ್ಯದೊಳಗೆ ಆನೆಗಳ ಸೆರೆ ಕಾರ್ಯಾಚರಣೆ ಆರಂಭಿಸುವುದಾಗಿ ಹೇಳಿದ್ದಾರೆ. ಕಾಡಾನೆಗಳನ್ನು ಹಿಡಿಯಲು ಹೈಕೋರ್ಟ್ ಆದೇಶಿಸಿದ್ದರೂ ಸರ್ಕಾರ ವಿಳಂಬ ಮಾಡುತ್ತಿದೆ. ಇದರಿಂದ ಈ ಭಾಗದಲ್ಲಿ ಪ್ರಾಣ ಹಾನಿ ಮತ್ತು ಬೆಳೆ ನಾಶಕ್ಕೆ ಕಾರಣವಾಗಿದೆ. ಕಾಡಾನೆಗಳ ಹಿಂಡು ಗ್ರಾಮಗಳ ಸುತ್ತಮುತ್ತ ಬೀಡು ಬಿಟ್ಟಿರುವುದರಿಂದ ಓಡಾಡಲು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಅಲವತ್ತುಕೊಂಡದರು.
ಸರ್ಕಾರ ಕೇವಲ ಭರವಸೆಗಳನ್ನು ನೀಡುವ ಮೂಲಕ ಈ ಭಾಗದ ಜನರಿಗೆ ಮಂಕುಬೂದಿ ಎರಚುತ್ತಿದೆ. ಕಾಡಾನೆ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಸರ್ಕಾರ ಮಾಡುತ್ತಿಲ್ಲ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಇದು ಮಲೆನಾಡು ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ನಿರ್ಲಕ್ಷ್ಯ ಮನೋಭಾವ ಸರ್ಕಾರ ಹೀಗೆ ತಾಳಿದರೆ ಮತ್ತಷ್ಟು ಜನರು ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ದೂರಿದರು.  ಪ್ರತಿನಿತ್ಯ ಈ ಭಾಗದಲ್ಲಿ ಕಾಡಾನೆಗಳು ಯಾವ ಸಂದರ್ಭದಲ್ಲಿ ದಾಳಿ ನಡೆಸುವುದೋ ಅನ್ನೋ ಭಯದಿಂದಲೇ ಜೀವನ ಸಾಗಿಸಬೇಕಾಗಿದೆ. ಇವತ್ತು ರುದ್ರಯ್ಯ ಸಾವನ್ನಪ್ಪಿದ್ದಾರೆ. ನಾಳೆ ನಾವು ಕಾಡಾನೆ ದಾಳಿಯಿಂದ ಸಾವನ್ನಪ್ಪಬಹುದು ಅನ್ನೋ ಭೀತೀ ಈ ಭಾಗದ ಜನರಲ್ಲಿ ಆವರಿಸಿದಿದೆ ಎಂದು ಅಲವತ್ತುಕೊಂಡರು.
ಜನವರಿವರೆಗೆ ಕಾಯದೇ ಆನೆಗಳ ಸೆರೆ ಕಾರ್ಯಾಚರಣೆ ತಕ್ಷಣದಿಂದಲೇ ಕಾರ್ಯಾಚಾರಣೆ ಆರಂಭಿಸದಿದ್ದರೆ, ಇದರ  ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರುದ್ರಯ್ಯನ ಕುಟುಂಬದವರು, ಕರವೇ ಜಿಲ್ಲಾಧ್ಯಕ್ಷ ಮನುಕುಮಾರ್, ಕುಮಾರ್, ಕೃಷ್ಣಪ್ಪ ಇತರರು ಇದ್ದರು.

ಕುಟುಂಬಕ್ಕೆ ಶಾಸಕರ ಸಾಂತ್ವನ
ಸಕಲೇಶಪುರ: ತಾಲೂಕಿನ ರಾಜೇಂದ್ರಪುರ ಗ್ರಾಮಕ್ಕೆ ಶನಿವಾರ ಶಾಸಕ ಎಚ್.ಕೆ. ಕುಮಾರಸ್ವಾಮಿ ಭೇಟಿ ನೀಡಿ, ಕಾಡಾನೆ ದಾಳಿಗೆ ಸಾವನ್ನಪ್ಪಿದ ವ್ಯಕ್ತಿಯ ಕುಟಂಬಕ್ಕೆ ಸಾಂತ್ವನ ಹೇಳಿದರು. ಹಿಂದೆ ಆನೆ ದಾಳಿಯಿಂದ ಪ್ರಾಣ ತೆತ್ತ ಸಿದ್ದಯ್ಯ ಅವರ ಮನೆಗೂಗೆ ಭೇಟಿ ನೀಡಿದ ಶಾಸಕರು, ಕುಟುಂಬಕ್ಕೆ ಸರ್ಕಾರದ ವತಿಯಿಂದ ತಕ್ಷಣ 2 ಲಕ್ಷ ರು.ಗಳ ಪರಿಹಾರ ಧನದ ಚೆಕ್ ಅನ್ನು ಮೃತರ ಪತ್ನಿ ಮಲ್ಲಮ್ಮ ಅವರಿಗೆ ನೀಡಿ, ಉಳಿದ ಮೊತ್ತವನ್ನು ಶೀಘ್ರದಲ್ಲಿಯೇ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮೃತನ ಕುಟುಂಬಕ್ಕೆ ಆಶ್ರಯ ಮನೆ ಮತ್ತು  ಕುಟುಂಬದಲ್ಲಿ ಒಬ್ಬರಿಗೆ ಅರಣ್ಯ ಇಲಾಖೆಯಲ್ಲಿ ವಾಚರ್ ಕೆಲಸವನ್ನು ನೀಡಬೇಕೆಂದು ಅವರು ಸೂಚನೆ ನೀಡಿದರು. ಸಾಮಾಜಿಕ ಅರಣ್ಯ ಯೋಜನೆಯಡಿ ನೆಡಲಾದ ಗಿಡ ಮರಗಳಿಂದ ಗ್ರಾಮದ ಪಕ್ಕದಲ್ಲಿ  ಕಾಡಿನ ವಾತಾವರಣ ಹೆಚ್ಚಿ ಆನೆಗಳ ದಾಳಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದು  ಇದನ್ನು ತೆರವುಗೊಳಿಸಬೇಕು ಎಂದು ಒತಾಯಿಸಿದರು. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಶಾಸಕ ಕುಮಾರ ಸ್ವಾಮಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement