ಲಾರಿ ಮಾಲೀಕರು, ಚಾಲಕರ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ನ.16
ಜಿಪಿಎಸ್ ಅಳವಡಿಸಿರುವ ಲಾರಿಗಳಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಮರಳು ಸಾಗಿಸಲು ಪರವಾನಗಿ ನೀಡದಿರುವುದನ್ನು ಖಂಡಿಸಿ ಜಿಲ್ಲಾ ಮರಳು ಲಾರಿ ಮಾಲೀಕರ ಸಂಘದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಕೂಡಲೇ ಪರವಾನಗಿ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಹಾಸನ, ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲೂಕುಗಳಲ್ಲಿ ಜಿಪಿಎಸ್ ಪಡೆದ ಸುಮಾರು 386 ಲಾರಿಗಳಿದ್ದು, ಈ ಲಾರಿಗಳಿಗೆ ಜಿಲ್ಲಾಡಳಿತವೇ ಜಿಪಿಎಸ್ ಅಳವಡಿಸಿ ಮರಳು ಹೊರತುಪಡಿಸಿ ಬೇರೆ ಯಾವುದನ್ನು ಸಾಗಣೆ ಮಾಡದಂತೆ ನಿಬಂಧನೆ ಮಾಡಿದ್ದಾರೆ. ಅದಕ್ಕೆ ಲಾರಿ ಮಾಲೀಕರು ಸಹ ಒಪ್ಪಿಕೊಂಡು ಲಾರಿಯ ಬಾಡಿ ಕಟ್ಮಾಡಿಸಿ ಜಿಪಿಎಸ್ ಅಳವಡಿಸಿಕೊಂಡಿದ್ದೇವೆ.
ವಿಪರ್ಯಾಸ ಅಂದ್ರೆ ಕಳೆದ ನಾಲ್ಕೈದು ತಿಂಗಳಿನಿಂದ ಮರಳನ್ನು ಸಾಗಿಸಲು ಜಿಲ್ಲಾಡಳಿತ ಪರವಾನಗಿ ನೀಡುತ್ತಿಲ್ಲ. ಈಗ ಜಿಲ್ಲಾಡಳಿತ ಗುರುತು ಮಾಡಿರುವ ಜಾಗದಲ್ಲಿ ಹೊಳೆಯ ನೀರು ಕಡಿಮೆಯಾಗಿ ಮರಳು ಶೇಖರಣೆ ಆಗಿದೆ. ಆದರೂ ಮರಳನ್ನು ತುಂಬಲು ಜಿಲ್ಲಾಡಳಿತ ಆದೇಶ ಮಾಡಿಲ್ಲ. ಇದರಿಂದ ಲಾರಿ ಮಾಲೀಕರಿಗೆ ತುಂಬ ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈವರೆಗೂ ನಾವು ಜನತಾ ಮನೆಗಳಿಗೆ ಮರಳನ್ನು ಸಾಗಿಸಿದ್ದೇವೆ. ಆದರೆ ಸಾರ್ವಜನಿಕರಿಗೆ ಮರಳು ಸಿಗದಂತಾಗಿದೆ. ಖಾಸಗಿಯವರಿಗೆ ಮರಳು ಸಿಗದಂತಾಗಿರುವುದರಿಂದ ಲಾರಿ ಮಾಲೀಕರು ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮರಳು ಸರಿಯಾಗಿ ಸಿಗದ ಕಾರಣ ಲಾರಿ ಮಾಲೀಕರಿಗೆ ತೊಂದರೆ ಉಂಟಾಗಿದೆ. ಜಿಲ್ಲಾಡಳಿತ ಹೇಳಿದಂತೆ ನಾವು ಜಿಪಿಎಸ್ ಅಳವಡಿಸಿಕೊಂಡಿದ್ದರು ಸಹ ಮರಳಿನ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಹಾಗೇ ಬೇಲೂರಿನಲ್ಲಿ ಶೇಖರಣೆ ಮಾಡಿರುವ ಮರಳು ಸುಮಾರು 2 ಸಾವಿರ ಲಾರಿ ಲೋಡ್ನಷ್ಟಿದ್ದು, ಅದನ್ನು ತುಂಬಲು ಅನುಮತಿ ನೀಡುತ್ತಿಲ್ಲ. ಆದ್ದರಿಂದ ಕೂಡಲೇ ಶೇಖರಣೆಯಾಗಿರುವ ಮರಳನ್ನು ಸಾಗಿಸಲು ಪರವಾನಗಿ ನೀಡಬೇಕು. ಹೊಳೆಯಲ್ಲಿ ನೀರು ಕಡಿಮೆ ಆಗಿದ್ದು, ಬೇಕಾದಷ್ಟು ಮರಳು ಲಭ್ಯತೆ ಇರುವುದರಿಂದ ಕೂಡಲೇ ಕಾನೂನು ಪ್ರಕಾರದಂತೆ ಮರಳನ್ನು ಸಾಗಣೆ ಮಾಡಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಕಳೆದ ನಾಲ್ಕೈದು ತಿಂಗಳಿನಿಂದ ಪರವಾನಗಿ ನೀಡದ ಕಾರಣ ಲಾರಿ ಮಾಲೀಕರು ಹಾಗೂ ಚಾಲಕರು, ಕ್ಲೀನರ್ಗಳು ಜೀವನ ನಡೆಸಲು ತುಂಬಾ ಕಷ್ಟವಾಗಿದೆ. ಲಾರಿ ಖರೀದಿಗಾಗಿ ಮಾಡಿದ ಸಾಲವನ್ನು ವಾಪಸ್ ಪಾವತಿಸಲು ಸಾಧ್ಯವಾಗದ ಕಾರಣ ಲಾರಿಗಳನ್ನು ಫೈನಾನ್ಸ್ನವರು ಲಾರಿಗಳನ್ನು ಮುಟ್ಟುಗೋಲು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲಾರಿ ಮಾಲೀಕರು ಅಲವತ್ತುಕೊಂಡರು.
ಶುಕ್ರವಾರ ಹಾಸನ ನಗರ ಸೇರಿದಂತೆ ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಲಾರಿಗಳಲ್ಲಿ ಮರಳನ್ನು ತುಂಬಿಕೊಂಡು ನಿಂತಿದ್ದ ಸಂದರ್ಭದಲ್ಲಿ ಹಾಸನದ ಉಪವಿಭಾಗಾಧಿಕಾರಿ ಶರತ್, ತಹಸೀಲ್ದಾರ್ ಮಂಜುನಾಥ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರನ್ ಸೇರಿದಂತೆ ಇತರೆ ಅಧಿಕಾರಿಗಳು ದಾಳಿ ನಡೆಸಿ ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಹಾಸನ ಸೇರಿದಂತೆ ಚನ್ನರಾಯಪಟ್ಟಣ, ಆಲೂರು ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಲಾರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಜಿಪಿಎಸ್ ಅಳವಡಿಸಿಕೊಂಡು ಲಾರಿಗಳಲ್ಲಿ ಮರಳನ್ನು ಸಾಗಿಸಲು ಪರವಾನಗಿ ನೀಡದ ಕಾರಣ ಸಾಕಷ್ಟು ತೊಂದರೆ ಉಂಟಾಗಿದೆ. ಅಧಿಕಾರಿಗಳು ಲಾರಿಯನ್ನು ವಶಪಡಿಸಿಕೊಂಡಿರುವುದಕ್ಕೆ 20 ರಿಂದ 30 ಸಾವಿರ ರು.ಗಳ ದಂಡವನ್ನು ವಿಧಿಸುತ್ತಾರೆ. ಇದರಿಂದ ಲಾರಿ ಮಾಲೀಕರು, ಚಾಲಕರ ಸ್ಥಿತಿ ಚಿಂತಾಜನಕವಾಗಿದೆ ಎಂದರು. ಆದ್ದರಿಂದ ಕೂಡಲೇ ಶೇಖಕರಣೆಯಾಗಿರುವ ಮರಳನ್ನು ಸಾಗಿಸಲು ಪರವಾನಗಿ ನೀಡಬೇಕು ಎಂದು ಆಗ್ರಸಿದರು.
ಸಂಘದ ಜಿಲ್ಲಾಧ್ಯಕ್ಷ ಬಾನು ಪ್ರಕಾಶ್, ನಿರ್ದೇಶಕ ಮಂಜುನಾಥ್, ರಘು, ಅಣ್ಣರಾಜಪ್ಪ, ಗೋಪಾಲಸ್ವಾಮಿ, ಮಂಜುನಾಥ್, ರವಿ, ಶಿವು, ಪ್ರಸಾದ್, ಕುಮಾರ್, ಪ್ರವೀಣಕುಮಾರ್, ಸುರೇಶ್, ನವೀನ್, ಕಿರಣಕುಮಾರ್, ರಾಜು, ಸಿದ್ದರಾಜು, ಪುರುಷೋತ್ತಮ್, ರಾಜಣ್ಣ ಹಾಗೂ ಇತರರು ಇದ್ದರು.