ಸಹಕಾರಿ ಸಂಸ್ಥೆಗಳು ಸದೃಢಗೊಂಡರೆ ಮಾತ್ರ ಬಡವರಿಗೆ ಸುಲಭದಲ್ಲಿ ಸಾಲ: ದೇವೇಗೌಡ
ಕ.ಪ್ರ.ವಾರ್ತೆ ಹೊಳೆನರಸೀಪುರ ನ.16
ಸಹಕಾರಿ ಸಂಸ್ಥೆಗಳು ಆರ್ಥಿಕವಾಗಿ ಸದೃಢಗೊಂಡರೆ ಮಾತ್ರ ಬಡವರಿಗೆ ಸಾಲ ಸಿಗಲು ಸಾಧ್ಯವಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಹಾಸನ ಜಿಲ್ಲಾ ಸಹಕಾರಿ ಒಕ್ಕೂಟ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಆರ್ಥಿಕ ಅಬಲರ ಸೇರ್ಪಡೆ ಹಾಗೂ ಸುಸ್ಥಿರ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾಸನದ ಹಾಲು ಒಕ್ಕೂಟ ಈ ಹಿಂದೆ ನಷ್ಟದ ಹಾದಿಯಲ್ಲಿತ್ತು. ಆದರೆ ರೇವಣ್ಣ ಅಧ್ಯಕ್ಷರಾದ ಮೇಲೆ ಇದ್ದ ಹದಿಮೂರು ಕೋಟಿ ರು. ಸಾಲ ತೀರಿಸಿದ್ದಲ್ಲದೆ ಸುಮಾರು ಸಾವಿರಾರು ಕೋಟಿ ಆಸ್ತಿಯನ್ನು ಗಳಿಸಲು ಸಾದ್ಯವಾಯಿತು ಎಂದರು.
ಸಹಕಾರಿ ಸಂಸ್ಥೆಗಳ ಮೂಲಕ ಮಹಿಳೆಯರಿಗೆ ತಮ್ಮದೇ ಆದ ಸಂಘಗಳನ್ನು ಕಟ್ಟಿಕೊಂಡು ತಮ್ಮ ಅನುಭವವನ್ನು ಹಂಚಿಕೊಂಡಿದ್ದರ ಫಲದಿಂದಲೇ ಇಂದು ಬಹುತೇಕ ಮಹಿಳಾ ಸಂಘಗಳು ಆರ್ಥಿಕವಾಗಿ ಸಬಲವಾಗಲು ಸಾಧ್ಯವಾಯಿತು ಎಂದು ಹೇಳಿದರು.
ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಮಾತನಾಡಿ ಜಿಲ್ಲೆಯಲ್ಲಿನ ಸಹಕಾರ ರಂಗ ನಷ್ಟದಲ್ಲಿದ್ದ ಅವಧಿಯಲ್ಲಿ ದೇವೇಗೌಡರು ಪ್ರಧಾನಿ ಆಗಿದ್ದರು. ಅಂದು ಅವರು ತಂದ ಪೈಲೆಟ್ ಕಾರ್ಯಕ್ರಮದ ಮೂಲಕ ಅವರು ನೀಡಿದ ಎರಡು ಕೋಟಿ ಇಂದು ನೂರಾರು ಕೋಟಿಗಳಾಗಿ ಪರಿವರ್ತನೆ ಆಗಿದ್ದರ ಫಲದಿಂದ ಉತ್ತಮ ಸ್ಥಿತಿ ತಲುಪಲು ಸಾದ್ಯವಾಯಿತೆಂದರು. ಶಾಸಕ ರೇವಣ್ಣ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದರಿಂದಲೆ ಪ್ರಸ್ತುತ ಚನ್ನರಾಯಪಟ್ಟಣದ ಸಮೀಪ ನೂರೈವತ್ತು ಕೋಟಿ ರು. ವೆಚ್ಚದಲ್ಲಿ ಹಾಲಿನ ಪೌಡರ್ ಕಾರ್ಖಾನೆ ಬರಲು ಸಾಧ್ಯವಾಯಿತು. ಈ ಕಾರ್ಖಾನೆಯಿಂದ ಮೂರು ಜಿಲ್ಲೆಗಳಾದ ತುಮಕೂರು, ಮೈಸೂರು, ಚಿಕ್ಕಮಗಳೂರು ಹಾಸನ ಹಾಲು ಒಕ್ಕೂಟಗಳಲ್ಲಿ ಶೇಖರಣೆಯಾಗುವ ಅಧಿಕ ಹಾಲಿನಿಂದ ಪೌಡರ್ ತಯಾರಿಸಿ ಅಧಿಕ ಹಣ ಗಳಿಸಲು ದಾರಿಯಾಗಿದೆ ಎಂದು ಹೇಳಿದರು.
ಶಾಸಕ ರೇವಣ್ಣ ಮಾತನಾಡಿ, ಆರ್ಥಿಕವಾಗಿ ಅಬಲರನ್ನು ಸಹ ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಯೋಜನೆ ಜಾರಿಗೆ ಬಂದಲ್ಲಿ ಸಮಾಜದಲ್ಲಿ ಉತ್ತಮ ಸ್ಥಾನ ಪಡೆದು ಬೇರೆಲ್ಲ ಸಹಕಾರಿ ಸಂಘಗಳಂತೆ ಇರಲು ಸಾಧ್ಯವೆಂದು ನುಡಿದರು.
ಇದೇ ಸಂದರ್ಭದಲ್ಲಿ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸಿದ ವಾಸವಾಂಬ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಕೆ.ಶ್ರೀಧರ್ ಶಾಖಾ ವ್ಯವಸ್ಥಾಪಕ ಎಸ್.ಆರ್.ಮೂರ್ತಿ ಹಾಗೂ ವಿವಿಧ ಸಂಘಗಳ ಅಧ್ಯಕ್ಷ ಕಾರ್ಯದರ್ಶಿಗಳನ್ನು ದೇವೇಗೌಡ ಅವರು ಗೌರವಿಸಿ ಸನ್ಮಾನಿಸಿದರು.
ಸಹಕಾರಿ ಸಂಘದ ಹಾಗೂ ಹೋಗುಗಳ ಬಗ್ಗೆ ನಿರ್ದೇಶಕ ಕೆ.ಜಯಪ್ರಕಾಶ್, ಬಿ.ಜಿ.ತಿಮ್ಮೇಗೌಡ, ಗೋಪಾಲಯ್ಯ ಮಾತನಾಡಿದರು. ಜಿಪಂ ಸದಸ್ಯ ದೇವೇಗೌಡ, ಎಚ್.ಕೆ.ಸತೀಶ್, ಎಸ್.ಎ.ರಘು, ಕೆ.ಶ್ರೀಧರ್, ಎಚ್.ಎ.ಕಾಂತರಾಜು ಇದ್ದರು.