ಐದು ಹೊಸ ಸ್ನಾತಕೋತ್ತರ ವಿಭಾಗಗಳು
ಕ.ಪ್ರ.ವಾರ್ತೆ ಮೈಸೂರು ನ. 18
ಮುಂದಿನ ಶೈಕ್ಷಣಿಕ ವರ್ಷದಿಂದ ಐದು ಹೊಸ ಸ್ನಾತಕೋತ್ತರ ವಿಭಾಗಗಳನ್ನು ಆರಂಭಿಸಲು ಮೈಸೂರು ವಿಶ್ವವಿದ್ಯಾಲಯ ತೀರ್ಮಾನಿಸಿದೆ.
ಕ್ರಾಫರ್ಡ್ ಭವನದಲ್ಲಿ ಶನಿವಾರ ನಡೆದ ಶಿಕ್ಷಣ ಮಂಡಳಿಯ ಸಭೆಯಲ್ಲಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಈ ವಿಷಯ ತಿಳಿಸಿದರು.
ಸಾವಯವ ರಾಸಾಯನಶಾಸ್ತ್ರ, ಮಾಲಿಕ್ಯೂಲರ್ ಸಸ್ಯಶಾಸ್ತ್ರ, ಜೆನಿಟಿಕ್ಸ್ ಮತ್ತು ಜಿನೋಮಿಕ್ಸ್, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಮಾದರಿಯಲ್ಲಿ ಯುನಿವರ್ಸಿಟಿ ಆಫ್ ಮೈಸೂರು ಸ್ಕೂಲ್ ಆಫ್ ಲಾ, ಸಾರ್ವಜನಿಕ ಆಡಳಿತ- ಇವು ಐದು ನೂತನ ಸ್ನಾತಕೋತ್ತರ ವಿಭಾಗಗಳಾಗಿರುತ್ತವೆ.
ಈ ವಿಭಾಗಗಳನ್ನು ಆರಂಭಿಸಲು ಮೂಲ ಸೌಕರ್ಯಗಳಿರುತ್ತವೆ. ಅಗತ್ಯವಿರುವ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುವುದು. ನೂತನ ವಿಭಾಗಗಳ ಸ್ಥಾಪನೆ ಸಂಬಂಧ ನಿಯಮಾವಳಿಗಳನ್ನು ರೂಪಿಸಿ, ಒಪ್ಪಿಗೆಗಾಗಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದರು.
ಸಂಪನ್ಮೂಲ ಕ್ರೋಡೀಕರಣದ ದೃಷ್ಟಿಯಿಂದ ಅಂಚೆ ಮತ್ತು ತೆರಪಿನ ಶಿಕ್ಷಣವನ್ನು ಪುನಾರಂಭಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಮೈಸೂರು ವಿವಿಯ ಸಿಬ್ಬಂದಿಯ ವೇತನ ಮತ್ತು ಪಿಂಚಣಿಗೆ 140 ಕೋಟಿ ಬೇಕು. ಆದರೆ ಸರ್ಕಾರ 60- 70 ಕೋಟಿ ಮಾತ್ರ ನೀಡುತ್ತಿದೆ. ಹೀಗಾಗಿ ಸಂಪನ್ಮೂಲ ಕ್ರೋಡೀಕರಣ ಅನಿವಾರ್ಯ ಎಂದು ಅವರು ಹೇಳಿದರು.
ಕೆಂಬ್ರಿಡ್ಜ್ ಹಾಗೂ ಎಂಐಟಿಯ ಪ್ರಾಧ್ಯಾಪಕರು ಮೈಸೂರು ವಿವಿಯಲ್ಲಿ ಬೋಧನೆಗೆ ಬರಲಿದ್ದಾರೆ ಎಂದು ಪ್ರೊ. ರಂಗಪ್ಪ ತಿಳಿಸಿದರು. 2016ರಲ್ಲಿ ಮೈಸೂರು ವಿವಿಯ ಶತಮಾನೋತ್ಸವವನ್ನು ಆಚರಿಸಲಾಗುವುದು. ಈ ಸಂಬಂಧ ಉಪ ಸಮಿತಿಗಳನ್ನು ರಚಿಸಲಾಗುವುದು ಎಂದರು.
ಎಂ.ಫಿಲ್ ಕೋರ್ಸ್ಗಳಿಗೆ ಏಕರೂಪದ ನಿಯಮಾವಳಿ: ಎಂ.ಫಿಲ್ ಕೋರ್ಸ್ಗಳಿಗೆ ಏಕರೂಪದ ನಿಯಮಾವಳಿ ರೂಪಿಸಲು ನಿರ್ಧರಿಸಲಾಯಿತು. ಯುಜಿಸಿ ನಿಯಮಾವಳಿಗಳ ಪ್ರಕಾರ ಪಿಎಚ್.ಡಿ ಹಾಗೂ ಎಂ.ಫಿಲ್ ನಿಯಮಾವಳಿಗಳು ಇರುತ್ತವೆ. ಇದನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಉಲ್ಲಂಘಿಸಿದರೆ ಮುಂದೆ ನಮ್ಮ ಅಭ್ಯರ್ಥಿಗಳಿಗೆ ಉದ್ಯೋಗವೇ ಸಿಗುವುದಿಲ್ಲ ಎಂದು ಅವರು ಹೇಳಿದರು.
ಹೆಚ್ಚುವರಿ ಪ್ರವೇಶಾತಿ: ಸಂಯೋಜಿತ ಸರ್ಕಾರಿ ಮತ್ತು ಖಾಸಗಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳಿಗೆ 2013-14ನೇ ಸಾಲಿಗೆ ಮಾತ್ರ ಹೆಚ್ಚುವರಿ ಪ್ರವೇಶಾತಿ ನೀಡಲು ತೀರ್ಮಾನಿಸಲಾಯಿತು.
ಮಂಡ್ಯದ ಸರ್ಕಾರಿ ಸ್ವಾಯತ್ತ ಕಾಲೇಜು, ಮೈಸೂರಿನ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಸ್ವಾಯತ್ತ ಕಾಲೇಜು, ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಸಂತ ಫಿಲೋಮಿನಾ ಕಾಲೇಜುಗಳ ಪುನರ್ ವಿಮರ್ಶನಾ ವರದಿಯನ್ನು ಒಪ್ಪಲಾಯಿತು.
ಹಾಸನ ಜಿಲ್ಲೆ ಹೊಳೆನರಸೀಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಎಂ.ಕಾಂ, ಎಂ.ಎ- ಅರ್ಥಶಾಸ್ತ್ರ, ಪಡುವಲಹಿಪ್ಪೆಯ ಎಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಎಂಎಸ್ಡಬ್ಲ್ಯೂ, ಎಂ.ಎ- ಇತಿಹಾಸ ಕೋರ್ಸ್ಗಳಿಗೆ ಹೊಸದಾಗಿ ಸಂಯೋಜನೆ ನೀಡಲು, ಟಿ. ನರಸೀಪುರ ತಾಲೂಕು ಭೈರಾಪುರದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಸಮ್ಮತಿಸಲಾಯಿತು.
ವಿವಿಯ ಅಧೀನ ಕಾಲೇಜುಗಳಾದ ಮಹಾರಾಜ, ಯುವರಾಜ, ಸಂಜೆ ಕಾಲೇಜು ಹಾಗೂ ಲಲಿತಕಲಾ ಕಾಲೇಜಿನಲ್ಲಿ ಸಿಎಎಸ್ ಬಡ್ತಿಗೆ ಪ್ರಾಧ್ಯಾಪಕ ಹುದ್ದೆ ಸೃಜಿಸಲು ಒಪ್ಪಲಾಯಿತು.
ನಗದು ಬಹುಮಾನ ದತ್ತಿ ಸ್ಥಾಪನೆ: ಪ್ರೊ. ಪಂಡಿತಾರಾಧ್ಯ ಅವರು ಪ್ರೊ. ಜಿ.ಎಚ್. ನಾಯಕ ಹಾಗೂ ಮೀರನಾಯಕ ಅವರ ಹೆಸರಿನಲ್ಲಿ ನಗದು ಬಹುಮಾನ ದತ್ತಿ ಸ್ಥಾಪಿಸಲು ಆನುಮೋದನೆ ನೀಡಲಾಯಿತು.
ಸ್ನಾತಕೋತ್ತರ ಕೋರ್ಸ್ಗಳು: ಬೆಂಗಳೂರಿನ ಸಿಂಟಿಲ್ಲ ಅಕಾಡೆಮಿ ಫಾಲ್ ಅಪ್ಲೈಡ್ ಸೈನ್ಸಸ್ ಹಾಗೂ ಮೈಸೂರು ವಿವಿ ಸಹಯೋಗದಲ್ಲಿ ಕ್ಯಾನ್ಸರ್ ಬಯೋಲಾಜಿಯಲ್ಲಿ ಎಂ.ಎಸ್ಸಿ, ಫಾರ್ಮಾಸ್ಯುಟಿಕಲ್ ನಿರ್ವಹಣೆಯಲ್ಲಿ ಎಂಬಿಎ, ಕೆವಲಿಯರ್ ಅನಿಮೇಷನ್ಸ್ ಮತ್ತು ಟೆಕ್ನಾಲಜಿ ಸಂಸ್ಥೆ ಬಿ.ಎಸ್ಸಿ- ಅನಿಮೇಷನ್, ಬಿಎಫ್ಎ-ಅನಿಮೇಷನ್ ಆರಂಭಿಸಲು ಒಪ್ಪಿಗೆ ನೀಡಲಾಯಿತು.
ಬ್ರಿಡ್ಜ್ ಕೋರ್ಸ್: ಸ್ನಾತಕೋತ್ತರ ಪದವಿ ಕೋರ್ಸ್ನಲ್ಲಿ ಒಂದು ವರ್ಷದ ಬ್ರಿಡ್ಜ್ ಕೋರ್ಸ್ ಆರಂಭಿಸಲು, ಯೋಜನೆ, ಉಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿ ಪುನಾರಚಿಸಲು, ಸ್ನಾತಕೋತ್ತರ ಪದವಿಯ ಮ್ಯಾಕಪ್-ಡ್ರಾಪ್ನಲ್ಲಿ ಕೆಲವೊಂದು ಮಾರ್ಪಾಟು ಮಾಡಲು ಒಪ್ಪಿಗೆ ನೀಡಲಾಯಿತು.
ಆಯವ್ಯಯ ಅಂದಾಜುಗಳ ಅಗತ್ಯ ವೆಚ್ಚ ಮರು ಹೊಂದಾಣಿಕೆ, ವಾರ್ಷಿಕ ವರದಿ, ಲೆಕ್ಕಪತ್ರ, ತನಿಖಾ ವರದಿಗಳ ಬಗ್ಗೆ ಚರ್ಚಿಸಲಾಯಿತು. ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕೆರಿಯರ್ ಓರಿಯೆಂಟೆಡ್ ಕೋರ್ಸ್ ಆರಂಭಿಸಲು, ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಬಿ.ಎಸ್ಸಿ.ಇಡಿ, ಬಿ.ಎ.ಇಡಿ ಮತ್ತು ಎಂ.ಎಸ್ಸಿ.ಇಡಿ ಅನ್ವಯವಾಗುವಂತೆ ಸ್ಕೀಂ ಮುಂದುವರಿಸಲು ತೀರ್ಮಾನಿಸಲಾಯಿತು.
ಕುಲಸಚಿವ ಪ್ರೊ. ಸಿ. ಬಸವರಾಜು, ಪರೀಕ್ಷಾಂಗ ಕುಲಸಚಿವ ಪ್ರೊ. ಡಿ. ಶ್ರೀಜಯದೇವರಾಜ ಅರಸ್, ಹಣಕಾಸು ಅಧಿಕಾರಿ ಪ್ರೊ. ಎಂ. ಚಂದ್ರಕುಮಾರ್, ಪ್ರೊ. ನಾಗಭೂಷಣ್, ಪ್ರೊ. ರವಿ, ಪ್ರೊ. ಎನ್. ಉಷಾರಾಣಿ, ಪ್ರೊ. ಲಿಂಗರಾಜ ಗಾಂಧಿ, ಪ್ರೊ. ಸುರೇಶ್, ಪ್ರೊ. ಯಶೋದರ, ಶಾಸಕರಾದ ಕೆ.ಎಸ್. ಪುಟ್ಟಣ್ಣಯ್ಯ, ಎಚ್.ಕೆ. ಕುಮಾರಸ್ವಾಮಿ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಸಾವಯವ ರಾಸಾಯನಶಾಸ್ತ್ರ, ಮಾಲಿಕ್ಯೂಲರ್ ಸಸ್ಯಶಾಸ್ತ್ರ, ಜೆನಿಟಿಕ್ಸ್ ಮತ್ತು ಜಿನೋಮಿಕ್ಸ್, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಮಾದರಿಯಲ್ಲಿ ಯುನಿವರ್ಸಿಟಿ ಆಫ್ ಮೈಸೂರು ಸ್ಕೂಲ್ ಆಫ್ ಲಾ, ಸಾರ್ವಜನಿಕ ಆಡಳಿತ- ಇವು ಐದು ನೂತನ ಸ್ನಾತಕೋತ್ತರ ವಿಭಾಗಗಳಾಗಿರುತ್ತವೆ.
ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ.