ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತಮಿಳುನಾಡಲ್ಲಿ ಕನ್ನಡಿಗರ ಜಾತ್ರೆ ವೈಭವ

Srinivasa Murthy VN
Updated On : 19 Nov 2013, 1:56 am

-ಎನ್. ನಾಗೇಂದ್ರಸ್ವಾಮಿ
ಗೇರುಮಾಳಂ (ತಮಿಳುನಾಡು)
ಕೊಳ್ಳೇಗಾಲ ತಾಲೂಕಿನ ಗಡಿಯಂಚಿನ ಗೇರುಮಾಳಂನಲ್ಲಿ ನ.14ರಿಂದ ಪ್ರಾರಂಭವಾದ ಜಾತ್ರೆ ಅಂಗವಾಗಿ ಸೋಮವಾರ ಮಧ್ಯಾಹ್ನ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ತಮಿಳುನಾಡಿನ ಗೇರುಮಾಳಂ ಜಾತ್ರೆಗೆ ಕರ್ನಾಟಕದ ಅರ್ಧನಾರೀಪುರ, ಹೊಸದೊಡ್ಡಿ, ಹೊಸಪೋಡು, ಒಡೆಯರಪಾಳ್ಯ, ಪಿಜಿಪಾಳ್ಯ, ಕೊಳ್ಳೇಗಾಲ, ಹನೂರು, ಮಹದೇಶ್ವರಬೆಟ್ಟ, ಸೇಬಿನಕೋಬೆ, ಜಡೇಸ್ವಾಮಿ ದೊಡ್ಡಿ, ಹಿರಿಯಂಬಲ, ಬಸವನಗುಡಿ, ಜೀರಿಗೆಗದ್ದೆ, ಲೊಕ್ಕನಹಳ್ಳಿ, ಯಳಂದೂರು, ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಕನ್ನಡಿಗರ ದಂಡೇ ಆಗಮಿಸುತ್ತದೆ. ನೆರೆಯ ತಮಿಳುನಾಡಿನ ತಲುದಿ, ಸತ್ಯಮಂಗಲ ಸತ್ತಿ, ಗರಿಕೆಕಂಡಿ ಸೇರಿದಂತೆ ಹಲವು ಗ್ರಾಮಗಳಿಂದಲೂ ಜನಜಾತ್ರೆ ನೆರೆಯುತ್ತದೆ.
ಭಕ್ತರು ಜಡೇರುದ್ರ ಕುಂಬೇಶ್ವರ ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. 6 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ 5ನೇ ದಿನ ಜರುಗುವ ರಥೋತ್ಸವಕ್ಕೆ ಹಣ್ಣು ಜವನ ಎಸೆದು ಪುನೀತರಾದರು.  
ಭಕ್ತರು ಕಾಣಿಕೆ ನೀಡಿ ರಶೀದಿ ಪಡೆದ ಬಗ್ಗೆಯೂ ರಥೋತ್ಸವದ ದಿನ ಮೈಕ್‌ನಲ್ಲಿ ಕನ್ನಡ ಹಾಗೂ ತಮಿಳಿನಲ್ಲಿ  ಪ್ರಚಾರ ಮಾಡಲಾಯಿತು. ಕನ್ನಡಿಗರೇ ಕೂಡಿ ತಮಿಳುನಾಡಿನಲ್ಲಿ ಆಚರಿಸುವ ಹಬ್ಬದ ಸಡಗರ ಎಂಬ ಖ್ಯಾತಿ ಈ ಜಾತ್ರೆಗಿದೆ.
ತೇರು ಸಂಚರಿಸುತ್ತಿದ್ದಂತೆ ಯುವಕರ ಕುಣಿತ, ಭಕ್ತಾಧಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ರಥೋತ್ಸವದಲ್ಲಿ  ಗೇರುಮಾಳಂ ಗ್ರಾಪಂ ಅಧ್ಯಕ್ಷೆ ಶಾರದಮ್ಮ ಕೊಂಗವೀರೆಗೌಡ, ತಮಿಳುನಾಡಿನ ಸತ್ಯಮಂಗಲ ವೃತ್ತ ನಿರೀಕ್ಷಕ ತಂಗವೇಲು, ಮೆಟ್ಟುಪಾಳ್ಯಂನ ದಾನಿಗಳಾದ ಆರ್ಮುಗಂ, ಬೈಲೂರು ಅರಣ್ಯ ರಕ್ಷಕ ಮಹೇಂದ್ರ, ಹೊಸದೊಡ್ಡಿ ಕುಮಾರ, ಪಿಜಿಪಾಳ್ಯ ಮಹದೇವಸ್ವಾಮಿ, ಗ್ರಾಪಂ ಸದಸ್ಯ ನಂಜಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವಿಜೃಂಭಣೆಯ ಹುಲಿವಾಹನೋತ್ಸವ: ಬೆಳಗ್ಗೆ ಹುಲಿವಾಹನವನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಿಸಿ ಹರಕೆ ಸಲ್ಲಿಸಲು ನೂರಾರು ಭಕ್ತಾಧಿಗಳು ಪಾಲ್ಗೊಂಡರು. ನಂದಿಗೆ ಪೂಜೆ ಸಲ್ಲಿಸಿ ನಂದಿಧ್ವಜ, ವಾದ್ಯ ಮೇಳದೊಂದಿಗೆ ಹುಲಿವಾಹನ ಉತ್ಸವ ಜರುಗಿತು. ಮೆರಣಿಗೆಯುದ್ದಕ್ಕೂ ಕಲಾತಂಡಗಳ ಹಾಗೂ ಯುವಕರ ಕುಣಿತ ಗಮನ ಸೆಳೆಯಿತು.
ವ್ಯಾಪಾರವೂ ಜೋರು: ಗೇರುಮಾಳಂ ದೇವಾಲಯ ಸುತ್ತಮುತ್ತ ನೂರಾರು ತಾತ್ಕಾಲಿಕ ಮಳಿಗೆ ಅಂಗಡಿಗಳನ್ನು ನಿರ್ಮಿಸಲಾಗಿತ್ತು. ಗ್ರಾಮಾಂತರ ಪ್ರದೇಶದ ಹಳ್ಳಿಗರೇ ಹೆಚ್ಚಾಗಿ ಆಗಮಿಸಿದ್ದರಿಂದ ಅಗತ್ಯ ತಿಂಡಿ ತಿನಿಸು ಹಾಗೂ ಮನೆಗೆ  ಉಪಯುಕ್ತ ವಸ್ತುಗಳನ್ನು ಮಾರಾಟಕ್ಕಿಡಲಾಗಿತ್ತು. ಪುರಿ ಹಾಗೂ ಮಿಠಾಯಿ ಖರೀದಿ ಭರ್ಜರಿಯಾಗಿ ನಡೆಯಿತು.  

22 ಕನ್ನಡ ಶಾಲೆಗೆ ರಜೆ!

ತಮಿಳುನಾಡಿನ ಗೇರುಮಾಳಂ ಜಾತ್ರೆಯ ರಥೋತ್ಸವಕ್ಕೆ ಮಕ್ಕಳು ಪೋಷಕರ ಜೊತೆ ಭಾಗವಹಿಸಲಿ ಎಂಬ ಉದ್ದೇಶದಿಂದ ಕನ್ನಡದ 22 ಶಾಲೆಗೆ ರಜೆ ಘೋಷಿಸಲಾಗಿತ್ತು.    
ಪ್ರತಿವರ್ಷದಂತೆ ಈ ಬಾರಿಯೂ ಒಡೆಯರಪಾಳ್ಯ ಕ್ಲಸ್ಟರ್ ವ್ಯಾಪ್ತಿಯ ಗುಂಡಿಮಾಳ, ಹಿರಿಯಂಬಲ, ಬೈಲೂರು,  ಹುಣಸೆಪಾಳ್ಯ, ಹುತ್ತೂರು, ಗುರುಮಲ್ಲಪ್ಪನದೊಡ್ಡಿ ಸೇರಿದಂತೆ ವಿವಿಧೆಡೆ 22 ಶಾಲೆಗಳಿಗೆ ರಜೆ ನೀಡಲಾಗಿತ್ತು.  ಶಾಲೆ ನಡೆಸಿದರೆ ಮಕ್ಕಳು ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಕಾರಣಕ್ಕೆ ಇಲಾಖೆ ಈ ನಿರ್ಣಯ ಕೈಗೊಳ್ಳುತ್ತಿದೆ.
ಜಾತ್ರೆಗೆ ಒಡೆಯರಪಾಳ್ಯ ವ್ಯಾಪ್ತಿಯ ಗ್ರಾಮಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಶಿಕ್ಷಣ ಇಲಾಖೆ ರಥೋತ್ಸವದ ದಿನ ರಜೆ ನೀಡಿ, ಇತರೆ ಸರ್ಕಾರಿ ರಜಾ ದಿನಗಳಲ್ಲಿ ಶಾಲೆ ನಡೆಸುವ ನಿರ್ಣಯ ಕೈಗೊಳ್ಳುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಮಹದೇವಸ್ವಾಮಿ ಕನ್ನಡಪ್ರಭಕ್ಕೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement